ಬಿಜೆಪಿ ಹೈಕಮಾಂಡ್ ಸೂಚನೆ ಬಳಿಕವೂ ಆರದ ಬಂಡಾಯ? ಶಿಸ್ತು ಸಮಿತಿ ಸಭೆ ಬಳಿಕವೂ ಯತ್ನಾಳ್ ಟೀಮ್ ಮೀಟಿಂಗ್
ಬಿಜೆಪಿ ಬಂಡಾಯ ಶಾಸಕರು ದೆಹಲಿಯಲ್ಲಿ ಶಿಸ್ತು ಸಮಿತಿಯನ್ನು ಭೇಟಿಯಾಗಿ ಬಂದ ನಂತರವೂ ಪಕ್ಷದೊಳಗಳ ಸಂಘರ್ಷದ ಕಿಚ್ಚು ಆರುವಂತೆ ಕಾಣಿಸುತ್ತಿಲ್ಲ. ಒಂದೆಡೆ ಶಿಸ್ತು ಸಮಿತಿಯ ಭೇಟಿಯ ಬೆನ್ನಲ್ಲೇ ದೆಹಲಿಯಲ್ಲಿ ಯತ್ನಾಳ್ ಬಣ ಮತ್ತೆ ಸಭೆ ನಡೆಸಿದ್ದರೆ, ಅಲ್ಲಿಂದ ಬಂದ ಕೂಡಲೇ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಲ್ಲಿನ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.
ನವದೆಹಲಿ, ಡಿಸೆಂಬರ್ 6: ಶಿಸ್ತು ನೋಟಿಸ್ ಕೊಟ್ಟರೂ ಲೆಕ್ಕಕ್ಕೇ ಇಲ್ಲ, ದೆಹಲಿಗೆ ಕರೆಸಿ ಕಿವಿಹಿಂಡಿದರೂ ಕ್ಯಾರೇ ಇಲ್ಲ ಎನ್ನುವಂತಾಗಿದೆ ಬಿಜೆಪಿ ಕರ್ನಾಟಕ ನಾಯಕರ ಸ್ಥಿತಿ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಬಂಡಾಯದ ಬೆಂಕಿ ತಣಿಯುವಂತೆ ಕಾಣುತ್ತಿಲ್ಲ. ಬುಧವಾರವಷ್ಟೇ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದ ಯತ್ನಾಳ್ ತಂಡ ಮತ್ತೆ ದೆಹಲಿಯಲ್ಲೇ ಸಭೆ ಸೇರಿದೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದೆ. ಆದರೆ, ಸಭೆ ಮಾಡಿದ್ದು ವಕ್ಫ್ ಬಗ್ಗೆ ಮಾತ್ರ ಎಂದಿದೆ.
ವಿಜಯೇಂದ್ರಗೆ ಹುಡುಗಾಟಿಕೆ ಬುದ್ಧಿಯಿದೆ: ಜಾರಕಿಹೊಳಿ
ಏತನ್ಮಧ್ಯೆ, ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ಮುಂದುವರಿದಿದೆ. ವಿಜಯೇಂದ್ರಗೆ ಹುಡುಗಾಟಿಕೆ ಬುದ್ಧಿಯಿದೆ, ಸಣ್ಣ ಹುಡುಗ ಇದ್ದಾನೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ಲಾಯಕ್ ಇಲ್ಲ. ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೇಳಿದ್ದೇವೆ. ಯಡಿಯೂರಪ್ಪನವರು ಹೋರಾಟ ಮಾಡಿ ಆ ಸ್ಥಾನಕ್ಕೆ ತಲುಪಿದ್ದರು. ಆದರೆ ಯಡಿಯೂರಪ್ಪ ಮಗನಾಗಿ ಆ ಸ್ಥಾನಕ್ಕೆ ತಲುಪಿ ವ್ಯರ್ಥವಾಗುತ್ತಿದ್ದಾರೆ. ಈಗ ಅಧ್ಯಕ್ಷ ಸ್ಥಾನ ತ್ಯಜಿಸಿ, ಅನುಭವ ಆದಮೇಲೆ ಅಧ್ಯಕ್ಷರಾದರೆ ಸೂಕ್ತ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಯತ್ನಾಳ್ ಬಣಕ್ಕೆ ಕೌಂಟರ್: ಹೋರಾಟಕ್ಕಿಳಿದ ವಿಜಯೇಂದ್ರ ಬಣ
ವಕ್ಫ್ ವಿರುದ್ಧ ಯತ್ನಾಳ್ ಹೋರಾಟಕ್ಕೆ ಕೌಂಟರ್ ಕೊಡಲು ಮುಂದಾಗಿರುವ ವಿಜಯೇಂದ್ರ ಬಣ ಗುರುವಾರ ರಾಯಚೂರು, ಯಾದಗಿರಿಯಲ್ಲಿ ಅಭಿಯಾನ ನಡೆಸಿತು. ರೈತರ ಸಂಕಷ್ಟವನ್ನ ಆಲಿಸಿತು. ಬಳಿಕ ಮಾತನಾಡಿದ ವಿಜಯೇಂದ್ರ, ನಾಲಗೆ ಸಂಸ್ಕೃತಿ ತೋರಿಸುತ್ತದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.
ಇದನ್ನೂ ಓದಿ: ಯತ್ನಾಳ್ ಆಯ್ತು ಈಗ ದಿಲ್ಲಿಯಿಂದ ಬರುತ್ತಲ್ಲೇ ವಿಜಯೇಂದ್ರ ವಿರುದ್ಧ ಜಾರಕಿಹೊಳಿ ವಾಗ್ದಾಳಿ
ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದ ನಂತರ ಯತ್ನಾಳ್ ತುಸು ಮೌನವಾದಂತೆ ಕಾಣುತ್ತಿದ್ದರೂ, ವಾಸ್ತವ ಹಾಗಿಲ್ಲ ಎಂದು ಸಭೆ ನಡೆಸಿ ಸಾಬೀತು ಮಾಡಿದ್ದಾರೆ. ಇದರ ಮಧ್ಯೆ ಶನಿವಾರ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದೇನಾಗುತ್ತದೆಯೋ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ