ಬೆಳಗಾವಿ, ಅಕ್ಟೋಬರ್ 06: ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಂದಿರಾ ಕ್ಯಾಂಟೀನ್ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ (Byrathi Suresh) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ಗಾಗಿ ಇಲಾಖೆಗೆ 240 ಕೋಟಿ ರೂ. ಹಣ ನೀಡಿದ್ದಾರೆ. ಬೆಳಗಾವಿಯಲ್ಲೂ ಕೂಡ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಹೊಸದಾಗಿ ಇಂದಿರಾ ಕ್ಯಾಂಟೀನ್ಗಳ ಪುನಶ್ಚೇತನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಬೇಕಂತಲೇ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡದೆ ನಿರ್ವಹಣೆ ಮಾಡದೆ ಹಾಳು ಮಾಡಿದ್ದರು. ಜನರಿಗೆ ಯಾವ ಊಟ ಇಷ್ಟ ಆಗುತ್ತೆ ಅದನ್ನ ಕೊಡುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ದರ 5 ರೂ ಹೆಚ್ಚಿಗೆ ಮಾಡಿದ್ದು ಅದನ್ನ ಸರ್ಕಾರ ಭರಿಸುತ್ತದೆ. ಜನರಿಗೆ ಹೆಚ್ಚಿಗೆ ಒಂದು ರೂಪಾಯಿ ಕೊಡಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ತಂಡ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಹಿಂದೂಗಳಾಗಲಿ, ಮುಸ್ಲಿಮರಿಗಾಗಲಿ ಗಲಾಟೆ ಆಗೋದು ಬೇಕಿಲ್ಲ. ಎಲ್ಲಾ ಸಮುದಾಯದಲ್ಲೂ ಕೂಡ ಪುಂಡ ಪೋಕರಿಗಳು ಇರುತ್ತಾರೆ. ಗಲಾಟೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮವಾಗುತ್ತೆ. ಇದರಲ್ಲಿ ರಾಜಕೀಯ ಪಕ್ಷಗಳು ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಸಿಪಿ ಯೊಗೇಶ್ವರ್ ಅವಕಾಶವಾದಿ ರಾಜಕಾರಣಿ ಎಂದ ರಮೇಶ್ ಬಾಬು, ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಮೊನ್ನೆ ತಾನೇ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದಾರೆ ಅಂತ ಹೇಳಿದ್ದರು. ಆದರೆ ಈಗ ಹೇಳಿದ್ದಾರೆ. ಅವರು ದಿನ ಒಂದೊಂದು ಹೇಳಿಕೆ ನೀಡುತ್ತಾರೆ ನನಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.