ಸಿಎಂ ಸಿದ್ದರಾಮಯ್ಯ ಡಿನ್ನರ್ ಪಾರ್ಟಿಯಲ್ಲಿ ಏನೆಲ್ಲ ಚರ್ಚೆ ಆಯ್ತು? ಇಲ್ಲಿದೆ ಇನ್‌ಸೈಡ್ ಮಾಹಿತಿ
Siddaramaiah Dinner Party ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊತ್ತಿಸಿದ ಲಿಂಗಾಯತ ಅಧಿಕಾರಿಗಳ ಕಿಡಿ, ಕಾಂಗ್ರೆಸ್ ಶಾಸಕರ ಬಹಿರಂಗ ಅಸಮಧಾನ ಇವೆಲ್ಲವುಗಳ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೆಲ ಸಚಿವರಿಗೆ ಭೋಜನ ಕೂಟ ಏರ್ಪಡಿಸಿದ್ದು, ಈ ಡಿನ್ನರ್ ಪಾರ್ಟಿಯಲ್ಲಿ ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ. ಹಾಗಾದ್ರೆ, ಡಿನ್ನರ್ ಪಾರ್ಟಿಯಲ್ಲಿ ಏನೆಲ್ಲ ಚರ್ಚೆಗಳಾಗಿವೆ? ಎನ್ನುವ ಇನ್‌ಸೈಡ್ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು, (ಅಕ್ಟೋಬರ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah ) ಅವರು ನಿನ್ನೆ(ಅ,05) ರಾತ್ರಿ ತಮ್ಮ ಕಾವೇರಿ ನಿವಾಸದಲ್ಲಿ ಸಚಿವರಿಗೆ (Cabinet Ministers) ಭೋಜನ ಕೂಟ (Dinner PartY) ಏರ್ಪಡಿಸಿದ್ದರು. ಸರ್ಕಾರದಲ್ಲಿ ಸಮನ್ವಯತೆ ಸಾಧಿಸುವುದು ಉದ್ದೇಶ ಇದರದಾಗಿತ್ತು. ಈ ಮೂಲಕ ಸಚಿವರ ವಿಶ್ವಾಸ ಗಿಟ್ಟಿಸಲು ಸಿಎಂ ಮುಂದಾಗಿದ್ದಾರೆ. ಇದರ ಜೊತೆಗೆ ಸಚಿವರ ಹೇಳಿಕೆಗಳ ಬಗ್ಗೆಯೂ ಈ ಡಿನ್ನರ್ ಮೀಟಿಂಗ್ ನಲ್ಲಿ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಸಚಿವರು-ಶಾಸಕರ ಮಧ್ಯೆ ಸಮನ್ವಯತೆಗೆ ಕಸರತ್ತು
ಶಾಸಕರು ಮತ್ತು ಸಚಿವರೊಂದಿಗೆ ಸಮನ್ವಯತೆಯ ಕೊರತೆ ಎದುರಾಗಿದೆ. ಶಾಸಕರುಗಳು ಸಚಿವರು ತಮಗೆ ಸ್ಪಂದಿಸದೇ ಇರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ಕಿಡಿ ಹೊತ್ತಿಸಿದ್ದಾರೆ. ಹಿರಿಯರು ಮತ್ತು ಸಚಿವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗುತ್ತಿದೆ. ಹೀಗಾಗಿ ಎಚ್ಚೆತ್ತ ಸಿದ್ದರಾಮಯ್ಯ ಸಚಿವರಿಗೆ ಸಲಹೆ-ಸೂಚನೆಗಳನ್ನು ನೀಡಲು ತಮ್ಮ ನಿವಾಸ ಕಾವೇರಿಯಲ್ಲಿ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರ. ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುವುದರ ಜತೆ, ಡಿನ್ನರ್ ನೆಪದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವ ಉದ್ದೇಶ ಅವರದಾಗಿತ್ತು.
ಇದನ್ನೂ ಓದಿ: ದಾವಣಗೆರೆಯಲ್ಲೇ ತುಂಬಿ ತುಳುಕುತ್ತಿದ್ದಾರೆ ಲಿಂಗಾಯತ ಅಧಿಕಾರಿಗಳು: ಪಟ್ಟಿ ವೈರಲ್
ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಡಿನ್ನರ್ ಮೀಟಿಂಗ್‌ನಲ್ಲಿ ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಶರಣ ಪ್ರಕಾಶ್ ಪಾಟೀಲ್, ಬೈರತಿ ಸುರೇಶ್, ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ಸೇರಿದಂತೆ ಎಲ್ಲ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವ ಪ್ರಿಯಾಂಕ್ ಖರ್ಗೆ, ಜಿ. ಪರಮೇಶ್ವರ್ ವಿದೇಶಿ ಪ್ರವಾಸ ಹಿನ್ನೆಲೆ ಸಭೆಗೆ ಗೈರಾಗಿದ್ದರು. ಇನ್ನು ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಸಚಿವರ ಡಿನ್ನರ್ ಪಾರ್ಟಿಯಲ್ಲಿ ಏನೆಲ್ಲಾ ವಿಚಾರಗಳು ಚರ್ಚೆಯಾಯ್ತು. ಇನ್‌ಸೈಡ್ ಮಾಹಿತಿ ಏನು ಎನ್ನುವುದನ್ನು ಈ ಕೆಳಗಿನಂತಿದೆ.
ಡಿನ್ನರ್ ಪಾರ್ಟಿಯ ಇನ್‌ಸೈಡ್ ಮಾಹಿತಿ
ಅನುದಾನ ಮತ್ತು ವರ್ಗಾವಣೆ ವಿಚಾರದಲ್ಲಿ ಶಾಸಕರಿಂದ ಬೇಸರ ವ್ಯಕ್ತವಾಗುತ್ತಿದೆ. ಮೂರು ಡಿಸಿಎಂ ಹುದ್ದೆಗಳ ರಚನೆಯ ಕುರಿತಂತೆ ಸಚಿವ ರಾಜಣ್ಣ ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಸರ್ಕಾರದಲ್ಲಿ ಗೊಂದಲ ಏರ್ಪಟ್ಟಿದೆ. ಸಚಿವರು ಶಾಸಕರ ಅಹವಾಲಿಗೆ ಸ್ಪಂದಿಸುತ್ತಿಲ್ಲ ಎಂಬ ಶಾಸಕರ ಅಸಮಾಧಾನದ ಬಗ್ಗೆ ಡಿನ್ನರ್ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ಅಲ್ಲದೇ ಮದ್ಯದಂಗಡಿ ಹೆಚ್ಚಿಸುವ ಪ್ರಸ್ತಾಪಕ್ಕೆ ಬಿ.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ, ಗ್ಯಾರಂಟಿಯಿಂದಾಗಿ ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ ಎಂಬ ಶಾಸಕ ಷಡಕ್ಷರಿ ಹೇಳಿಕೆ, ಕೆಲ ಸಚಿವರ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಸೇರಿದಂತೆ ಭೋಜನ ಕೂಟದಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಚರ್ಚಿಸಲಾಯ್ತು. ಇದರ ಜೊತೆಗೆ, ಶಾಮನೂರು ಶಿವಶಂಕರಪ್ಪನವರ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಹೇಳಿಕೆ, ಲೋಕಸಭೆ ಚುನಾವಣೆಯ ತಯಾರಿ, ಜಾತಿಗಣತಿ ವರದಿ ಬಿಡುಗಡೆ ಮತ್ತು ವಿವಿಧ ಇಲಾಖಾ ಕಾರ್ಯ ವೈಖರಿಗಳ ಬಗ್ಗೆ ಸಿಎಂ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಸಿಎಂ ಡಿನ್ನರ್ ಮೀಟಿಂಗ್‌ನಲ್ಲಿ ಪಕ್ಷ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಡ್ಯಾಮಜ್ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:37 am, Fri, 6 October 23