ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿರುವ ಕರ್ನಾಟಕದ ಪ್ರಮುಖ ಪಟ್ಟಣ ನಿಪ್ಪಾಣಿಯಲ್ಲಿ (Nippani) ಕರ್ನಾಟಕ ಪೊಲೀಸ್ ಇಲಾಖೆಯ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (ADGP Alok Kumar) ನೇತೃತ್ವದಲ್ಲಿ ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಮಂಗಳವಾರ (ನ 29) ನಡೆಯಿತು. ಪಟ್ಟಣದ ಸರ್ಕೀಟ್ ಹೌಸ್ನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅಲೋಕ್ ಕುಮಾರ್, ಕಳೆದ ವಾರ ಕರ್ನಾಟಕ ಸಾರಿಗೆ ನಿಗಮದ ಬಸ್ಗಳ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಿ ಮಸಿ ಬಳಿಯಲಾಗಿತ್ತು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯಬಾರದು ಎಂದು ತಾಕೀತು ಮಾಡಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ನಾಳೆ (ನ 30) ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅಶಾಂತಿಗೆ ಇದು ಕಾರಣವಾಗಬಾರದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಭೆ ನಡೆಸಲಾಯಿತು ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್ ಒಂದು ವೇಳೆ ನಾಳೆಯೇ ತೀರ್ಪು ಪ್ರಕಟಿಸಿದರೂ ಏನೂ ಗಲಾಟೆ ಆಗಬಾರದು. ಇದಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಮೂರು ಕಡೆ ಜಂಟಿ ಚೆಕ್ಪೋಸ್ಟ್ ಮಾಡಿದ್ದಾರೆ. ಪ್ರತಿದಿನ 400ಕ್ಕೂ ಹೆಚ್ಚು ಕರ್ನಾಟಕದ ಬಸ್ಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ, ಅಲ್ಲಿಂದ 175ಕ್ಕೂ ಹೆಚ್ಚು ಬಸ್ಗಳು ಕರ್ನಾಟಕಕ್ಕೆ ಬರುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ ಮತ್ತು ಜನರಿಗೆ, ಇಲ್ಲಿ ಅವರ ವಾಹನಗಳಿಗೆ ಮತ್ತು ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನವು ಸುಸೂತ್ರವಾಗಿ ನಡೆಯಬೇಕು. ಇದು ಚುನಾವಣೆ ವರ್ಷವಾಗಿರುವ ಕಾರಣ ಕಿಡಗೇಡಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ ಎಂದರು.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಯಾವುದೇ ಚಟುವಟಿಕೆಗೆ ನಾವು ಅವಕಾಶ ಕೊಡುವುದಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ ನಮ್ಮ ಅಭ್ಯಂತರ ಇರುವುದಿಲ್ಲ. ಬೆಳಗಾವಿ ಗಡಿಯಲ್ಲಿ 21 ಚೆಕ್ಪೋಸ್ಟ್ಗಳಿವೆ. ಗಡಿ ಭಾಗದ ಎಲ್ಲ ಎಸ್‌ಪಿಗಳಿಗೆ ಎಚ್ಚರಿಕೆಯಿಂದ ಇರುವಂತೆ ನಿರ್ದೇಶನ ನೀಡಿದ್ದೇವೆ. ಮಹಾರಾಷ್ಟ್ರ ಗಡಿಯಲ್ಲಿ ಇಂದು ಸಂಜೆಯಿಂದಲೇ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ ಎಂದರು.
ಸಭೆಯಲ್ಲಿ ಉತ್ತರ ವಲಯ ಐಜಿಪಿ, ಬೆಳಗಾವಿ ಎಸ್ಪಿ, ನಗರ ಪೊಲೀಸ್ ಆಯುಕ್ತ, ಡಿಸಿಪಿಗಳು, ಡಿವೈಎಸ್ಪಿಗಳು ಭಾಗವಹಿಸಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ ಐಜಿಪಿ, ಕೊಲ್ಹಾಪುರ ಎಸ್ಪಿ, ಸಾಂಗ್ಲಿ ಎಸ್ಪಿ, ಸಿಂಧುದುರ್ಗ ಎಸ್ಪಿ, ಸಾವಂತವಾಡಿಯ ಡಿಎಸ್ಪಿಗಳು ಭಾಗವಹಿಸಿದ್ದರು.
ಬಿಜೆಪಿ ನಾಯಕರ ಜತೆ ರೌಡಿ ಸುನಿಲ್ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಅಲೋಕ್ ಕುಮಾರ್ ನಿರಾಕರಿಸಿದರು. ಬೆಂಗಳೂರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಷ್ಟೇ ಹೇಳಿದರು.
Published On - 12:31 pm, Tue, 29 November 22