ಗಡಿ ವಿಚಾರದಲ್ಲಿ ಎಂಇಎಸ್ ಮತ್ತೆ ಕ್ಯಾತೆ: ಬೆಳಗಾವಿಗೆ ಬರುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ
ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ MES ಪತ್ರ ಬರೆದಿದೆ.
ಬೆಳಗಾವಿ: ಗಡಿ ವಿಚಾರದಲ್ಲಿ ನಾಡದ್ರೋಹಿ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದೆ. ಈ ಮೂಲಕ ಗಡಿವಿವಾದದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ. ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ MES ಪತ್ರ ಬರೆದಿದೆ.
ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಣೆ ನಡೆಯಲಿದೆ. ಈ ವೇಳೆ ಇಬ್ಬರನ್ನು ಮಹಾರಾಷ್ಟ್ರ ಸರ್ಕಾರ ಸಮನ್ವಯ ಸಚಿವರನ್ನಾಗಿ ನೇಮಿಸಿದೆ. ಗಡಿವಿವಾದ ಅಲ್ಲದೇ ಇತರ ಸಮಸ್ಯೆಗಳ ಬಗ್ಗೆ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸುವುದು ಅಗತ್ಯವಿದೆ. ಹೀಗಾಗಿ ಬೆಳಗಾವಿಗೆ ಇಬ್ಬರು ಸಚಿವರು ಆಗಮಿಸಿ ಚರ್ಚಿಸಿ ಎಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದು ನಾಡದ್ರೋಹಿ ಎಂಇಎಸ್ ಮನವಿ ಮಾಡಿದೆ.
ಗಡಿ ಭಾಗದ ರಾಜಕಾರಣಿಗಳ ಇನ್ನೊಂದು ಮುಖ ಅನಾವರಣ
ನಾಡದ್ರೋಹಿ ಎಂಇಎಸ್ ಹಾಗೂ ಮರಾಠಿ ಪುಂಡರು ಗಡಿ ಭಾಗದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಿ ಮಸಿ ಬಳಿದು ದುರ್ವರ್ತನೆ ತೋರಿದ್ದಾರೆ. ಇಷ್ಟೆಲ್ಲಾ ಮಾಡಿದರು ಗಡಿ ಭಾಗದ ರಾಜಕಾರಣಿಗಳು ತುಟಿ ಬಿಚ್ಚದೆ ಕುಳಿತಿದ್ದಾರೆ. ಆದ್ರೆ ಈಗ ಮರಾಠಿಗರ ಓಲೈಕೆಗೆ ವೋಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ.
ಕನ್ನಡದ ಅಸ್ಮಿತೆಗೆ ದಕ್ಕೆ ಬಂದಾಗ ಸುಮ್ಮನಿದ್ದ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಮರಾಠಿ ಭವನ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಅನುದಾನ ನೀಡೋದಾಗಿ ಘೋಷಣೆ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಆರು ವರ್ಷ ಸೇವೆ ಮಾಡುವ ಅವಕಾಶ ಕೊಟ್ಟಿದೀರಿ. ಮರಾಠಿ ಭವನ ಕಟ್ಟಲು ಸಹಾಯ ಮಾಡ್ತೀನಿ ಉದ್ಘಾಟನೆಗೆ ಬೇಕಾದ್ರೇ ಕೊಲ್ಲಾಪುರ ಮಹಾರಾಜರನ್ನ ಕರೆಯಿಸಿ. ನಾವು ಕೂಡ ಬರ್ತೇವಿ ನೀವೂ ಇರೀ ಎಂದು ಪ್ರಕಾಶ್ ಹುಕ್ಕೇರಿ ಭಾಷಣ ಮಾಡಿದ್ದಾರೆ. ಗಡಿಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಅವಶ್ಯಕತೆ ಇದೆ. ಇಲ್ಲಿ ಯಾವ ಭಾಷೆ ಸಮಸ್ಯೆ ಇಲ್ಲಾ ಎಲ್ಲರೂ ಅಣ್ತಮ್ಮಂದಿರ ಹಾಗೇ ಇದ್ದೇವೆ ಎಂದು ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭರಪೂರ ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಕೆಜಿಎಫ್’ ಚಿತ್ರವನ್ನು ಹಾಡಿ ಹೊಗಳಿದ ರಾಣಾ ದಗ್ಗುಬಾಟಿ
ಈ ಹಿಂದೆ ಕೊಲ್ಹಾಪುರದ ಕನ್ನೇರಿ ಮಠದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ನೀವು ಕನ್ನಡ ಭವನ ಕಟ್ಟಿದರೆ ಅದರ ಬೋರ್ಡ್ ಕಿತ್ತೊಗೆಯುತ್ತೇವೆ ಎಂದ್ದ ಸ್ಥಳೀಯ ಮರಾಠಿ ಪುಂಡರು ಎಚ್ಚರಿಕೆ ಕೊಟ್ಟಿದ್ದರು. ಆದ್ರೆ ಈಗ ಕರ್ನಾಟಕದ ಗಡಿಯಲ್ಲಿ ಮರಾಠಿ ಭವನ ನಿರ್ಮಾಣ ಮಾಡಲು ಪ್ರಕಾಶ್ ಹುಕ್ಕೇರಿ ಮುಂದಾಗಿದ್ದಾರೆ. ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಮರಾಠಿ ಪ್ರೇಮಕ್ಕೆ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಸಭೆ
ಇನ್ನು ಮಹಾರಾಷ್ಟ್ರದಲ್ಲಿ KSRTC ಬಸ್ಗಳ ಮೇಲೆ ಕಲ್ಲು ತೂರಾಟ ಪ್ರಕರಣ ಹಾಗೂ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಬಗ್ಗೆ ನ.30 ‘ಸುಪ್ರೀಂ’ನಲ್ಲಿ ವಿಚಾರಣೆ ಹಿನ್ನೆಲೆ ಇಂದು ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ. ರಾಜ್ಯ ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಸಭೆಯಲ್ಲಿ 2 ರಾಜ್ಯಗಳ ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚೆ ಆಗಲಿದೆ. ಸಭೆಯಲ್ಲಿ ಉತ್ತರ ವಲಯ ಐಜಿಪಿ, ಬೆಳಗಾವಿ ಎಸ್ಪಿ, ನಗರ ಪೊಲೀಸ್ ಆಯುಕ್ತ, ಡಿಸಿಪಿಗಳು, ಡಿವೈಎಸ್ಪಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ಸಭೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳು, ಮಹಾರಾಷ್ಟ್ರದ ಕೊಲ್ಹಾಪುರ ಐಜಿಪಿ, ಕೊಲ್ಹಾಪುರ ಎಸ್ಪಿ, ಸಾಂಗ್ಲಿ ಎಸ್ಪಿ, ಸಿಂಧದುರ್ಗ ಎಸ್ಪಿ, ಡಿಎಸ್ಪಿಗಳು ಭಾಗಿಯಾಗಲಿದ್ದಾರೆ.