ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಎಡಿಜಿಪಿ ಅಲೋಕ್ ಕುಮಾರ್ ನಡೆಸಿದ ಸಭೆಯಲ್ಲಿ ಸಾಂಗ್ಲಿ, ಕೊಲ್ಹಾಪುರ ಎಸ್​ಪಿ ಭಾಗಿ

TV9kannada Web Team

TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2022 | 12:32 PM

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ನಾಳೆ (ನ 30) ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ. ಅಶಾಂತಿಗೆ ಇದು ಕಾರಣವಾಗಬಾರದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಭೆ ನಡೆಸಲಾಯಿತು ಎಂದು ಹೇಳಿದರು.

ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಎಡಿಜಿಪಿ ಅಲೋಕ್ ಕುಮಾರ್ ನಡೆಸಿದ ಸಭೆಯಲ್ಲಿ ಸಾಂಗ್ಲಿ, ಕೊಲ್ಹಾಪುರ ಎಸ್​ಪಿ ಭಾಗಿ
Alok Kumar, ADGP


ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿರುವ ಕರ್ನಾಟಕದ ಪ್ರಮುಖ ಪಟ್ಟಣ ನಿಪ್ಪಾಣಿಯಲ್ಲಿ (Nippani) ಕರ್ನಾಟಕ ಪೊಲೀಸ್ ಇಲಾಖೆಯ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್​ ಕುಮಾರ್ (ADGP Alok Kumar) ನೇತೃತ್ವದಲ್ಲಿ ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಮಂಗಳವಾರ (ನ 29) ನಡೆಯಿತು. ಪಟ್ಟಣದ ಸರ್ಕೀಟ್​ ಹೌಸ್​ನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅಲೋಕ್ ಕುಮಾರ್, ಕಳೆದ ವಾರ ಕರ್ನಾಟಕ ಸಾರಿಗೆ ನಿಗಮದ ಬಸ್​ಗಳ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಿ ಮಸಿ ಬಳಿಯಲಾಗಿತ್ತು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯಬಾರದು ಎಂದು ತಾಕೀತು ಮಾಡಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ನಾಳೆ (ನ 30) ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ. ಅಶಾಂತಿಗೆ ಇದು ಕಾರಣವಾಗಬಾರದು ಎನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸಭೆ ನಡೆಸಲಾಯಿತು ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್​ ಒಂದು ವೇಳೆ ನಾಳೆಯೇ ತೀರ್ಪು ಪ್ರಕಟಿಸಿದರೂ ಏನೂ ಗಲಾಟೆ ಆಗಬಾರದು. ಇದಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಮೂರು ಕಡೆ ಜಂಟಿ ಚೆಕ್​ಪೋಸ್ಟ್ ಮಾಡಿದ್ದಾರೆ. ಪ್ರತಿದಿನ 400ಕ್ಕೂ ಹೆಚ್ಚು ಕರ್ನಾಟಕದ ಬಸ್​ಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ, ಅಲ್ಲಿಂದ 175ಕ್ಕೂ ಹೆಚ್ಚು ಬಸ್​ಗಳು ಕರ್ನಾಟಕಕ್ಕೆ ಬರುತ್ತವೆ. ಅಲ್ಲಿ ನಮ್ಮ ವಾಹನಗಳಿಗೆ ಮತ್ತು ಜನರಿಗೆ, ಇಲ್ಲಿ ಅವರ ವಾಹನಗಳಿಗೆ ಮತ್ತು ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.

ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನವು ಸುಸೂತ್ರವಾಗಿ ನಡೆಯಬೇಕು. ಇದು ಚುನಾವಣೆ ವರ್ಷವಾಗಿರುವ ಕಾರಣ ಕಿಡಗೇಡಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ ಎಂದರು.

ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು. ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಯಾವುದೇ ಚಟುವಟಿಕೆಗೆ ನಾವು ಅವಕಾಶ ಕೊಡುವುದಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ ನಮ್ಮ ಅಭ್ಯಂತರ ಇರುವುದಿಲ್ಲ. ಬೆಳಗಾವಿ ಗಡಿಯಲ್ಲಿ 21 ಚೆಕ್​ಪೋಸ್ಟ್​ಗಳಿವೆ. ಗಡಿ ಭಾಗದ ಎಲ್ಲ ಎಸ್‌ಪಿಗಳಿಗೆ ಎಚ್ಚರಿಕೆಯಿಂದ ಇರುವಂತೆ ನಿರ್ದೇಶನ ನೀಡಿದ್ದೇವೆ. ಮಹಾರಾಷ್ಟ್ರ ಗಡಿಯಲ್ಲಿ ಇಂದು ಸಂಜೆಯಿಂದಲೇ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ ಎಂದರು.

ಸಭೆಯಲ್ಲಿ ಉತ್ತರ ವಲಯ ಐಜಿಪಿ, ಬೆಳಗಾವಿ ಎಸ್​​ಪಿ, ನಗರ ಪೊಲೀಸ್​ ಆಯುಕ್ತ, ಡಿಸಿಪಿಗಳು, ಡಿವೈಎಸ್​ಪಿಗಳು ಭಾಗವಹಿಸಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ ಐಜಿಪಿ, ಕೊಲ್ಹಾಪುರ ಎಸ್​​​ಪಿ, ಸಾಂಗ್ಲಿ ಎಸ್​ಪಿ, ಸಿಂಧುದುರ್ಗ ಎಸ್​​ಪಿ, ಸಾವಂತವಾಡಿಯ ಡಿಎಸ್​ಪಿಗಳು ಭಾಗವಹಿಸಿದ್ದರು.

ಬೆಂಗಳೂರು ನಮ್ಮ ವ್ಯಾಪ್ತಿಗೆ ಬರಲ್ಲ

ಬಿಜೆಪಿ ನಾಯಕರ ಜತೆ ರೌಡಿ ಸುನಿಲ್ ವೇದಿಕೆ ಹಂಚಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಅಲೋಕ್​ ಕುಮಾರ್ ನಿರಾಕರಿಸಿದರು. ಬೆಂಗಳೂರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಷ್ಟೇ ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada