ಬೆಳಗಾವಿ ಅ.16: ಗನ್ನಿಂದ ಹೊಡೆದು ಚಿನ್ನದಂಗಡಿ (Gold Shop) ದರೋಡೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿಯ (Belagavi) ಶಾಹು ನಗರದಲ್ಲಿ ನಡೆದಿದೆ. ಪ್ರಶಾಂತ್ ಹೊಂಡ್ರಾ ಎಂಬುವರು ಇಂದು (ಅ.16) ಬೆಳಿಗ್ಗೆ ತಮ್ಮ ಸಂತೋಷಿ ಜ್ಯುವೆಲರ್ಸ್ ಅಂಗಡಿ ಬಾಗಿಲು ತೆಗೆಯುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಆರೋಪಿಗಳು ಪ್ರಶಾಂತ್ ಅವರಿಗೆ ಗನ್ ತೋರಿಸಿ ನಂತರ ಗನ್ನ ಹಿಂಬದಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಗನ್ ಮ್ಯಾಗ್ಜಿನ್ನಿಂದ ಒಂದು ಗುಂಡು ಹೊರ ಬಿದ್ದಿದೆ.
ಅಂಗಡಿ ಮಾಲೀಕ ಕಿರುಚಾಡುತ್ತಿದ್ದಂತೆ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಆರೋಪಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸಿಪಿ, ಇಬ್ಬರು ಎಸಿಪಿ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಓರ್ವ ಆರೋಪಿ ಹೆಲ್ಮೆಟ್ ಹಾಕಿಕೊಂಡು ಮತ್ತೋರ್ವ ಆರೋಪಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಂಗಡಿ ಪ್ರವೇಶಿಸಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹಾವೇರಿ: ಮನೆ ದೋಚಲು ಬಂದು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಕಂಬಕ್ಕೆ ಕಟ್ಟಿ ಧರ್ಮದೇಟು
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಹಾಡುಹಗಲೇ ಕುರಿ ಕಳ್ಳತನ ಮಾಡಿದ್ದ, ಕಳ್ಳರನ್ನು ಹಿಡಿದ ಯುವಕರು ಗೂಸಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮದ ಕೆರೆ ದಡದಲ್ಲಿ ಮೇಯುತ್ತಿದ್ದ ಕುರಿಗಳನ್ನು ಬೈಕ್ನಲ್ಲಿ ಬಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಇದನ್ನು ಕಂಡ ಯುವಕರು ಬೈಕ್ ಅನ್ನ ಹಿಂಬಾಲಿಸಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ