ಬೇರೆ-ಬೇರೆ ರಾಜ್ಯಗಳಲ್ಲಿ ಹುಲಿ ಸೇರಿದಂತೆ ವನ್ಯಜೀವಿ ಬೇಟೆಯಾಡುತ್ತಿದ್ದವ ಕರ್ನಾಟಕದಲ್ಲಿ ಸಿಕ್ಕಿಬಿದ್ದ, ರಣ ಬೇಟೆಗಾರ ಸಿಕ್ಕಿಬಿದ್ದಿದ್ದೇ ಒಂದು ರೋಚಕ..!
ಮಹಾರಾಷ್ಟ್ರ ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಅಭಯಾರಣ್ಯಗಳಲ್ಲಿ ಹುಲಿ ಸೇರಿದಂತೆ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಕುಖ್ಯಾತಿ ಬೇಟಗಾರ ಇದೀಗ ಬೆಳಗಾವಿ ಅರಣ್ಯ ಇಲಾಖೆ ಬೋನಿಗೆ ಬಿದ್ದಿದ್ದಾನೆ. ಕಾಡಿನಲ್ಲಿ ವಿವಿಧ ಪ್ರಾಣಿಗಳನ್ನು ಬೇಟೆಯಾಡೋ ಹುಲಿಯನ್ನೇ ಬೇಟೆಯಾಡೋ ರಣ ಬೇಟೆಗಾರ ಬೆಳಗಾವಿ ಜಿಲ್ಲೆ ಖಾನಾಪುರ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆಸಿಕ್ಕಿಬಿದ್ದಿದ್ದೇ ಒಂದು ರೋಚಕ..!
ಬೆಳಗಾವಿ, (ಅಕ್ಟೋಬರ್ 16): ಮಹಾರಾಷ್ಟ್ರ(Maharashtra), ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಅಭಯಾರಣ್ಯಗಳಲ್ಲಿ ಹುಲಿಗಳನ್ನು(tiger )ಬೇಟೆಯಾಡಿ ಅದರ ದೇಹದ ಭಾಗಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಬೇಟೆಗಾರನನ್ನು ಬೆಳಗಾವಿಯ( Belagavi) ಖಾನಾಪುರ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಮಧ್ಯಪ್ರದೇಶ ರಾಜ್ಯದ ದಾಮೋ ಜಿಲ್ಲೆಯ ಅಂತಾರಾಜ್ಯ ಹುಲಿ ಬೇಟೆಗಾರ (tiger poacher) ಚಿಕಾ ಅಲಿಯಾಸ್ ಕೃಷ್ಣಾ ಪಟ್ಟೆ ಪವಾರ್ ಬಂಧಿತ ಆರೋಪಿ. ಶ್ರೀಗಂಧ ಮರಗಳ ಕಳ್ಳತನದಲ್ಲಿ ಸಿಕ್ಕಿಬಿದ್ದ ಆರೋಪಿ ಈ ಹಿಂದೆ ವನ್ಯಜೀವಿಗಳನ್ನು ಬೇಟೆಯಾಡಿದ್ದ ಪ್ರಕರಣಗಳು ಬಟಾಬಯಲಾಗಿವೆ.
ಈತನ ಮೇಲೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವೆ. ಅಲ್ಲದೇ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ ಚಂದ್ ತಂಡದ ಸದಸ್ಯನಾಗಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅವರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ್ಯ ಮಹಾ ನಿರೀಕ್ಷಕರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್ ಕ್ರೈಂ ಪ್ರಕರಣಗಳು: ಪ್ರತಿದಿನ 25 ರಿಂದ 30 ಕೇಸ್ ದಾಖಲು
ಶ್ರೀಗಂಧದ ಮರಗಳ ಕಳ್ಳತನದಲ್ಲಿ ಸಿಕ್ಕಿಬಿದ್ದ ಬೇಟೆಗಾರ
ಕೃಷ್ಣಾ ಕಳೆದ ಜುಲೈನಲ್ಲಿ ಖಾನಾಪುರ ತಾಲೂಕಿನ ಜಳಗಾ ಗ್ರಾಮದ ಬಳಿಯ ಶ್ರೀಗಂಧ ನೆಡುತೋಪಿನಲ್ಲಿ ಇಲಾಖೆಯಿಂದ ನೆಟ್ಟಿದ್ದ ಶ್ರೀಗಂಧದ ಮರಗಳ ಕಳ್ಳತನ ಮಾಡಿದ್ದ ಎಂದು ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀಗಂಧ ಮರಗಳ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯಾಧಿಕಾರಿಗಳು ಖಾನಾಪುರ ವಲಯ ಅರಣ್ಯ ಅಧಿಕಾರಿ ನಾಗರಾಜ ಬಾಳೆಹೊಸೂರ ನೇತೃತ್ವದ ಮಹತ್ವದ ಕಾರ್ಯಾಚರಣೆಯಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಶ್ರೀಗಂಧ ಕಳ್ಳತನದ ಆರೋಪಿಗಳು ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದ ಬಳಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಇಲಾಖೆಗೆ ಲಭ್ಯವಾಗಿತ್ತು. ಶುಕ್ರವಾರ ಕಲಖಾಂಬ ಬಳಿ ಸಿಬ್ಬಂದಿ ಸಮೇತ ದಾಳಿ ನಡೆಸಿದ ವಲಯ ಅರಣ್ಯ ಅಧಿಕಾರಿ ನಾಗರಾಜ್, ಟೆಂಟ್ ಒಂದರಲ್ಲಿ ಇಟ್ಟಿದ್ದ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿ ಇದ್ದ ಆರೋಪಿ ಕೃಷ್ಣಾನನ್ನು ವಶಕ್ಕೆ ಪಡೆದಿದ್ದರು.
ಬಂಧಿತ ಕೃಷ್ಣಾನ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಲಯ ಅರಣ್ಯ ಅಧಿಕಾರಿ ನಾಗರಾಜ, ತೀವ್ರ ವಿಚಾರಣೆ ನಡೆಸಿದಾಗ ಆತ ಇದುವರೆಗೂ ದೇಶದ ವಿವಿಧ ಭಾಗಗಳಲ್ಲಿ ಹುಲಿಗಳನ್ನು ಬೇಟೆಯಾಡಿದ ಹಾಗೂ ಇತರೆ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸದ್ಯ ಬೆಳಗಾವಿ ಉಪಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಕಲ್ಲೋಳಿಕರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖಾನಾಪುರ ವಲಯ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಆರೋಪಿ ಕೃಷ್ಣಾನನ್ನು ಬಂಧಿಸಿದ್ದು, ಬಂಧಿತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Mon, 16 October 23