ಬೈಲಹೊಂಗಲ: ವಸತಿ ನಿಲಯದಲ್ಲೇ ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ವಸತಿ ನಿಲಯದಲ್ಲಿ ಕಾಲೇಜು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ‌ಬೈಲಹೊಂಗಲ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದೆ.

ಬೈಲಹೊಂಗಲ: ವಸತಿ ನಿಲಯದಲ್ಲೇ ನೇಣು ಬಿಗಿದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ಪರುಶರಾಮ ಕೋನೇರಿ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 22, 2022 | 5:14 PM

ಬೆಳಗಾವಿ: ವಸತಿ ನಿಲಯದಲ್ಲಿ ಕಾಲೇಜು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ‌ಬೈಲಹೊಂಗಲ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಕೊಡ್ಡಿವಾಡ ಗ್ರಾಮದ ಪರುಶರಾಮ ಕೋನೇರಿ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಸತಿ ನಿಲಯದಲ್ಲಿ ಇತರೆ ವಿದ್ಯಾರ್ಥಿಗಳು ಕಾಲೇಜಿಗೆ ಹೋದ ಬಳಿಕ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಾಗಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ‌ಪರೀಕ್ಷೆಗೆ ವಿದ್ಯಾರ್ಥಿ ಶವವನ್ನು ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಉಪಾಹಾರ ಸೇವಿಸಿದ್ದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಕನಕಗಿರಿಯ ಬಾಲಕಿಯರ ಹಾಸ್ಟೆಲ್​ನಲ್ಲಿ ನಡೆದಿದೆ. ಅಸ್ವಸ್ಥ ಬಾಲಕಿಯರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಿಬಿಎಂಪಿ ಕಸ ಸಾಗಣೆ ಲಾರಿ ಹರಿದು ಬೈಕ್ ಸವಾರ ದುರ್ಮರಣ

ಬೆಂಗಳೂರು ಗ್ರಾಮಾಂತರ: ಬಿಬಿಎಂಪಿ ಕಸ ಸಾಗಣೆ ಲಾರಿ ಹರಿದು ಬೈಕ್ ಸವಾರ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಬಾಬಾ ಬಿಗು (35) ಮೃತ ಬೈಕ್​ ಸವಾರ. ಪಲ್ಸರ್​ ಬೈಕ್​ನಲ್ಲಿ ಅಸ್ಸಾಂ ಮೂಲದ ಬಾಬಾ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಘಟನೆ ನಂತರ ಬಿಬಿಎಂಪಿ ಕಸದ ಲಾರಿ ಬಿಟ್ಟು ಚಾಲಕ ಪರಾರಿಯಾಗಿದೆ. ಸ್ಥಳಕ್ಕೆ ದಾಬಸ್​ಪೇಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮತ್ತು ಮಹಿಳೆ ಸಾವು

ತುಮಕೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಹಸು ಹಾಗೂ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ 40 ಮೃತ ದುರ್ದೈವಿ. ವಿದ್ಯುತ್ ತಂತಿ ತಗಲಿ ಹಸು ಒದ್ದಾಡುತ್ತಿದ್ದು, ಅದರನ್ನು ರಕ್ಷಿಸಲು ಹೋದ ಮಹಿಳೆಗೂ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಸು ಮೇಯಿಸಲು ಹೋದಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕೋಲಾರ: ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಗರದ ಕ್ಲಾಕ್ ಟವರ್ ಬ್ರಿಡ್ಜ್ ಮೇಲೆ ನಡೆದಿದೆ. ವಡಗೂರು ಗ್ರಾಮದ ನಿವಾಸಿ ರಾಕೇಶ್ (28) ಮೃತ ವ್ಯಕ್ತಿ. ಸರ್ಕಾರಿ ಬಸ್​ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada