ಸಪ್ತ ನದಿಗಳ ಬೀಡು ಬೆಳಗಾವಿ ಜಿಲ್ಲೆಯಲ್ಲಿ ‘ಬ್ಯಾರೇಜ್ ಗೇಟ್’ ಕಳ್ಳರ ಹಾವಳಿ: ಸಚಿವರು, ಅಧಿಕಾರಿಗಳಿಗೆ ತಲೆನೋವಾದ ಗ್ಯಾಂಗ್
ಈ ಬ್ಯಾರೇಜ್ ಗೇಟ್ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಬೃಹದಾಕಾರದ ಕಬ್ಬಿಣದ ಗೇಟ್ಗಳನ್ನು ಕಳ್ಳತನ ಮಾಡುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ. ಈವರೆಗೂ ಚಿಕ್ಕೋಡಿ ಉಪವಿಭಾಗವೊಂದರಲ್ಲೇ 14 ಲಕ್ಷ ಮೌಲ್ಯದ ಬ್ಯಾರೇಜ್ ಗೇಟ್‌ಗಳ ಕಳ್ಳತನವಾಗಿದೆ.
ಬೇಸಿಗೆ ವೇಳೆ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ರೈತರ ಗದ್ದೆಗಳಿಗೆ ನೀರು ಪೂರೈಕೆ ( Irrigation) ಆಗಲೆಂದು ನದಿಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಕಟ್ಟಲಾಗಿದೆ. ಹೀಗೆ ಕಟ್ಟಿರುವ ಬ್ರಿಡ್ಜ್ ಕಮ್ ಬ್ಯಾರೇಜ್ಗಳಿಗೆ ನೀರು ತಡೆಯಲು ಬೃಹದಾಕಾರದ ಕಬ್ಬಿಣದ ಗೇಟ್ಗಳನ್ನು (Barrage Gate) ಅಳವಡಿಸಲಾಗಿರುತ್ತೆ. ಈ ಬ್ಯಾರೇಜ್ ಗೇಟ್ಗಳನ್ನೂ ಕಳ್ಳರೂ ಬಿಡುತ್ತಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ (Belagavi district) ಬ್ಯಾರೇಜ್ ಗೇಟ್ ಕಳ್ಳರ ಹಾವಳಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೇ ಬರಗಾಲದ ಮಧ್ಯೆ ಕಳ್ಳರ ಹಾವಳಿಯಿಂದ ನೀರು ತಡೆಯಲು ಕಷ್ಟವಾಗಿ ಜನರಿಗೂ ತೊಂದರೆ ಆಗುತ್ತಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ…
ಹೌದು ಗಡಿ ಜಿಲ್ಲೆ ಬೆಳಗಾವಿ ಸಪ್ತ ನದಿಗಳ ಬೀಡು. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂದ್ ಗಂಗಾ, ವೇದಗಂಗಾ ಹೀಗೆ ಸಪ್ತನದಿಗಳು ಹರಿದಿವೆ. ಮಳೆಗಾಲದ ವೇಳೆ ಮೈದುಂಬಿ ಹರಿಯುವ ನದಿಗಳು ಬೇಸಿಗೆ ವೇಳೆ ಬತ್ತುವ ಹಂತ ತಲುಪಿರುತ್ತೆ. ಬೇಸಿಗೆ ವೇಳೆ ರೈತರ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲ ಆಗಲಿ ಎಂದು ಅಲ್ಲಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಹಾಗೂ ಬ್ಯಾರೇಜ್ಗಳನ್ನು ನಿರ್ಮಿಸಲಾಗಿದೆ.
ಹೀಗೆ ನಿರ್ಮಿಸಿದ ಬ್ಯಾರೇಜ್ಗಳಿಗೆ 170 ಕೆಜಿಗೂ ಹೆಚ್ಚು ತೂಕದ ಬೃಹದಾಕಾರದ ಕಬ್ಭಿಣದ ಗೇಟ್ಗಳನ್ನು ಅಳವಡಿಸಲಾಗಿರುತ್ತೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಗೇಟ್ ಗಳನ್ನು ತಗೆದು ಹತ್ತಿರದಲ್ಲಿಯೇ ಇಡಲು ವ್ಯವಸ್ಥೆ ಮಾಡಲಾಗಿರುತ್ತೆ. ಬಹುತೇಕ ಕಡೆ ಈ ಬ್ಯಾರೇಜ್ ಗೇಟ್ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ 170 ಕೆಜಿಗೂ ಹೆಚ್ಚು ತೂಕದ ಬೃಹದಾಕಾರದ ಕಬ್ಬಿಣದ ಗೇಟ್ಗಳನ್ನು ಕಳ್ಳತನ ಮಾಡುತ್ತಿದ್ದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ.
ಬ್ಯಾರೇಜ್ ಗೇಟ್ ಕಳ್ಳರ ಹಾವಳಿಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಈವರೆಗೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗವೊಂದರಲ್ಲೇ ಸುಮಾರು 14 ಲಕ್ಷ ಮೌಲ್ಯದ 130ಕ್ಕೂ ಹೆಚ್ಚು ಬ್ಯಾರೇಜ್ ಗೇಟ್‌ಗಳ ಕಳ್ಳತನವಾಗಿದೆ. ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಶೆಟ್ಟಿಹಳ್ಳಿ ಭಾಗದಲ್ಲಿ 62 ಬ್ಯಾರೇಜ್ ಗೇಟ್‌ಗಳು ಹಾಗೂ ಬಸಾಪುರ, ಮಲ್ಲಾಪುರ ಬ್ರಿಡ್ಜ್ ಕಮ್ ಬ್ಯಾರೇಜ್‌ನ 65 ಗೇಟ್‌ಗಳ ಕಳ್ಳತನವಾಗಿದ್ದು ಈ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮೀಪದ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಬ್ಯಾರೇಜ್ ಗೇಟ್‌ಗಳ ಕಳ್ಳತನ ಮಾಡುತ್ತಿದ್ದಾರೆ. ಕಳ್ಳರ ಪತ್ತೆಗೆ ಹಾಗೂ ಕಳ್ಳತನ ತಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
Also read: ಬ್ಯಾರೇಜ್ ನಿರ್ಮಾಣದ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿ, ಹೈರಾಣಾದ ಅನ್ನದಾತರು
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಬ್ಯಾರೇಜ್ ಗೇಟ್‌ಗಳ ಕಳ್ಳತನ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ನೀರಾವರಿ ಇಲಾಖೆ ಎಇಇ ಸಂಜಯ್ ಮಾಳಗಿ, ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಶೆಟ್ಟಿಹಳ್ಳಿ ಭಾಗದಲ್ಲಿ 62 ಬ್ಯಾರೇಜ್ ಗೇಟ್ ಕಳ್ಳತನ ಮಾಡಿದ್ದಾರೆ. ಅದರಂತೆ ಬಸಾಪುರ – ಮಲ್ಲಾಪುರ ಬ್ಯಾರೇಜ್ ನ 65 ಗೇಟ್ ಕಳ್ಳತನ ಮಾಡಿದ್ದಾರೆ. ಬ್ಯಾರೇಜ್ ಗೇಟ್ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಕಳ್ಳತನ ಹಿನ್ನೆಲೆ ಬ್ಯಾರೇಜ್ ಗೇಟ್ ಹಾಕಲು ತೊಂದರೆ ಆಗುತ್ತಿದೆ. ಕಳೆದ ಬಾರಿ ಹುಕ್ಕೇರಿ ಮತಕ್ಷೇತ್ರದಲ್ಲಿ ಬ್ಯಾರೇಜ್ ಗೇಟ್ ಕದ್ದಿದ್ದ ಕಳ್ಳರು ಸಿಕ್ಕಿದ್ರು.
ಬಾಗಲಕೋಟ ಜಿಲ್ಲೆ ಗುಳೇದಗುಡ್ಡದಲ್ಲಿ ಕಳ್ಳರು ಬಂಧನವಾದ ಬಗ್ಗೆ ಅಂಕಲಿ ಪೊಲೀಸ್ ಠಾಣೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬ್ಯಾರೇಜ್ ಗೇಟ್ ಕಳ್ಳತನ ಆದ ಸಮಯದಲ್ಲೇ ಬಾಗಲಕೋಟ, ವಿಜಯಪುರ ಜಿಲ್ಲೆಯಲ್ಲೂ ಕಳ್ಳತನ ವರದಿ ಆಗಿದೆ. ಹುದಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟ್ ಗಳು ಸಹ ಕಳ್ಳತನ ಆಗಿವೆ. ಇದರ ಹಿಂದೆ ವ್ಯವಸ್ಥಿತವಾದ ಕಳ್ಳರ ಗ್ಯಾಂಗ್ ಇದೆ. ಬ್ಯಾರೇಜ್ ಗೇಟ್ ಕಳ್ಳತನ ಮಾಡಿ ಮಾರುವ ಕೆಲಸ ಮಾಡುತ್ತಾರೆ. ಒಂದು ಬ್ಯಾರೇಜ್ ಗೇಟ್ ಸುಮಾರು 176 ಕೆಜಿ ಇರುತ್ತೆ. ನಮ್ಮ ವ್ಯಾಪ್ತಿಯಲ್ಲಿ 13 ರಿಂದ 14 ಲಕ್ಷ ಮೌಲ್ಯದ 130 ಬ್ಯಾರೇಜ್ ಗೇಟ್ ಕಳ್ಳತನ ಮಾಡಿದ್ದಾರೆ.
ಬ್ಯಾರೇಜ್ ಗೇಟ್ ತಗೆದು ಇಟ್ಟಾಗ ಕಳ್ಳತನ ಮಾಡಿದ್ದಾರೆ. ಬ್ಯಾರೇಜ್ ಗಳ ಹತ್ತಿರ ಇರುವ ಮನೆ, ಗದ್ದೆಯಲ್ಲಿ ಗೇಟ್‌ಗಳ ನ್ನು ಇಟ್ಟಿರುತ್ತೇವೆ. ಪ್ರವಾಹ ಸಂದರ್ಭದಲ್ಲಿ ಕೆಲ ಬ್ಯಾರೇಜ್ಗಳ ಬಳಿ ನಿರ್ಮಿಸಿದ ಗೋದಾಮುಗಳು ಬಿದ್ದು ಹೋಗಿದೆ. ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಮಿನಿ ಗೋದಾಮು ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೇವೆ. ಹೊಸ ಬ್ಯಾರೇಜ್ ಗೇಟ್‌ಗಳ ಖರೀದಿಗೂ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬರಗಾಲ ಇದ್ದರೂ ಬೇರೆ ಕಡೆ ಇದ್ದ ಗೇಟ್ ತಂದು ನೀರು ನಿಲ್ಲಿಸಿದ್ದೇವೆ. ಬ್ಯಾರೇಜ್ ಗೇಟ್ ಕಳ್ಳತನ ಹಿನ್ನೆಲೆ ನೀರು ತಡೆಯಲು ಸಹ ತೊಂದರೆ ಆಗಿದೆ. ಈಗ ಬರಗಾಲ ಹಿನ್ನೆಲೆ ನೀರು ಸಹ ಕಡಿಮೆ ಇದೆ. ಈ ಮಧ್ಯೆ ಕಳ್ಳರ ಕಾಟದಿಂದಲೂ ತೊಂದರೆ ಆಗಿದೆ ಎಂದು ತಿಳಿಸಿದ್ದಾರೆ.
ಕೇವಲ ಬೆಳಗಾವಿ ಅಷ್ಟೇ ಅಲ್ಲ ಪಕ್ಕದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟದಲ್ಲೂ ಬ್ಯಾರೇಜ್ ಗೇಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ಬರಗಾಲದ ಮಧ್ಯೆ ಬ್ಯಾರೇಜ್ಗಳ ಬಳಿ ನೀರು ತಡೆಯಲು ಸಹ ತೊಂದರೆ ಆಗುತ್ತಿದೆ. ಹೀಗಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ಗಳ ಬಳಿ ಮಿನಿ ಗೋದಾಮು ನಿರ್ಮಿಸಿ ಗೇಟ್ಗಳನ್ನು ಸುರಕ್ಷಿತವಾಗಿಡಲಿ ಎಂಬುದು ಸಾರ್ವಜನಿಕರ ಆಗ್ರಹ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ