ಬೆಳಗಾವಿ: ಮತಾಂತರ ನಿಷೇಧ ವಿಧೇಯಕ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಸುವರ್ಣಸೌಧದಲ್ಲಿ ಸಿಎಂ ಸಭೆಗೆ ಗೃಹ ಸಚಿವರ ಆಗಮಿಸಿದ್ದಾರೆ. ತಿದ್ದುಪಡಿ ವಿಧೇಯಕ ಮಂಡನೆಗೆ ಅಂತಿಮ ಹಂತದ ಸಿದ್ಧತೆ ನಡೆಸಲಾಗಿದೆ. ಸೋಮವಾರ ಸದನದಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ.
ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಚರ್ಚೆ ನಡೆಸಿದ್ದಾರೆ. ವಿಧೇಯಕ ಯಾವಾಗ ಸದನಕ್ಕೆ ತರಬೇಕು ಎಂಬ ಬಗ್ಗೆ ಚರ್ಚೆ ಮಾಡಲಾಗಿದೆ. ವಿಧೇಯಕದ ಯಾವುದೇ ಅಂಶಗಳು ಇನ್ನೂ ಅಂತಿಮವಾಗಿಲ್ಲ. ಮತಾಂತರಕ್ಕೊಂದು ಚೌಕಟ್ಟು ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮತಾಂತರವಾಗುವ 30 ದಿನಗಳ ಮೊದಲು ಡಿಸಿಗೆ ಅರ್ಜಿ ಸಲ್ಲಿಸಿ, ಡಿಸಿಯಿಂದ ಅರ್ಜಿ ವಿಚಾರಣೆ, ಬಳಿಕ ಮತಾಂತರ ನಿರ್ಧಾರ ಮಾಡುವ ಬಗ್ಗೆ ತಿಳಿದುಬಂದಿದೆ. ದಂಡ, ಜೈಲು ಶಿಕ್ಷೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ದೊರಕಿದೆ.
ವಿಧೇಯಕ ಅಂತಿಮಗೊಳಿಸಲು ಅನೇಕ ಚರ್ಚೆ ಆಗಿದೆ. ಕರಡು ಪ್ರತಿ ಇನ್ನು ಅಂತಿಮಗೊಳಿಸ ಬೇಕಿದೆ. ಇದು ಐತಿಹಾಸಿಕ ಆಗಿರುವುದರಿಂದ ಬಹಳ ಚರ್ಚೆ ಮಾಡಬೇಕಿದೆ. ಪ್ರತಿ ಶಬ್ದವನ್ನ ಕೂಡ ಯೋಚಿಸಿ ಅಳವಡಿಸಬೇಕು. ನಾವು ಇಲ್ಲಿ ಚರ್ಚೆ ಮಾಡಿದ್ದೇವೆ. ಇಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆ ಮಾಡುತ್ತೇವೆ. ಆ ಬಳಿಕ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತಿವಿ. ಸೋಮವಾರ ಸದನಕ್ಕ ಮತಾಂತರ ನಿಷೇಧ ವಿಧೇಯಕ ಮಂಡಿಸುತ್ತೇವೆ ಎಂದು ಟಿವಿ9ಗೆ ಗೃಹ ಸಚಿವ ಅರಗ ಜ್ಙಾನೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಧರ್ಮ ಉಳಿಸುವುದಕ್ಕಾಗಿ ಮತಾಂತರ ಕಾಯ್ದೆ ಜಾರಿ ಅನಿವಾರ್ಯ; ಸಚಿವ ಕೆಎಸ್ ಈಶ್ವರಪ್ಪ
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧ; ಒಕ್ಕೂಟದಿಂದ ಉಪವಾಸ ಸತ್ಯಾಗ್ರಹ
Published On - 3:38 pm, Wed, 15 December 21