ಬೆಳಗಾವಿ, ಮಾರ್ಚ್ 03: ಭೀಕರ ಬರಗಾಲದಿಂದ (Drought) ರಾಜ್ಯದ ಜಲಾಶಯಗಳು ಭಣಗುಡುತ್ತಿವೆ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಬೇಸಿಗೆ ಆರಂಭದಲ್ಲೇ ಜಲಕ್ಷಾಮದ ಬಿಸಿ ರಾಜ್ಯಕ್ಕೆ ತಟ್ಟಿದೆ. ಹನಿ ನೀರಿಗೂ ಪರದಾಡುವಂತೆ ಪರಿಸ್ಥಿತಿ ಎದುರಾಗಿದೆ. ಇನ್ನು ಬೆಳಗಾವಿ (Belagavi) ಮತ್ತು ಬಾಗಲಕೋಟೆ (Bagalkote) ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ (Hidkal Dam) ಬರಿದಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದಾರೆ. ಬೆಳಗಾವಿಯ ಮತ್ತು ಬಾಗಲಕೋಟೆ ಜಿಲ್ಲೆ ಜೀವನಾಡಿ ಆಗಿರುವ ಹಿಡಕಲ್ ಜಲಾಶಯದಲ್ಲಿ ಅರ್ಧದಷ್ಟು ನೀರು ಖಾಲಿಯಾಗಿದ್ದು, ಜಲಕ್ಷಾಮದ ಆತಂಕ ತಲೆದೋರಿದೆ.
ಒಟ್ಟು 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಡ್ಯಾಂನಲ್ಲಿ, 25 ಟಿಎಂಸಿ ಮಾತ್ರ ನೀರಿದೆ. ನೀರಿಗೆ ಅಭಾವ ತಲೆದೋರುವ ಮುನ್ಸೂಚನೆ ಸಿಗುತ್ತಿದ್ದಂತೆ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತುರ್ತು ಸಭೆ ನಡೆಸಿದರು. ನೀರು ಮತ್ತು ಮೇವಿನ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಳೆದ ವರ್ಷ ಬೇಸಿಗೆಗಾಲದಲ್ಲಿ ಹಿಡಕಲ್ ಅಣೆಕಟ್ಟು ಸಂಪೂರ್ಣ ಬರಿದಾಗಿತ್ತು. ಈ ಸಮಯದಲ್ಲಿ ಅಣೆಕಟ್ಟಿನ ಹಿನ್ನೀರಿನಡಿಯಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠಲ ದೇವಸ್ಥಾನವು ಸರಿಯಾಗಿ 12 ವರ್ಷಗಳ ನಂತರ ಪತ್ತೆಯಾಗಿತ್ತು. ಅದು ಕೂಡ ಆಷಾಢ ಏಕಾದಶಿಯ ಶುಭದಿನದಂದು ವಿಠಲ ದೇವಸ್ಥಾನ ಕಾಣಿಸಿಕೊಂಡಿತ್ತು. ಇದರಿಂದ ಹರ್ಷಗೊಂಡಿದ್ದ ಭಕ್ತರು ದರ್ಶನ ಮತ್ತು ಪ್ರಾರ್ಥನೆ ಸಲ್ಲಿಸಿದ್ದರು.
ಇನ್ನು, ತಾಪಮಾನ ಏರಿಕೆಯಿಂದ, ಮಾವಿನ ಹೂವು ಮತ್ತು ಪೀಚು ಉದುರುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತೆ. ಇಷ್ಟೋತ್ತಿಗಾಗಲೆ ಹೂವು ಬಿಟ್ಟು, ಪೀಚು ಕಟ್ಟಬೇಕಿದ್ದ ಮಾವು, ಫೆಬ್ರವರಿ ಕಳೆದರೂ ಸರಿಯಾಗಿ ಹೂವು ಬಿಟ್ಟಿಲ್ಲ.
ಇದನ್ನೂ ಓದಿ: ಭೀಕರ ಬರದಿಂದ ತತ್ತರಿಸುತ್ತಿದೆ ಕೊಪ್ಪಳ: ಬಹುತೇಕ ಕೆರೆಗಳು ಖಾಲಿ ಖಾಲಿ, ಕುಡಿಯುವ ನೀರಿಗೂ ತತ್ವಾರ
ಹೌದು ಕಾವೇರಿ ಹುಟ್ಟುವ ಕೊಡಗು ಜಿಲ್ಲೆಯಲ್ಲೇ ಜಲಕ್ಷಾಮದ ಆತಂಕ ಶುರುವಾಗಿದೆ. ನಗರಕ್ಕೆ ವರ್ಷವಿಡೀ ನೀರು ಪೂರೈಸುವ ಕೂಟುಹೊಳೆ ಡ್ಯಾಂನಲ್ಲಿ ನೀರು ತಗ್ಗಿದ್ದು, ಮೋಟರ್ ಪೈಪ್ಗಳಿಗೆ ನಿಲುಕುತ್ತಿಲ್ಲ. ಹೀಗಾಗಿ ಕುಂಡಾ ಮೇಸ್ತ್ರಿ ಕಿರು ಜಲಾಶಯದಿಂದ ಕೊಟುಹೊಳೆ ಜಲಾಶಯಕ್ಕೆ ನೀರನ್ನ ಪಂಪ್ ಮಾಡಲಾಗುತ್ತಿದೆ. ನಗರದ ಎಲ್ಲಾ ಬೋರ್ವೆಲ್ಗಳನ್ನ ಸರ್ವಿಸ್ ಮಾಡಲಾಗುತ್ತಿದೆ. ಹೆಚ್ಚುವರಿ 3 ಟ್ಯಾಂಕರ್ಗಳನ್ನ ಸಿದ್ಧವಾಗಿಟ್ಟುಕೊಳ್ಳಲಾಗಿದೆ.
ಏನೇ ಹೇಳಿ ರಾಜ್ಯದಲ್ಲಿ ಈ ಬಾರಿ ವಾಡಿಕೆ ಮಳೆ ಬರದ ಕಾರಣ ಬೇಸಿಗೆ ಆರಂಭದಲ್ಲೇ ನೀರಿಗೆ ಪರದಾಟ ಶುರುವಾಗಿದೆ. ನೀರಿನ ಸಮಸ್ಯೆ ನಿವಾರಿಸಲು ಸರ್ಕಾರ ತುರ್ತು ಕ್ರಮಗಳನ್ನ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 am, Sun, 3 March 24