- Kannada News Karnataka Koppal Koppal is reeling from severe drought: most of the lakes are empty, drinking water is scarce
ಭೀಕರ ಬರದಿಂದ ತತ್ತರಿಸುತ್ತಿದೆ ಕೊಪ್ಪಳ: ಬಹುತೇಕ ಕೆರೆಗಳು ಖಾಲಿ ಖಾಲಿ, ಕುಡಿಯುವ ನೀರಿಗೂ ತತ್ವಾರ
ಕೊಪ್ಪಳ, ಮಾರ್ಚ್ 1: ಬೇಸಿಗೆ ಆರಂಭಕ್ಕೂ ಮುನ್ನವೇ ಕೊಪ್ಪಳ (Koppal) ಜಿಲ್ಲೆಯಲ್ಲಿ ಬರಗಾಲದ (Drought) ಛಾಯೇ ಆವರಿಸಿಕೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಜನರು ಕುಡಿಯುವ ನೀರಿಗಾಗಿ (Drinking Water) ಪರದಾಡುತ್ತಿದ್ದಾರೆ. ಇದರ ನಡುವೆ ಗ್ರಾಮೀಣ ಭಾಗದ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ಬತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಸಿಗ್ತಿಲ್ಲ. ಮುಂದಿನ ಬೇಸಿಗೆಯನ್ನು ಹೇಗೆ ಕಳೆಯೋದು ಅನ್ನೋ ಚಿಂತೆ ಜನರನ್ನು ಕಾಡಲು ಆರಂಭಿಸಿದೆ.
Updated on: Mar 01, 2024 | 1:04 PM

ಬರಿದಾಗಿರುವ ಕೆರೆಗಳು. ಮತ್ತೊಂದಡೆ ಕುಡಿಯುವ ನೀರಿಗಾಗಿ ಅಲೆದಾಡುತ್ತಿರುವ ಜಾನುವಾರುಗಳು. ಕಣ್ಣು ಹಾಯಿಸದಷ್ಟು ಕಾಣ್ತಿದ್ದ ನೀರು ಮಾಯವಾಗಿ ಇದೀಗ ಭೂಮಿ ಕಾಣುತ್ತಿದೆ. ಈ ದೃಶ್ಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಕಂಡುಬಂದಿದೆ.

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಕೆರೆ ಸಂಪೂರ್ಣವಾಗಿ ಬತ್ತಿದೆ. ನಲವತ್ತೆರಡು ಎಕರೆ ವಿಸ್ತೀರ್ಣದಲ್ಲಿರುವ ಕೆರೆಯಲ್ಲಿ ಇದೀಗ ಹನಿ ನೀರು ಕೂಡಾ ಸಿಗ್ತಾಯಿಲ್ಲಾ. ಈ ಮೊದಲು ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿಗೆ ಆಧಾರವಾಗಿದ್ದ ಕೆರೆ ಇದೀಗ ಸಂಪೂರ್ಣವಾಗಿ ಖಾಲಿಯಾಗಿದೆ.

ಇದೊಂದೇ ಕೆರೆಯಲ್ಲಿ ಮಾತ್ರ ನೀರು ಖಾಲಿಯಾಗಿರುವುದಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಹುತೇಕ ಕೆರೆಗಳಲ್ಲಿನ ನೀರು ಖಾಲಿಯಾಗಿದೆ. ಇದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ 122 ಕೆರೆಗಳಿವೆ. ಅವುಗಳ ಪೈಕಿ ಒಂದೇ ಒಂದು ಕರೆ ಕೂಡಾ ಸಂಪೂರ್ಣವಾಗಿ ನೀರನಿಂದ ತುಂಬಿಲ್ಲಾ. ಇನ್ನು ಜಿಲ್ಲೆಯಲ್ಲಿರುವ 122 ಕೆರೆಗಳ ಪೈಕಿ ಈಗಾಗಲೇ 61 ಕೆರೆಯಲ್ಲಿ ಹನಿ ನೀರು ಕೂಡಾ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನುಳಿದ ಕೆರೆಯಲ್ಲಿ ಅಲ್ಪಪ್ರಮಾಣದ ನೀರು ಮಾತ್ರ ಇದ್ದು, ಅದು ಕೂಡಾ ಮುಂದಿನ ಹತ್ತು ಹದಿನೈದು ದಿನದಲ್ಲಿ ಖಾಲಿಯಾಗುವ ಸಾಧ್ಯತೆ ಇದೆ. ಗ್ರಾಮೀಣ ಬಾಗದಲ್ಲಿರುವ ಕೆರೆಗಳು ಖಾಲಿಯಾಗುತ್ತಿರುವದು ಜನರ ಆತಂಕವನ್ನು ಹೆಚ್ಚಿಸುತ್ತಿದೆ.

ಒಂದಡೆ ಜನರಿಗೆ ಕುಡಿಯುವ ನೀರಿನ ತತ್ವಾರ ಆರಂಭವಾಗಿದೆ. ಇದರ ನಡುವೆ ಜಾನುವಾರುಗಳಿಗೆ ಕೂಡಾ ಕುಡಿಯುವ ನೀರನ್ನು ತರುವುದು ಕಷ್ಟದಾಯಕವಾಗಿದೆ. ಕೆರೆಗಳಲ್ಲಿ ನೀರು ಇದ್ದರೆ ರೈತರು ತಮ್ಮ ಜಾನುವಾರುಗಳಿಗೆ ಅಲ್ಲಿಯೇ ನೀರು ಕುಡಿಸಿಕೊಂಡು ಬರುತ್ತಿದ್ದರು. ಜೊತೆಗೆ ಅನೇಕ ಪಕ್ಷಿಗಳಿಗೆ ಕೂಡಾ ಕೆರೆಗಳು ಆಶ್ರಯವಾಗಿದ್ದವು. ಆದರೆ, ಇದೀಗ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ಮುಂದಿನ ಮೂರು ತಿಂಗಳು ಜಾನುವಾರುಗಳು, ಪಕ್ಷಿಗಳು, ಜಲಚರಗಳಿಗೆ ಸಂಕಷ್ಟ ತಂದೊಂಡಿದೆ.

ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಂತೆ, ಜಾನುವಾರುಗಳಿಗೆ ಕೂಡಾ ಸರಿಯಾಗಿ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ. ಅಲ್ಲಲ್ಲಿ ತೊಟ್ಟಿಗಳನ್ನಾದ್ರು ನಿರ್ಮಾಣ ಮಾಡಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ರೆ ಜಾನುವಾರುಗಳು, ಪಕ್ಷಿಸಂಕುಲಕ್ಕೆ ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನಷ್ಟು ಕೆಲಸ ಮಾಡಬೇಕಿದೆ.



















