ಬೆಳಗಾವಿ, ಜ.04: ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಕತಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕಲ್ಲಪ್ಪ ಅಲಿಯಾಸ್ ಕಲ್ಯಾಣಿ ಮೋರೆ(44) ಬಂಧಿತ ಆರೋಪಿ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಜ.1ರಂದು ಮಕ್ಕಳು ಆರೋಪಿ ಮನೆ ಮುಂದಿರುವ ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಸುಗಂಧಾ ಎಂಬುವವರ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು, ಮೂಗು ಕಟ್ ಮಾಡಿದ್ದ. ಸಧ್ಯ ಗಾಯಗೊಂಡಿದ್ದ ಸುಗಂಧಾ ಮೋರೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಸುಗಂಧಾ ಮೋರೆ(50) ಎಂಬ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ನಡೆದಿತ್ತು. ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಹೂ ಕಿತ್ತಿದ್ದಾರೆ. ಈ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿಯ ಮೂಗನ್ನೇ ಕಟ್ ಮಾಡಿ ಅಟ್ಟಹಾಸ ಮೆರೆದಿದ್ದ.
ಇದನ್ನೂ ಓದಿ: ಬೆಳಗಾವಿ: ಮಗು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಮನೆ ಮಾಲೀಕನ ಮಾರಣಾಂತಿಕ ಹಲ್ಲೆ!
ಇನ್ನು ಮೂಗು ಕತ್ತರಿಸಿರುವ ಪರಿಣಾಮ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮಕ್ಕಳು ಮಾಡಿದ ತಪ್ಪಿಗೆ ಸಹಾಯಕಿಗೆ ಮಹಿಳೆಗೆ ಹಲ್ಲೆ ಮಾಡಲಾಗಿದೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಗ ಗಂಡನೊಂದಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಕಟ್ಟಿಕೊಳ್ತಿದ್ದ ಮಹಿಳೆ ಈಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ