ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲೇ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿ ರಾಕ್ಷಸೀ ಕೃತ್ಯ
ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಹೂ ಕಿತ್ತರೂ ಎಂಬ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮನೆ ಮಾಲೀಕ ಸಹಾಯಕಿಯ ಮೂಗನ್ನೇ ಕಟ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ.
ಬೆಳಗಾವಿ, ಜ.03: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತವರು ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬೆಳಗಾವಿ (Belagavi) ಜಿಲ್ಲೆಯಲ್ಲೇ ಮೇಲಿಂದ ಮೇಲೆ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿಯ (Anganwadi) ಮೂಗು ಕತ್ತರಿಸಿ, ಹಲ್ಲೆ ನಡೆಸಿ ರಾಕ್ಷಸ ವರ್ತನೆ ತೋರಲಾಗಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಸುಗಂಧಾ ಮೋರೆ(50) ಎಂಬ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ನಡೆದಿದೆ. ಸುಂಗಧಾ ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಪಕ್ಕದ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಹೂ ಕಿತ್ತರೂ ಎಂಬ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಅಂಗನವಾಡಿ ಸಹಾಯಕಿಯ ಮೂಗನ್ನೇ ಕಟ್ ಮಾಡಿ ಅಟ್ಟಹಾಸ ಮೆರೆದಿದ್ದಾನೆ.
ಇದನ್ನೂ ಓದಿ: ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ದುಷ್ಟರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ, ಸಿಎಂ
ಮೂಗು ಕತ್ತರಿಸಿರುವ ಹಿನ್ನೆಲೆ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಆಟವಾಡುತ್ತ ಅಂಗನವಾಡಿ ಪಕ್ಕದಲ್ಲೇ ಇರುವ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಮಲ್ಲಿಗೆ ಹೂ ಕಿತ್ತಿದ್ದರು. ಇದರಿಂದ ಕೋಪಗೊಂಡು ಅಂಗನವಾಡಿ ಸಹಾಯಕಿಗೆ ಮನೆ ಮಾಲೀಕ ಶಿಕ್ಷೆ ಕೊಟ್ಟಿದ್ದಾನೆ. ಮಕ್ಕಳು ಮಾಡಿದ ತಪ್ಪಿಗೆ ಸಹಾಯಕಿಗೆ ಮಹಿಳೆ ಅನ್ನೋದನ್ನೂ ಮರೆತು ಹಲ್ಲೆ ಮಾಡಲಾಗಿದೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ದಿನೇ ದಿನೇ ರಾಕ್ಷಸಿ ವರ್ತನೆಯ ಕೃತ್ಯಗಳು ಹೆಚ್ಚುತ್ತಿವೆ.
ಇನ್ನು ಮೂಗ ಗಂಡನೊಂದಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಕಟ್ಟಿಕೊಳ್ತಿದ್ದ ಮಹಿಳೆ ಈಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸುಗಂಧಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ವರೆಗೂ ಅರೋಪಿ ಕಲ್ಯಾಣಿಯನ್ನು ಪೊಲೀಸರು ಬಂಧಿಸಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ. ಮಹಿಳೆ ಆರೋಗ್ಯ ವಿಚಾರಿಸುವ ಕೆಲಸ ಮಾಡಿಲ್ಲ.
ಈ ಘಟನೆ ಸಂಬಂಧ ಅಂಗನವಾಡಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂದಾ ನೇವಗಿ ಪ್ರತಿಕ್ರಿಯೆ ನೀಡಿದ್ದು, ಅಂಗನವಾಡಿ ಮಕ್ಕಳನ್ನ ಶೌಚಾಲಯಕ್ಕೆ ಸುಗಂಧಾ ಕರೆದುಕೊಂಡು ಹೋಗಿದ್ದಾರೆ. ಆಗ ಮಕ್ಕಳು ಹೂ ಕೀಳುವುದನ್ನ ಕಂಡ ಕಲ್ಯಾಣಿ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಮಹಿಳೆ ಐಸಿಯುವಿನಲ್ಲಿದ್ದಾರೆ. ಈ ರೀತಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ ಆದ್ರೆ ಹೇಗೆ ಕೆಲಸ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿ ಈ ರೀತಿ ಆಗಿದೆ. ಕೂಡಲೇ ಹಲ್ಲೆ ಮಾಡಿದವನ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವರೆಗೂ ಆರೋಪಿಯ ಬಂಧನ ಆಗಿಲ್ಲ. ಮಹಿಳೆಯರನ್ನ ಅಕ್ಕಾ ಅಂತಾ ಹೇಳುವ ಸಚಿವೆ ಈ ವರೆಗೂ ಆಸ್ಪತ್ರೆಗೆ ಬಂದಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿ ಸಚಿವರು ಹೇಳಿದಂತೆ ನಡೆದುಕೊಳ್ಳಲಿ ಎಂದರು.
ನಾಲ್ಕು ಘಟನೆಗಳು ನಡೆದರೂ ನಿದ್ದೆಯಲ್ಲಿದೆಯಾ ಖಾಕಿ?
ಪದೇ ಪದೇ ಬೆಳಗಾವಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಘಟನೆಗಳನ್ನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ಘಟನೆ-1: ಅಕ್ಟೋಬರ್ 14ರಂದು ಘಟಪ್ರಭಾದಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಿತ್ತು. ಮಧ್ಯರಾತ್ರಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಈ ಘಟನೆ ಸಂಬಂಧ ಈ ವರೆಗೆ ಕೇವಲ ಒಬ್ಬ ಆರೋಪಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ.
ಘಟನೆ-2: ಡಿ.10ರಂದು ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಮಧ್ಯರಾತ್ರಿ ಮಹಿಳೆಯನ್ನ ಮನೆಯಿಂದ ಎಳೆತಂದು ಬೆತ್ತಲೆಗೊಳಿಸಿ ಹಲ್ಲೆ ನಡೆದಿತ್ತು. ಘಟನೆ ನಡೆದಾಗ ಸ್ಥಳಕ್ಕೆ ಹೋಗಲು ಸಿಪಿಐ ತಡ ಮಾಡಿದ್ದಕ್ಕೆ ಅಮಾನತು ಆಗಿದ್ದರು. ಘಟನೆ ಸಂಬಂಧ ಹದಿಮೂರು ಜನ ಆರೋಪಿಗಳನ್ನ ಬಂಧಿಸಲಾಗಿದೆ.
ಘಟನೆ-3: ಡಿ.24ರಂದು ತಿಗಡಿ ಗ್ರಾಮದಲ್ಲಿ ಮಹಿಳೆ ಅರೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿತ್ತು. ಜಮೀನಿನಲ್ಲಿ ಹೋಗಿದ್ದ ಪೈಪ್ ಲೈನ್ ತೆಗೆಯುವಂತೆ ಒತ್ತಾಯಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಇಪ್ಪತ್ತು ಜನರ ಮೇಲೆ ಕೇಸ್ ದಾಖಲಿಸಲಾಗಿತ್ತು. ಆದರೆ ಆರೋಪಿಗಳನ್ನು ಅರೆಸ್ಟ್ ಮಾಡಿರಲಿಲ್ಲ.
ಘಟನೆ-4: ಜ.1ಕ್ಕೆ ಹೂ ಕಿತ್ತಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಮೂಗು ಕಟ್ ಮಾಡಿ ರಾಕ್ಷಸೀ ವರ್ತನೆ ತೋರಲಾಗಿದೆ. ಘಟನೆ ನಡೆದು ಮೂರು ದಿನವಾಗುತ್ತಿದ್ದರೂ ಇನ್ನೂ ಘಟನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ದೌರ್ಜನ್ಯಗಳು ನಡೆಯುತ್ತಿದ್ರೂ ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:13 am, Wed, 3 January 24