ಬೆಳಗಾವಿ: ಕಸದ ತೊಟ್ಟಿಯಲ್ಲಿ ಸಿಕ್ಕ ವಿಶೇಷ ಚೇತನ ಕಂದನಿಗೆ ಇಟಲಿ ದಂಪತಿಯ ಅಪ್ಪುಗೆ

ಬೆಳಗಾವಿಯಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ ವಿಶೇಷ ಚೇತನ ಮಗುವನ್ನು ಇಟಲಿಯ ದಂಪತಿ ದತ್ತು ಪಡೆದಿದ್ದಾರೆ. ದಂಪತಿ ಶಿಶುವಿನ ಆರೈಕೆ ಮತ್ತು ಚಿಕಿತ್ಸೆಯಲ್ಲೂ ಸಹಾಯ ಮಾಡಿದ್ದಾರೆ. ಚಿಕ್ಕುಂಬಿ ಮಠದ ಅನಾಥಾಶ್ರಮದಿಂದ ವಿದೇಶಕ್ಕೆ ಹೋದ 13ನೇ ಮಗು ಇದಾಗಿದೆ. ಇಟಲಿ ದಂಪತಿಯ ಮಾನವೀಯ ಕ್ರಿಯೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಕಸದ ತೊಟ್ಟಿಯಲ್ಲಿ ಸಿಕ್ಕ ವಿಶೇಷ ಚೇತನ ಕಂದನಿಗೆ ಇಟಲಿ ದಂಪತಿಯ ಅಪ್ಪುಗೆ
ವಿಶೇಷ ಚೇತನ ಕಂದನಿಗೆ ಇಟಲಿ ದಂಪತಿಯ ಅಪ್ಪುಗೆ
Edited By:

Updated on: Feb 18, 2025 | 10:52 AM

ಬೆಳಗಾವಿ, ಫೆಬ್ರವರಿ 18: ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಇಟಲಿ (Italy) ಮೂಲದ ದಂಪತಿ ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಎರಡೂವರೆ ವರ್ಷದ ಕಂದಮ್ಮ ಬೆಳಗಾವಿಯಿಂದ (Belagavi) ಇಟಲಿಗೆ ಹಾರಿದೆ.

ವಿಶೇಷ ಚೇತನ ಎಂಬ ಕಾರಣಕ್ಕೆ ಹೆತ್ತವರು ಎರಡು ವರ್ಷದ ಹಿಂದೆ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದರು. ಆಗ, ಸ್ಥಳೀಯರ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಮಗು ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿ ಮಠದ ಕೇಂದ್ರದ (ಅನಾಥಾಶ್ರಮ) ಆರೈಕೆಯಲ್ಲಿತ್ತು.

ಆಶ್ರಮದಲ್ಲಿನ ಯಾವುದಾರು ಒಂದು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದ ಇಟಲಿ ದಂಪತಿ ಆರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದೆ ವಿಶೇಷ ಚೇತನ ಮಗುವಿನ ಬಗ್ಗೆ ಆಶ್ರಮದಿಂದ ಮಾಹಿತಿ ಪಡೆದಿದ್ದರು. ಬಳಿಕ, ವಿಶೇಷ ಚೇತನ ಮಗುವಿನ ಆರೈಕೆ, ಚಿಕಿತ್ಸೆಗೆ ಇಟಲಿ ಮೂಲದ ಪಿಜಿಷಿಯನ್ ಡಾ.ಕೂಸ್ತಾಂನ್ಸಾ ಮತ್ತು ಬುಯಾರ್ ಡೆಡೆ ದಂಪತಿ ಸಹಾಯ ಮಾಡುತ್ತಿದ್ದರು.

ಇದೀಗ, ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆಯನ್ನು ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ. ಬೆಳಗಾವಿಯ ಚಿಕ್ಕುಂಬಿ ಮಠದ ಆಶ್ರಮದಿಂದ ವಿದೇಶಕ್ಕೆ ಹಾರಿರುವ 13 ನೇ ಮಗು ಇದಾಗಿದೆ.

ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹುಲಿ ದತ್ತು ಪಡೆದ ಸಂಯುಕ್ತಾ ಹೊರನಾಡು

“ನಂಬಿಕಸ್ಥರು, ಸುಸಂಸ್ಕೃತರೆಂಬ ಕಾರಣಕ್ಕೆ ಭಾರತೀಯ ಮಗು ದತ್ತು ಪಡೆಯುತ್ತಿದ್ದೇವೆ. ವಿಶೇಷ ಚೇತನ ಮಗುವಿನ ಭವಿಷ್ಯ ರೂಪಿಸಿದ ಧನ್ಯತೆಯ ಕಾರಣಕ್ಕೆ ನಮ್ಮ ಆಯ್ಕೆ ಇದಾಗಿದೆ” ಎಂದು ಡಾ.ಕೂಸ್ತಾಂನ್ಸಾ ದಂಪತಿ ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 am, Tue, 18 February 25