ಬೆಳಗಾವಿ: ಕೃಷ್ಣ ತೀರದ ಜನರ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ಜಾತ್ರೆ, ಫೋಟೋಸ್ ನೋಡಿ
ಬೆಳಗಾವಿಯ ಚಿಂಚಲಿ ಗ್ರಾಮದಲ್ಲಿ ನಡೆಯುವ ಚಿಂಚಲಿ ಮಾಯಕ್ಕ ಜಾತ್ರೆ 21 ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಅರ್ಧನಾರೇಶ್ವರಿ ರೂಪದ ದೇವಿ ಮಾಯಕ್ಕಳ ಮಹಿಮೆಯನ್ನು ವರ್ಣಿಸುವ ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಂಡಾರದೋಕುಳಿ, ಕುದುರೆ ಮತ್ತು ಎತ್ತಿನ ಸವಾರಿಗಳು ಜಾತ್ರೆಯ ವಿಶೇಷ ಆಕರ್ಷಣೆಗಳು. ಭಕ್ತರು ತಮ್ಮ ಹರಕೆಗಳನ್ನು ಈಡೇರಿಸಲು ಭಂಡಾರ ಎರಚುತ್ತಾರೆ. ಈ ಜಾತ್ರೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ವಿವರ ಇಲ್ಲಿದೆ.
Updated on:Feb 18, 2025 | 7:56 AM

ಕೃಷ್ಣಾ ನದಿ ದಂಡೆ ಮೇಲೆ ನೆಲಸಿರುವ ಚಿಂಚಲಿ ಮಾಯಕ್ಕ ಜಾತ್ರೆ ಅದ್ದೂರಿಯಾಗಿ ಆರಂಭಗೊಂಡಿದೆ. ಅರ್ಧನಾರೇಶ್ವರಿ ರೂಪದಲ್ಲಿ ಭೂಮಿಗೆ ಬಂದ ದೇವಿ ರಾಕ್ಷಸರನ್ನು ಸಂಹಾರ ಮಾಡಿ ಗಡಿ ಭಾಗದಲ್ಲೇ ನೆಲಸಿದ್ದಾಳೆ. 21ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಸೋಮವಾರ (ಫೆ.18) ರಂದು ಒಂದೇ ದಿನ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದು ಧನ್ಯರಾಗಿದ್ದಾರೆ. ಅಷ್ಟಕ್ಕೂ ದೇವಿಯ ಮಹಿಮೆ ಎಂತಹದ್ದು? ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಈ ಬಾರಿ ಹರಿದು ಬಂದ ಜನಸಾಗರ ಎಂತಹದ್ದು? ಭಂಡಾರದೋಕುಳಿಯ ಮಹತ್ವವೇನು? ಇಲ್ಲಿದೆ ವಿವರ.

ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾಯಕ್ಕ ದೇವಿ ಜಾತ್ರಾ ಮಹೋತ್ಸವ ಆರಂಭವಾಗಿದೆ. ಫೆ.12ರಂದು ಅದ್ದೂರಿಯಾಗಿ ಜಾತ್ರೆ ಆರಂಭಗೊಂಡಿದೆ, ಹೀಗೆ ಶುರುವಾದ ಜಾತ್ರೆಯ ಐದನೇ ದಿನ ಫಲ್ಲಕ್ಕಿ ಉತ್ಸವ ನಡೆದಿದ್ದು ಭಂಡಾರದೋಕುಳಿ ಆಡಿ ಭಕ್ತರು ಭಕ್ತಿ ಭಾವ ಮೆರೆದಿದ್ದಾರೆ. ಈ ದೇವಿಗೆ ಹರಕೆ ಕಟ್ಟಿಕೊಂಡು ಬರುವ ಭಕ್ತರು ಭಂಡಾರ ಎರಚಿ ತಮ್ಮ ಹರಕೆಯನ್ನ ತೀರಿಸುತ್ತಾರೆ.

ಫಲ್ಲಕ್ಕಿ ಉತ್ಸವದ ಜೊತೆಗೆ ಕುದುರೆ ಮತ್ತು ಎತ್ತಿನ ಸವಾರಿ ಕೂಡ ನಡೆಯುವುದು ವಿಶೇಷವಾಗಿದೆ. ಇದೇ ವೇಳೆ ಕೆಲ ಭಕ್ತರ ಮೈಮೇಲೆ ದೇವಿ ಬರುತ್ತಾಳೆ ಅನ್ನೋ ಪ್ರತಿತಿ ಇದ್ದು, ಕೆಲವರು ಕೊಲು ಹಿಡಿದು ಕುಣಿದು ದೇವಿಯನ್ನ ಆರಾಧನೆ ಮಾಡುತ್ತಾರೆ.

ಚಿಂಚಲಿ ಗ್ರಾಮದ ಸುತ್ತಮುತ್ತ ಕೀಲಿಕಿಟ್ಟ ಎಂಬ ರಾಕ್ಷಸರು ಅಟ್ಟಹಾಸ ಮೆರೆಯುತ್ತಿದ್ದರು. ಆಗ ದೇವಿ ಅರ್ಧನಾರೇಶ್ವರಿ ರೂಪದಲ್ಲಿ ಧರೆಗೆ ಬಂದು ರಾಕ್ಷಸರ ಸಂಹಾರ ಮಾಡಿ ಬಳಿಕ ಕೃಷ್ಣಾ ನದಿ ದಂಡೆ ಮೇಲೆ ನೆಲಸಿ ಇಲ್ಲಿಯೇ ಚಿಂಚಲಿ ಮಾಯಕ್ಕಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.

ದೇವಿಗೆ ಮಕ್ಕಳಾಗದವರು, ನೌಕರಿ ಇಲ್ಲದವರು, ಮದುವೆಯಾಗದವರು, ಕಷ್ಟ ಕಾರ್ಪಣ್ಯ ಎದರಿಸುವವರು ದೇವಿಗೆ ಭಂಡಾರ ಎರಚುವ ಹರಕೆ ಕಟ್ಟಿಕೊಳ್ತಾರೆ. ತಮ್ಮ ಹರಕೆ ಈಡೇರಿದ ಬಳಿಕ ಕುಟುಂಬ ಸಮೇತ ಬಂದು ಭಂಡಾರ ಎರಚಿ ಹರಕೆ ತೀರಿಸುತ್ತಾರೆ.

ಜಾತ್ರೆ ಆರಂಭವಾದ ಐದನೇ ದಿನಕ್ಕೆ ಬರೋಬ್ಬರಿ 15-20 ಲಕ್ಷ ಜನರು ದೇವಿಯ ದರ್ಶನ ಪಡೆದು ಧನ್ಯರಾಗಿದ್ದಾರೆ. ದೇವಿ ಜಾತ್ರೆಗೆ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ದೇಶದಿಂದಲೂ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.

21ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ನಿತ್ಯವೂ ಒಂದೊಂದು ರೀತಿಯಲ್ಲಿ ಪೂಜೆ-ಪುನಸ್ಕಾರ ಮಾಡುವುದರ ಜೊತೆಗೆ ದೇವಿಯನ್ನ ಆರಾಧನೆ ಮಾಡಲಾಗುತ್ತೆ. ದೂರದ ಊರುಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನವನ್ನ ಪಡೆದು ಹೋಗುತ್ತಾರೆ. ದಕ್ಷಿಣ ಕಾಶಿಯಂದೇ ಖ್ಯಾತಿ ಪಡೆದಿರುವ ಚಿಂಚಲಿ ಮಾಯಕ್ಕ ದೇವಿ ಕ್ಷೇತ್ರದ ಮಹಿಮೆ ಉತ್ತರ ಕರ್ನಾಟ, ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಾಗಿದ್ದು ಹೀಗಾಗಿ ಜಾತ್ರೆ ಸಮದಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
Published On - 7:56 am, Tue, 18 February 25
























