ಬೆಳಗಾವಿ, ಜನವರಿ 17: ಇತ್ತೀಚಿಗೆ ನನ್ನ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನನ್ನಮ್ಮ ನನಗೆ ಎದೆ ಹಾಲು ಕುಡಿಸಿದ್ದಾಳೆ, ಬಾಟಲಿ ಹಾಲು ಕುಡಿಸಿಲ್ಲ. ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ಇದರ ಬಗ್ಗೆ ಯಾರಾದರೂ ಮಾತಾಡಿದರೆ ಹುಷಾರ್ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಲ್ಲಿ ಮಾತನಾಡಿದ ಅವರು, ನಮ್ಮ ರಾಮ, ಹಿಂದೂಗಳು, ಹಿರಿಯರ ಬಗ್ಗೆ ಮಾತಾಡಿದರೆ ಸಹಿಸಲ್ಲ. ಅವರು ಮೈಸೂರು ಗರಡಿಯಲ್ಲಿ ಬೆಳೆದಿದ್ದರೆ. ನಾನು ಕೂಡ ಮೈಸೂರು ಗರಡಿಯಲ್ಲಿಯೇ ಬೆಳೆದವನು ಎಂದು ಸಿಎಂ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ನಮ್ಮವರಿಗೆ ಏಕವಚನದಲ್ಲಿ ಮಾತಾಡಿದರೆ ಏನು ಮಾಡಲಿ? ಯುದ್ಧಭೂಮಿಯಲ್ಲಿ ಶಾಸ್ತ್ರೀಯ ಸಂಗೀತ, ಭರತ ನಾಟ್ಯಕ್ಕೆ ಅವಕಾಶವಿಲ್ಲ. ಯುದ್ಧಭೂಮಿಯಲ್ಲಿ ಹೇಗೆ ಮಾತಾಡಬೇಕೋ ಹಾಗೇ ಮಾತಾಡಬೇಕು
ಅಲ್ಲಿ ಹೋಗಿ ಭರತ ನಾಟ್ಯ ಮಾಡೋಕೆ ಆಗುತ್ತಾ ಎಂದಿದ್ದಾರೆ.
ನನಗೆ ಮತ ನೀಡಿದವರು ನೀವು. ನೀವು ಸ್ವಾಭಿಮಾನದಿಂದ ಮತ ನೀಡಿದ್ದು ನಿಜವಾದರೆ ನಾನು ಹೇಳಿದ್ದು ಸರಿ. ನಾನು ಬೇಡವೆಂದರೂ ನನ್ನ ಬೆನ್ನು ಬಿದ್ದವರು ನೀವು. ನಿಮ್ಮ ಪ್ರೀತಿಯಿಂದಲೇ ಇವತ್ತು ನಾನು ಇಲ್ಲಿದ್ದೇನೆ. ನಿಮಗೆ ನಾನು ಯಾವತ್ತೂ ಋಣಿ. ಕೊನೆಯವರೆಗೂ ನಾನು ನಿಮ್ಮೊಂದಿಗೆ ಇದ್ದೇನೆ. ಇದುವರೆಗೂ ನನ್ನ ಹಣೆ ಮೇಲೆ ಅಪವಾದವನ್ನು ದೇವರು ಬರೆದಿಲ್ಲ. ಇಲ್ಲಿ ನಿಮ್ಮ ಮುಂದೊಂದು ಭಾಷಣ. ಅಲ್ಲಿ ಹೋಗಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಇಂಥದ್ದು ಈ ನನ್ನ ರಕ್ತದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಕುಟುಂಬ ಬಲಿಯಾಯಿತು: ಅನಂತಕುಮಾರ್ ಹೆಗಡೆ
ಮಹಾಸಂಗ್ರಾಮ ಶುರುವಾಗಿದೆ. ‘ನಾವು ಗೆದ್ದೆವು’ ಅನ್ನೋದಲ್ಲ, ಗೆದ್ಸಿದ್ದೇವೆ ಅಂತಾ ಗಟ್ಟಿಯಾಗಿ ಬರಬೇಕು. ಗಂಡು ದನಿಯ ನೆಲವಿದು. ಗಟ್ಟಿಯಾಗಿ ಮಾತಾಡಬೇಕು. ಅಭ್ಯರ್ಥಿ ಯಾರೇ ಆಗಿರಲಿ. ಈ ಕ್ಷೇತ್ರದಲ್ಲಿ ರಾಷ್ಟ್ರೀಯ ದಾಖಲೆಯಾಗಬೇಕು. ಭಗವಂತ ನಮ್ಮ ಜೊತೆಗಿದ್ದಾನೆ. ಈ ಬಾರಿ ಗೆಲುವು ದೇವರಿಗೆ ಬೇಕಾಗಿದೆ. ಏಕೆಂದರೆ ಈ ಗೆಲವು ಆತನಿಗೂ ಬೇಕಾಗಿದೆ. ಎಲ್ಲ ದೇವಸ್ಥಾನಗಳ ಮುಕ್ತಿಯಾಗಬೇಕಿದೆ. ಇಲ್ಲವಾದರೆ ಅವನಿಗೂ ಇಲ್ಲಿ ಜಾಗ ಇರುವುದಿಲ್ಲ. ಹೀಗಾಗಿ ಈ ಬಾರಿಯ ಗೆಲುವು ಅವನೇ ಎಂದರು.
ಕಾಶಿ, ಮಥುರಾ ದೇವಸ್ಥಾನ ವಿಚಾರ ಬಾಕಿ ಇದೆ. ಎಲ್ಲ ಕಡೆಗೂ ಬದಲಾವಣೆ ಆಗುತ್ತಿದೆ. ಇಲ್ಲಿಯೂ ಎಲ್ಲವೂ ಬದಲಾವಣೆ ಆಗಲಿದೆ. ಜಗತ್ತಿನ ಅನೇಕ ಕಡೆ ದೀಪಾವಳಿ ಆಚರಿಸಲಾಗುತ್ತೆ. ಆದರೆ ನಮ್ಮಲ್ಲಿ ಕೊಂಕು ಮಾತನಾಡುವವರು ಇದ್ದಾರೆ. ವಿದೇಶಗಳಲ್ಲಿಯೂ ದೀಪಾವಳಿಗೆ ರಜೆ ಕೊಡಲಾಗುತ್ತೆ. ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯ ಆರಂಭ ಎಂದಿದ್ದಕ್ಕೆ ಕೆಲವರಿಗೆ ಎಲ್ಲೆಲ್ಲೋ ಹರಿದು ಹೋಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.