ಬೆಳಗಾವಿ, ಜುಲೈ.21: ಬೆಳಗಾವಿ ಜಿಲ್ಲೆಗೆ ಸಪ್ತ ನದಿಗಳ ನೆರೆ ಭೀತಿ ಶುರುವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಐದು ದಿನದಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಪಶ್ಚಿಮ ಘಟ್ಟಗಳಲ್ಲೂ ಮಳೆ ಜೋರಾಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಏಳು ಸೇತುವೆಗಳು ಜಲಾವೃತಗೊಂಡಿವೆ. ಬೆಳಗಾವಿ ವ್ಯಾಪ್ತಿಯಲ್ಲಿ ಹತ್ತು ಸಂಪರ್ಕ ಸೇತುವೆ ಮುಳುಗಿವೆ. ದೂದಗಂಗಾ ನದಿಗೆ ದತ್ತವಾಡ-ಮಲ್ಲಿಕವಾಡ, ಬೋಜ್-ಕಾರದಗಾ, ಬೋಜವಾಡಿ-ಕುಣ್ಣೂರ, ವೇದಗಂಗಾ ನದಿಗೆ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಕೃಷ್ಣಾ ನದಿಗೆ ಮಾಂಜರಿ-ಬಾವನಸೌದತ್ತಿ, ಹಿರಣ್ಯಕೇಶಿ ನದಿಗೆ ಯರನಾಳ-ಮದಮಕ್ಕನಾಳ, ಘಟಪ್ರಭಾ ನದಿಗೆ ಸುಣಧೋಳಿ-ಮೂಡಲಗಿ, ಅವರಾದಿ-ನಂದಗಾಂವ, ಕಮಲದಿನ್ನಿ-ಹುಣಶ್ಯಾಳ ಪಿವೈ, ವಡ್ಡರಹಟ್ಟಿ-ಉದಗಟ್ಟಿ, ಗೋಕಾಕ್-ಶಿಂಗಳಾಪುರ, ಮಲಪ್ರಭಾಗೆ ಖಾನಾಪುರ-ಹೆಮ್ಮಡಗಾ, ಸಾತ್ನಾಳಿ-ಮಾಸಾಳಿ ಸಂಪರ್ಕ ಕಡಿತಗೊಂಡಿದೆ.
ಬರೋಬ್ಬರಿ 34 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು ಜಿಲ್ಲೆಯ ಜನ ಸಂಕಷ್ಟದಲ್ಲಿದ್ದಾರೆ. ಕೆಲವು ಗ್ರಾಮಸ್ಥರು ಕಿ.ಮೀ. ಗಟ್ಟಲೇ ಸುತ್ತಿ ಹಾಕಿ ಓಡಾಡುತ್ತಿದ್ದಾರೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ನದಿಗಳು ಅಬ್ಬರಿಸುತ್ತಿದ್ದರೂ ಡಿಸಿ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳದೇ ಬೇಜವಾಬ್ದಾರಿತನ ತೋರಿದ್ದಾರೆ. ಆದರೂ ಡಿಸಿ ಮೊಹಮ್ಮದ್ ರೋಷನ್ ಯಾವುದೇ ತೊಂದರೆ ಇಲ್ಲ ಅಂತಿದ್ದಾರೆ.
ಇದನ್ನೂ ಓದಿ: ಗೌರಿಕುಂಡ್ ಬಳಿ ಭೂಕುಸಿತ; ಕೇದಾರನಾಥಕ್ಕೆ ಹೋಗುತ್ತಿದ್ದ ಮೂವರು ಯಾತ್ರಿಕರ ಸಾವು; ಎಂಟು ಮಂದಿಗೆ ಗಾಯ
ಪಶ್ಚಿಮ ಘಟ್ಟಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 4 ಸೇತುವೆಗಳು ಜಲಾವೃತಗೊಂಡಿವೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ 4 ಸೇತುವೆಗಳು ಮುಳುಗಿವೆ. ಸುಣಧೋಳಿ-ಮೂಡಲಗಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್, ಅವರಾದಿ-ನಂದಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್, ಕಮಲದಿನ್ನಿ-ಹುಣಶ್ಯಾಳ ಪಿ.ವೈ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ, ವಡ್ಡರಹಟ್ಟಿ-ಗೋಕಾಕ್ ತಾಲೂಕಿನ ಉದಗಟ್ಟಿ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. 4 ಸೇತುವೆಗಳ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ