ಬೆಳಗಾವಿ ಅ.29: ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪ್ರತಿವರ್ಷ ರಾಜ್ಯೋತ್ಸವದಂದು ವಿರೋಧದ ನಡುವೆಯೂ ಕರಾಳ ದಿನಾಚರಣೆ ಆಚರಿಸುತ್ತ ಬರುತ್ತಿದೆ. ಅದರಂತೆ ಈ ವರ್ಷವೂ ನವೆಂಬರ್ 1 ರಂದು ಬೆಳಗಾವಿಯಲ್ಲಿ (Belagavi) ಕರಾಳ ದಿನಾಚರಣೆ ಆಚರಿಸಲು ಎಂಇಎಸ್ ಸಿದ್ಧತೆ ನಡೆಸುತ್ತಿದೆ. ಈ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಬೆಂಬಲ ವ್ಯಕ್ತಪಡಿಸುವ ಮೂಲಕ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹೌದು ನೆವೆಂಬರ್ 1ರಂದು ಎಂಇಎಸ್ನ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಪ್ರತಿನಿಧಿ ಕಳಿಸುವುದಾಗಿ ಸಿಎಂ ಶಿಂಧೆ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಕರಾಳ ದಿನಾಚರಣೆ ಮಾಡದಂತೆ ಎಂಇಎಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದರು. ಕರಾಳ ದಿನಾಚರಣಗೆ ಅನುಮತಿ ನೀಡಿಲ್ಲ. ಅಷ್ಟೂ ಮೀರಿ ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಖಡಕ್ ಸಂದೇಶ ರವಾನಿಸಿದ್ದರು. ಅಲ್ಲದೇ ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧಿಸುವುದಾಗಿ ಹೇಳಿದ್ದರು.
ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬೆಂಬಲ ನೀಡುತ್ತಿದ್ದಂತೆ ಆ್ಯಕ್ಟೀವ್ ಆದ ನಾಡದ್ರೋಹಿ ಸಂಘಟನೆ ಕಾರ್ಯಕರ್ತರು ನವೆಂಬರ್ 1ರಂದು ಕರಾಳ ದಿನಾಚರಣೆ ಮಾಡಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: Kannada Rajyotsava 2023: ಈ ಬಾರಿ 10 ಸಂಘ ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನ
ಮಹಾರಾಷ್ಟ್ರ ನಾಯಕರನ್ನು ಕರಾಳ ದಿನಾಚರಣೆಗೆ ಕಳುಹಿಸುವುದಾಗಿ ಸಿಎಂ ಶಿಂಧೆ ಹೇಳಿರುವ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡರು ಸಭೆ ಕರೆದು ಕರಾಳ ದಿನಾಚರಣೆ ಕುರಿತು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯೊಳಗೆ ಸಂಸದ ಧೈರ್ಯಶೀಲ ಮಾನೆ, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರನ್ನು ಕರೆತರಲು ಪ್ಲ್ಯಾನ್ ಮಾಡಿದ್ದಾರೆ.
ಗಡಿ ಭಾಗದಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ಆರಂಭ ಮಾಡುತ್ತಿದೆ. ಇದರಿಂದ ಗಡಿ ಭಾಗದ ಮರಾಠಿಗರನ್ನ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಕೂಡಲೇ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ತಡೆ ಹಾಕಬೇಕು. ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು. ಡಿಸಿ ಮೂಲಕ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ ಮನವಿ ಸಲ್ಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ