ಬೆಳಗಾವಿ, ಮೇ 23: ಚುನಾವಣೆ ಮಾದರಿ ನೀತಿ ಸಂಹಿತೆ (Model code of conduct) ಹೆಸರಲ್ಲಿ ಬೆಳಗಾವಿ ಮೇಯರ್ (Belagavi Mayor), ಉಪಮೇಯರ್ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಅಭಯ್ ಪಾಟೀಲ್ (Abhay Patil) ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಕಚೇರಿಗೂ ಬೀಗ ಹಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ, ಮಳೆಯಿಂದ ಅನಾಹುತಗಳು, ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ಕಸ ವಿಲೇವಾರಿ ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕಿದ್ದ ಮೇಯರ್ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದು, ಶಾಸಕರ ಸಿಟ್ಟಿಗೆ ಕಾರಣವಾಗಿದೆ.
ಕಾರು ಸುಪರ್ದಿಗೆ ಪಡೆಯುವುದು ಪದ್ಧತಿ. ಅದರ ಪ್ರಕಾರ ಅಧಿಕಾರಿಗಳು ಕೆಲಸ ಮಾಡಲಿ. ಅದನ್ನು ಬಿಟ್ಟು ನೀತಿ ಸಂಹಿತೆ ಹೆಸರಲ್ಲಿ ಮೇಯರ್, ಉಪಮೇಯರ್ ಕಚೇರಿಗೆ ಬೀಗ ಹಾಕುವುದು ಸರಿಯಲ್ಲ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂಥದೊಂದು ಪದ್ಧತಿಗೆ ಅಧಿಕಾರಿಗಳು ನಾಂದಿ ಹಾಡಿದ್ದಾರೆಂದು ಅಭಯ ಪಾಟೀಲ್ ಕಿಡಿ ಕಾರಿದರು.
ಹೊಸ ಕೆಲಸ, ಹೊಸ ಯೋಜನೆ ಘೋಷಣೆ ಮಾಡಬಾರದು ಎಂದು ನೀತಿ ಸಂಹಿತೆ ಹೇಳುತ್ತದೆ. ಆದರೆ ಕೆಲಸ ಮಾಡುವ ಕಚೇರಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಕಚೇರಿ ಬೀಗ ತೆಗೆಯದಿದ್ದರೆ ನಿಮ್ಮ ಕಚೇರಿ ಮುಂದೆ ಧರಣಿ ಮಾಡುತ್ತೇವೆ, ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿರುವ ಪಾಟೀಲ್, ಬೀಗ ತೆಗೆಯಲು ಒಂದು ದಿನ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಎಂದು ಅಭಯ್ ಪಾಟೀಲ್ ಹೇಳಿದ್ದಾರೆ. ಸರ್ಕಾರ ಉಳಿಯಲ್ಲ ಎಂಬುದಾಗಿ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. 20ಕ್ಕೂ ಹೆಚ್ಚು ‘ಕೈ’ ಶಾಸಕರೇ ಈ ಬಗ್ಗೆ ನಮ್ಮ ಬಳಿ ಹೇಳಿದ್ದಾರೆ. ಮಹಾರಾಷ್ಟ್ರ ಸಿಎಂ ಶಿಂಧೆ ಮಾದರಿಯಲ್ಲಿ ಸರ್ಕಾರ ಪತನಕ್ಕೆ ಚರ್ಚೆ ನಡೆಯುತ್ತಿದೆ. ಇಲ್ಲವೇ ಹೊಸ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ