ಬೆಳಗಾವಿ, ಆ.28: ಆರ್ಥಿಕ ವಿಚಾರದಲ್ಲಿ ಬೆಂಗಳೂರು ಬಿಬಿಎಂಪಿ ಬಳಿಕ ಬೆಳಗಾವಿ ಮಹಾನಗರ ಪಾಲಿಕೆ(Belagavi City Corporation) ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ರೆ, ಅಧಿಕಾರಿಗಳ ಎಡವಟ್ಟಿನಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ದಿವಾಳಿಯಾಗಿದೆ. ಜೊತೆಗೆ ಧಾರವಾಡ ಹೈಕೋರ್ಟ್ ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು 20 ಕೋಟಿ ಠೇವಣಿಗೆ ನಿರ್ಧರಿಸಲಾಗಿದೆ. ನಿನ್ನೆ(ಆ.27) ನಡೆದ ಪಾಲಿಕೆ ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಸುದೀರ್ಘ 10 ಗಂಟೆಗಳ ಕಾಲ ಪರ ವಿರೋಧ ಚರ್ಚೆ ಬಳಿಕ ಠೇವಣಿ ಇರಿಸಲು ಸಭೆ ತೀರ್ಮಾನಿಸಿದೆ.
20 ಕೋಟಿ ಠೇವಣಿ ಇರಿಸಲು ಆಡಳಿತ ರೂಢ ಬಿಜೆಪಿ ಸದಸ್ಯರು ಸಮ್ಮತಿಸಿದ್ರೆ, ಇದಕ್ಕೆ ವಿಪಕ್ಷ ಸದಸ್ಯರು, ಕಾಂಗ್ರೆಸ್ ಶಾಸಕ ಆಶೀಫ್ ಸೇಠ್ ನೇತೃತ್ವದಲ್ಲಿ ಬಲವಾಗಿ ವಿರೋಧಿಸಿದ್ದಾರೆ. ವಿಪಕ್ಷದ ವಿರೋಧದ ಮಧ್ಯೆ ಮೇಯರ್ ಸವಿತಾ ಕಾಂಬಳೆ ರೂಲಿಂಗ್ ಪಾಸ್ ಮಾಡಿದ್ದಾರೆ. ಬೆಳಗಾವಿ ಉಪ ವಿಭಾಗಾಧಿಕಾರಿ ಹೆಸರಿನಲ್ಲಿ ಠೇವಣಿ ಇರಿಸಲು ತೀರ್ಮಾನಿಸಲಾಗಿದೆ. ಇದೇ 29 ರಂದು ಹೈಕೋರ್ಟ್ ಮುಂದೆ ಮತ್ತೆ ಹಾಜರಾಗಲಿರುವ ಬೆಳಗಾವಿ ಪಾಲಿಕೆ ಆಯುಕ್ತರು, ಬೆಳಗಾವಿ ಎಸಿ ಖುದ್ದು ಠೇವಣಿ ಇರಿಸೋ ದಾಖಲೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ; ಅಧಿಕಾರಿಗಳ ಎಡವಟ್ಟಿಗೆ 20 ಕೋಟಿ ಠೇವಣಿಗೆ ಧಾರವಾಡ ಹೈಕೋರ್ಟ್ ಆದೇಶ
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ನಿರ್ಮಿಸಲಾಗಿದೆ. 2021ರಲ್ಲಿ ರಸ್ತೆ ನಿರ್ಮಿಸುವಾಗ ಭೂಸ್ವಾಧೀನ ಮಾಡಿಕೊಂಡಿಲ್ಲ. ಇದನ್ನ ಪ್ರಶ್ನಿಸಿ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಹೈಕೋರ್ಟ್ ಮೇಟ್ಟಿಲೇರಿದ್ದರು. ಸದ್ಯ ಪಾಲಿಕೆ ಖಾತೆಯಲ್ಲಿ ಇರುವ 39 ಕೋಟಿ 94 ಲಕ್ಷ ತೆರಿಗೆ ಹಣವಿದೆ. ಇದರಲ್ಲಿ 20ಕೋಟಿ ಠೇವಣಿ ಮಾಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಉಳಿದ 19ಕೋಟಿ 94ಲಕ್ಷ ಹಣದಲ್ಲಿ 9ಕೋಟಿ ರೂಪಾಯಿ ಚಾಲ್ತಿಯಿರುವ ಕಾಮಗಾರಿಗೆ ಬಿಲ್ ನೀಡಬೇಕು. ಇದರೊಂದಿಗೆ ಪಾಲಿಕೆ ಸಿಬ್ಬಂದಿ ವೇತನ, ಖರ್ಚು ವೆಚ್ಚಕ್ಕೆ 8 ಕೋಟಿ ಅಧಿಕ ಹಣ ವೆಚ್ಚ ಮಾಡಬೇಕು. ಇಷ್ಟೊಂದು ಖರ್ಚಿನ ಬಳಿಕ ಪಾಲಿಕೆ ಖಾತೆಯಲ್ಲಿ ಬರೀ 1 ಕೋಟಿ ಮೊತ್ತ ಉಳಿಯಲಿದೆ.
ಪ್ರತಿ ತಿಂಗಳು ಪಾಲಿಕೆ ಸಿಬ್ಬಂದಿ ವೇತನ, 58 ವಾರ್ಡುಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲ. ಪ್ರತಿ ತಿಂಗಳು ಸಿಬ್ಬಂದಿ ವೇತನ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಬೆಳಗಾವಿ ಜನರಿಂದ ಬಾಕಿ ಇರುವ ತೆರಿಗೆ ಸಂಗ್ರಹಿಸಲೇಬೇಕು. ಇಲ್ಲವೇ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಬೇಕು. ಈಗಾಗಲೇ ಸರ್ಕಾರವೇ ಪಾಲಿಕೆ ಹಣದಲ್ಲಿ ಪರಿಹಾರ ನೀಡಲು ಸೂಚಿಸಿದ್ದು, ಇದರಿಂದ ಪಾಲಿಕೆ ಆರ್ಥಿಕ ಶಿಸ್ತು ಹಾಳಾಗಿ ಸಾಲದ ಸುಳಿಗೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಬೇಕಾಬಿಟ್ಟಿ ಕಾರ್ಯಭಾರವನ್ನ ನಡೆಸಿದ್ದಾರೆ. ಹೈಕೋರ್ಟ್ 8 ವಾರಗಳ ಕಾಲಾವಕಾಶ ಕೊಟ್ಟರು ಪಾಲಿಕೆ ಪರ ವಕೀಲರು, ಅಧಿಕಾರಿಗಳು ಹಾಜರಾಗಿಲ್ಲ. ಇದರಿಂದ ಹೈಕೋರ್ಟ್ ನ್ಯಾಯಾಂಗ ನಿಂದನೆ ಮಾಡಿದ ಪಾಲಿಕೆ ಆಯುಕ್ತರಿಗೆ ಆಗಸ್ಟ್22 ರಂದು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ನಾಳೆ ಮತ್ತೆ ಹೈಕೋರ್ಟ್ ಮುಂದೆ ಠೇವಣಿ ಇರಸಿ ಹಾಜರಾಗಲು ಸೂಚಿಸಿದೆ. ಇದೊಂದು ಪ್ರಕರಣದಲ್ಲಿ 20 ಕೋಟಿ ಪರಿಹಾರ ಕೊಟ್ಟರೆ, ಹೀಗೆ ಇನ್ನೂ6 ಪ್ರಕರಣದಲ್ಲಿ ನ್ಯಾಯಾಂಗ ನಿಂದನೆಯನ್ನ ಬೆಳಗಾವಿ ಪಾಲಿಕೆ ಎದುರಿಸುತ್ತಿದೆ. ಈ ಎಲ್ಲಾ ಪ್ರಕರಣದ ಮೊತ್ತವನ್ನ ಲೆಕ್ಕಹಾಕಿದ್ರೆ 150 ಕೋಟಿ ಹಣವಾಗುತ್ತದೆ.
ಇದನ್ನೂ ಓದಿ:ಅಧಿವೇಶನ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು
ಸದ್ಯ ಅಧಿಕಾರಿಗಳು ತಾವು ಬಚಾವ್ ಆಗಲು ಬೆಳಗಾವಿ ಪಾಲಿಕೆ ದಿವಾಳಿ ಆಗುವ ಸ್ಥಿತಿಗೆ ತಂದಿದ್ದಾರೆ. ಆಡಳಿತ ರೂಢ ಬಿಜೆಪಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ರೆ ಎಲ್ಲಿ ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಆಗುವ ಭಯದಿಂದ ಅಧಿಕಾರಿಗಳ ಕೈಗೊಂಬೆಯಂತೆ ವರ್ತನೆ ಮಾಡಿದ್ದಾರೆ. ಬೆಳಗಾವಿ ಪಾಲಿಕೆ ತೀರ್ಮಾನವನ್ನ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೀವ್ರವಾಗಿ ವಿರೋಧಿಸಿದ್ದಾರೆ. ಜನರ ಹಿತಾಸಕ್ತಿಯನ್ನ ಅಧಿಕಾರಿಗಳು, ಆಡಳಿತ ರೂಢ ಸದಸ್ಯರ ಬಲಿಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಅದಕ್ಕಾಗಿ ಬೆಳಗಾವಿ ಡಿಸಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ಕೊಡುವುದಾಗಿ ಹೇಳಿದ್ದಾರೆ.
ಇನ್ನು ಕಾನೂನು ವಿಭಾಗದವರು ಕೋರ್ಟ್ಗೆ ಹಾಜರಾಗದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಒತ್ತಡದಿಂದ ಹೇಗೆ ಬೇಕೋ ಹಾಗೇ ಬರೆಸಿಕೊಟ್ಟಿದ್ದಾರೆ. ಆಡಳಿತ ಪಕ್ಷದವರು ಚರ್ಚೆ ಮಾಡಬೇಕಿತ್ತು. ಹಿಂದೆಯೂ ಒಬ್ಬರೇ ನಿರ್ಧಾರ ಮಾಡಿದ್ದರು, ಈಗಲೂ ಅದೇ ಆಗಿದೆ. ಸಂಬಂಧ ಪಟ್ಟ ಮಂತ್ರಿಯವರ ಗಮನಕ್ಕೆ ತೆಗೆದುಕೊಡು ಬರ್ತಿನಿ. ನಿನ್ನೆ ಮಹಾನಗರ ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಮ್ಮತಿಯಿಲ್ಲ. ಕೋರ್ಟ್ ಆದೇಶವಾಗಿದೆ. ಈಗ ಚರ್ಚೆ ಅಷ್ಟೆ ಮಾಡಲು ಸಾಧ್ಯ. ಕೋರ್ಟ್ ಆದೇಶದ ಪ್ರಕಾರ ಆಕ್ಷನ್ ಆಗುತ್ತೆ. 8 ಕೋಟಿ ಜಿಎಸ್‌ಟಿ ಹಣ ಸಹ ಕೊಟ್ಟಿಲ್ಲ, ಹಿಂದಿನ ಪಾಲಿಕೆ ಆಯುಕ್ತ ಜಗದೀಶ ಅವರ ವಿರುದ್ಧ ತನಿಖೆ ಆಗಬೇಕು ಎಂದರು.
ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎಡವಟ್ಟಿನಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ದಿವಾಳಿಗೆ ತಲುಪಿದೆ. ಬೆಳಗಾವಿ ಪಾಲಿಕೆಯಲ್ಲಿ ಈಗ ಮತ್ತೊಂದು ಸುತ್ತಿನ ಬಿಜೆಪಿ, ಕಾಂಗ್ರೆಸ್ ಮಧ್ಯೆ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಸಾರ್ವಜನಿಕರ ಹಣವನ್ನ ಈ ರೀತಿ ಬೇಕಾಬಿಟ್ಟಿಯಾಗಿ ನೀಡುತ್ತಿರುವುದು ನಗರದ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಸ್ಮಾರ್ಟ್ ಸಿಟಿಯಲ್ಲಿ ಆದ ಕಾಮಗಾರಿಗೆ ಅಲ್ಲಿಂದಲೇ ಹಣ ವಸೂಲಿ ಮಾಡಬೇಕು ಎನ್ನುವ ಒತ್ತಾಯ ಕೂಡ ಕೇಳಿ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ