AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿವೇಶನ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೆನ್ನುವುದು ಬಹು ವರ್ಷಗಳ ಬೇಡಿಕೆ. ಇದಕ್ಕಾಗಿ ದಶಕಗಳಿಂದ ಹೋರಾಟ ನಡೆದುಕೊಂಡೇ ಬಂದಿದೆ. ಕಳೆದ ಸಲದ ಬೆಳಗಾವಿ ಅಧಿವೇಶನದಲ್ಲಿ ಇನ್ನೇನು ಘೋಷಣೆ ಆಗಿಯೇ ಬಿಡ್ತು ಎನ್ನುವ ಹಂತಕ್ಕೆ ಬಂದಿತ್ತು. ಆದರೆ, ಇನ್ನುವರೆಗೂ ಬೇಡಿಕೆ ಈಡೇರಲೇ ಇಲ್ಲ. ಈಗ ಪ್ರಸಕ್ತ ಸಾಲಿನ ಅಧಿವೇಶನ ಆರಂಭಗೊಳ್ಳುತ್ತಿರುವ ವೇಳೆಗೆ ಮತ್ತೆ ಧಾರವಾಡ ಪ್ರತ್ಯೇಕ ಪಾಲಿಕೆಯ ಕೂಗೆದ್ದಿದೆ.

ಅಧಿವೇಶನ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು
ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jun 30, 2024 | 3:18 PM

Share

ಧಾರವಾಡ, ಜೂ.30: ರಾಜ್ಯದಲ್ಲಿಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(Hubli-Dharwad Metropolitan Corporation) ಬೆಂಗಳೂರು ನಂತರದ ಅತಿ ದೊಡ್ಡ ಪಾಲಿಕೆ. ಅವಳಿ ನಗರಕ್ಕೆ ಸೇರಿಯೇ ಪಾಲಿಕೆ ಇದ್ದರೂ ಸರಕಾರದಿಂದ ಬರುವ ಅನುದಾನದಲ್ಲಿ ಹುಬ್ಬಳ್ಳಿಗೆ ಸಿಂಹಪಾಲು ಸಿಗುತ್ತೆ ಎನ್ನುವ ಅಸಮಾಧಾನ ಬಹಳ ವರ್ಷಗಳಿಂದ ಧಾರವಾಡ ಜನರಿಗೆ ಇದ್ದೇ ಇದೆ. ಹುಬ್ಬಳ್ಳಿಯಂತೆ ಧಾರವಾಡ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯೂ ಆಗಿಲ್ಲ. ಇದೇ ಕಾರಣಕ್ಕೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕೊಟ್ಟುಬಿಡಿ ಎನ್ನುವ ಹೋರಾಟ ಹಲವಾರು ವರ್ಷಗಳಿಂದ ನಡೆದಿದೆ. ಇದಕ್ಕಾಗಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ನಿರಂತರವಾಗಿ ಪ್ರಯತ್ನ ನಡೆಸಿದೆ.

ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್,​ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಶೀಘ್ರ ಸಿಗಲಿದೆ ಎನ್ನುವ ಸುಳಿವು ಕೊಟ್ಟಿದ್ದರು. ಆದರೆ, ಏನೂ ಆಗಲೇ ಇಲ್ಲ, ಈಗ ಮತ್ತೆ ಪ್ರಸಕ್ತ ಸಾಲಿನ ಅಧಿವೇಶನ ಮುಂದಿನ ತಿಂಗಳಿನಿಂದ ಆರಂಭಗೊಳ್ಳುತ್ತಿದ್ದು, ಈ ಸಲವೂ ಮತ್ತೇ ಧಾರವಾಡ ಪ್ರತ್ಯೇಕ ಪಾಲಿಕೆ ಬೇಡಿಕೆ ಕುರಿತಾಗಿ ಸರ್ಕಾರದ ಮುಂದೆ ಪ್ರಶ್ನೆ ಇಡೋದಾಗಿ ಸ್ಥಳೀಯ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

ಇದನ್ನೂ ಓದಿ:ಸ್ಮಾರ್ಟ್ ಸಿಟಿ ಯೋಜನೆ ಹುಬ್ಬಳ್ಳಿಗಷ್ಟೇ ಸೀಮಿತ ಆರೋಪ; ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನಿರ್ಮಿಸಲು ಆಗ್ರಹ

ಸರಕಾರದಿಂದ ಬರುವ ಅನುದಾನದ ಜೊತೆಗೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲ ಅನುದಾನ ಹುಬ್ಬಳ್ಳಿಗೆ ಬಳಕೆಯಾಗಿದೆ. ಅಲ್ಲದೇ ಮೇಯರ್-ಉಪಮೇಯರ್ ಆಯ್ಕೆಯಲ್ಲಿಯೂ ಧಾರವಾಡಿಗರಿಗೆ ಸಿಕ್ಕ ಅವಕಾಶ ಕಡಿಮೆ. ಹೀಗಾಗಿ ಹುಬ್ಬಳ್ಳಿಯ ನಂಟು ಬೇಡ. ಪ್ರತ್ಯೇಕಿಸಿ ಕೊಟ್ಟು ಬಿಡಿ ಎಂದು ಇಲ್ಲಿನವರ ಆಗ್ರಹವಾಗಿದೆ. ಒಂದು ಮಹಾನಗರ ಪಾಲಿಕೆ ರಚನೆಯಾಗಬೇಕಾದರೆ ಮೂರು ಲಕ್ಷ ಜನಸಂಖ್ಯೆ ಬೇಕು, ವಾರ್ಷಿಕ 6 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕು. ಈ ಎಲ್ಲ ಮಾನದಂಡಗಳನ್ನು ಧಾರವಾಡ ಹೊಂದಿದೆ. ಈಗಾಗಲೇ ಧಾರವಾಡಕ್ಕೆ ಪ್ರತ್ಯೇಕ ಕಚೇರಿಯೂ ಇದೆ. ಹೀಗಾಗಿ ಘೋಷಣೆಯೊಂದೆ ಆಗಬೇಕಿದೆ.

ಇನ್ನು ಹಿಂದಿನ ಸಲ ಬಿಜೆಪಿಯದ್ದೇ ಸರ್ಕಾರ ಇತ್ತು. ಆಗ ನಾವು ಎಷ್ಟೊ ಸಲ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಆದರೆ ಈಗ ಬೆಲ್ಲದ್ ಅವರು ತಮ್ಮ ಸರ್ಕಾರ ಇಲ್ಲದೇ ಇರೋವಾಗ ಧ್ವನಿ ಎತ್ತೋದಾಗಿ ಹೇಳುತ್ತಿದ್ದು, ಏನಾಗುತ್ತದೆ ನೋಡೋಣ ಎಂದು ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ಸಲ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಳೀಯರು ಶಾಸಕರು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದರು. ಇದರ ಪರಿಣಾಮವಾಗಿಯೇ ನಗರಾಭಿವೃದ್ಧಿ ಸಚಿವರು, ಪಾಲಿಕೆ ಆಗಿಯೇ ಬಿಡುತ್ತೆ ಅನ್ನೋ ಅರ್ಥದಲ್ಲಿ ಭರವಸೆ ನೀಡಿ ಬಿಟ್ಟಿದ್ದರು. ಆದರೆ ಇನ್ನುವರೆಗೂ ಆ ಭರವಸೆ ಹಾಗೆಯೇ ಉಳಿದಿದ್ದು, ಇನ್ನಾದರೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಭಾಗ್ಯ ಸಿಗುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ