ಬೆಳಗಾವಿ, ಫೆ.23: ಜಿಲ್ಲೆಯ ಕಿತ್ತೂರು(Kittur)ಪಟ್ಟಣದ ಸೋಮವಾರಪೇಟೆ ನೇಕಾರ ಕಾಲೋನಿಯ ನಿವಾಸಿ ಮುತ್ತುರಾಜ ಇಟಗಿ ಎಂಬಾತ ಮನೆ ಮುಂಭಾಗದಲ್ಲಿದ್ದ 21ವರ್ಷದ ಯುವತಿಗೆ ಮರಳು ಮಾಡಿ ತನ್ನ ಪ್ರೇಮದಲ್ಲಿ ಬೀಳಿಸಿಕೊಂಡಿದ್ದ. ಆರಂಭದಲ್ಲಿ ಸ್ನೇಹವಾಗಿ ಬಳಿಕ ಪ್ರೀತಿಯಾಗಿ ಮಾರ್ಪಟ್ಟು ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಇದಾದ ಬಳಿಕ ಕೆಲ ದಿನಗಳಲ್ಲಿ ಪ್ರೀತಿ ವಿಚಾರ ಎರಡು ಮನೆಯಲ್ಲಿ ಗೊತ್ತಾಗಿದೆ. ಈ ವೇಳೆ ಜಾತಿ ಬೇರೆ ಎಂದು ಹೇಳಿ ಆಕೆಯನ್ನ ದೂರ ಮಾಡಿದ್ದ. ಆಗ ಯುವತಿಯ ತಂದೆ ಪ್ರಕಾಶ್ ಹಿಡಕಲ್ ಗ್ರಾಮದ ಯುವಕನ ಜತೆಗೆ ಮದುವೆ ಫಿಕ್ಸ್ ಮಾಡಿ ಫೆ.14ರಂದು ಅದ್ದೂರಿಯಾಗಿ ಮದುವೆ ಮಾಡಿದ್ದಾರೆ.
ಆ ದಿನವೇ ಗಂಡನ ಮನೆಗೆ ಯುವತಿ ಬಂದಿದ್ದಾಳೆ, ಅಂದು ಸಂಜೆ ಮತ್ತೆ ಈ ಪಾಗಲ್ ಪ್ರೇಮಿ ಆಕೆಯ ಗಂಡನ ಮನೆಗೆ ಹೋಗಿ ತಾನೂ ಆಕೆಗೆ ಸಂಬಂಧಿ ಎಂದು ಹೇಳಿ ಗಂಡನ ಅಣ್ಣನ ನಂಬರ್ ಪಡೆದು. ಪಕ್ಕದ ಮನೆಯವರಿಗೆ ತನ್ನ ಸಂಬಂಧದ ಕುರಿತು ಅವರ ಮುಂದೆ ಹೇಳಿ ಕೊರಳಲ್ಲಿ ಒಂದು ಚೈನ್ ಹಾಕಿಕೊಳ್ಳಲು ಕೊಟ್ಟು ಬಂದಿದ್ದಾನೆ. ಇದಾದ ಮಾರನೇ ದಿನ ಮದುವೆಯಾದ ಗಂಡನ ಅಣ್ಣನ ವಾಟ್ಸಪ್ಗೆ ಆಕೆಯೊಂದಿಗೆ ಕಳೆದಿದ್ದ ಖಾಸಗಿ ಕ್ಷಣದ ಫೋಟೊಗಳನ್ನ ಹಾಕಿದ್ದಾನೆ. ಇದನ್ನ ನೋಡಿದ ಮನೆಯವರು ಮದುವೆಯಾದ ಮಾರನೇ ದಿನವೇ ಯುವತಿಯನ್ನ ತವರು ಮನೆಗೆ ಕಳುಹಿಸಿದ್ದಾರೆ. ಇದೀಗ ಯುವತಿ ಸ್ಥಿತಿ ಅತಂತ್ರವಾಗಿದೆ.
ಇನ್ನು ಮದುವೆ ಕೆಡಿಸಿ ಪಾಪಿ ಪಾಗಲ್ ಪ್ರೇಮಿ ಮುತ್ತುರಾಜ ಎಸ್ಕೇಪ್ ಆಗಿದ್ದರೆ, ಆಕೆಯನ್ನ ಮದುವೆ ಕೂಡ ಆಗಲ್ಲ ಎಂದು ಹೇಳಿದ್ದಾನೆ. ಇತ್ತ ಮೂರು ದಿನಗಳಿಂದ ಯುವತಿ ಕಿತ್ತೂರು ಪೊಲೀಸ್ ಠಾಣೆಗೆ ಅಲೆದರೂ ಕೇಸ್ ತೆಗೆದುಕೊಳ್ಳದೇ ಪಿಎಸ್ಐ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸ್ ಠಾಣೆಗೆ ಹೋದರೂ ನ್ಯಾಯ ಸಿಗದಿದ್ದಕ್ಕೆ ಯುವತಿ ಮುತ್ತುರಾಜ ಮನೆಗೆ ಹೋಗಿದ್ದಾಳೆ. ಆತನ ಅನುಪಸ್ಥಿತಿಯಲ್ಲಿ ಮುತ್ತುರಾಜ ಕುಟುಂಬಸ್ಥರು ಅದ್ದೂರಿಯಾಗಿ ಮನೆ ಓಪನಿಂಗ್ ಕೂಡ ಮಾಡಿದ್ದಾರೆ. ಸಂಜೆ ಅವರ ಮನೆಗೆ ಯುವತಿ ಹೋಗ್ತಿದ್ದಂತೆ ಅವರ ತಂದೆ-ತಾಯಿ ಆಕೆಯನ್ನ ಮನೆ ಸೇರಿಸಲು ಪ್ರಯತ್ನ ಮಾಡಿದರು. ಈ ವೇಳೆ ಮುತ್ತುರಾಜ್ ಅಕ್ಕಂದಿರು ಹಾಗೂ ಕುಟುಂಬಸ್ಥರು ಆಕೆಯನ್ನ ತಳ್ಳಿ ಬೈಯ್ದು ಹೊರ ಹಾಕಿ ಬಾಗಿಲು ಹಾಕಿಕೊಂಡಿದ್ದಾರೆ. ಇತ್ತ ನ್ಯಾಯ ಸಿಗುವವರೆಗೂ ಮನೆ ಮುಂದೆ ಕುಳಿತುಕೊಳ್ಳುವುದಾಗಿ ಹೇಳಿ ವಿಷದ ಬಾಟಲ್ ಜತೆಗೆ ಧರಣಿ ಕುಳಿತುಕೊಂಡಿದ್ದಾಳೆ. ಈ ವಿಚಾರ ಗೊತ್ತಾಗಿ ಬಳಿಕ ಎಚ್ಚೆತ್ತ ಕಿತ್ತೂರು ಪೊಲೀಸರು, ಯುವತಿಯಿಂದ ದೂರು ಪಡೆದುಕೊಂಡು ಮುತ್ತುರಾಜನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಆಗುತ್ತಿದ್ದಂಗೆ ಎಚ್ಚೆತ್ತಿರುವ ಪೊಲೀಸರು, ಪಾಗಲ್ ಪ್ರೇಮಿ ಮುತ್ತುರಾಜ್ ಸೇರಿದಂತೆ 8 ಜನರ ವಿರುದ್ದ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 143,147,417,376,323504,ಮತ್ತು 506 ಅಡಿಯಲ್ಲಿ ದೂರು ದಾಖಲಾಗಿದ್ದು ಸದ್ಯ ಪಾಗಲ್ ಪ್ರೇಮಿ ಪೊಲೀಸರ ವಶದಲ್ಲಿದ್ದಾನೆ. ಕರಿಮಣಿ ಕಟ್ಟಿ ಮದುವೆಯಾದ ಹುಡುಗ ಕರಿಮಣಿ ಮಾಲೀಕ ನಾನಲ್ಲ ಅಂತಿದ್ರೆ, ಇತ್ತ ಪ್ರೀತಿಸಿ ಮೋಸ ಮಾಡಿದವ ಮುತ್ತುರಾಜ್ ಈಗ ಕರಿಮಣಿ ಮಾಲೀಕ ನಾನಾಗಲ್ಲ ಎನ್ನುತ್ತಿದ್ದಾನೆ. ಇವರಿಬ್ಬರ ಮಧ್ಯೆ ಯುವತಿ ಸ್ಥಿತಿ ನಡು ನೀರಿನಲ್ಲಿ ನಿಂತಂತಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ್ ಗುಳೇದ್, ‘ಮುತ್ತುರಾಜ ನಿರಂತರವಾಗಿ ಮಹಿಳೆ ಜೊತೆಗೆ ದೈಹಿಕ ಸಂಪರ್ಕ ಹೊಂದಿದ್ದ. ತಮ್ಮ ವೈಯುಕ್ತಿಕ ಖಾಸಗಿ ಚಿತ್ರಗಳನ್ನ ಬೇರೆ ಬೇರೆಯವರಿಗೆ ಕಳುಹಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಆ ಪ್ರಕಾರವಾಗಿ ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ.
ಪ್ರಕರಣದಲ್ಲಿ ಹುಡುಗ ಸೇರಿ 7 ಜನ ಕುಟುಂಬಸ್ಥರ ಮೇಲೆ ದೂರ ಕೊಟ್ಟಿದ್ದಾರೆ. ಆ ಹುಡುಗನ ಮನೆಯವರು ಹುಡುಗಿ ಮನೆಗೆ ಹೋಗಿ ದೂರು ಕೊಡಬಾರದು ಎಂದು ಹೆದರಿಸಿದ್ದಾರೆ. ಈಗಾಗಲೇ ಈ ಪ್ರಕರಣ ತನಿಖೆ ಶುರುವಾಗಿ ಮುಖ್ಯ ಆರೋಪಿ ಮುತ್ತುರಾಜನನ್ನ ವಶಕ್ಕೆ ಪಡೆದಿದ್ದಾರೆ. ಮುತ್ತುರಾಜ ಹತ್ತಿರ ಇರುವ ಮೊಬೈಲ್ ಕೂಡ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ದಿಂದ ಖಾಸಗಿ ಫೋಟೊಗಳು ಹೋಗಿರುವುದು ಕಂಡು ಬಂದಿದೆ. ಆರೋಪಿಯನ್ನ ಕಾನೂನು ಪ್ರಕಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:01 pm, Fri, 23 February 24