ಬೆಳಗಾವಿ: ಸ್ನೇಹಿತೆ ಬಗ್ಗೆ ಅಶ್ಲೀಲ ಕಮೆಂಟ್: ಅಪ್ರಾಪ್ತನ ಕೊಲೆ, ಇಬ್ಬರ ಬಂಧನ
ಕೊಲೆ ಪ್ರಕರಣ ಒಂದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ, ಮುಸ್ಲಿಂ ಅಂತರ್ಜಾತಿ ವಿವಾಹವಾಗಿದ್ದ ದಂಪತಿಯ 14 ವರ್ಷದ ಪುತ್ರನನ್ನು ತಲೆ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಬೆಳಗಾವಿ, ಅಕ್ಟೋಬರಿ 25: ಆ ಕೊಲೆ (murder) ಪ್ರಕರಣ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಹಿಂದೂ ಮುಸ್ಲಿಂ ಅಂತರ್ಜಾತಿ ವಿವಾಹವಾಗಿದ್ದ ದಂಪತಿಯ 14 ವರ್ಷದ ಪುತ್ರನನ್ನು ತಲೆ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಅಷ್ಟಕ್ಕೂ 15 ವರ್ಷದ ಬಾಲಕನ ಕೊಲ್ಲುವಂತಹ ದ್ವೇಷವಾದರೂ ಏನಿತ್ತು? ಜೊತೆಗಿದ್ದ ಸ್ನೇಹಿತನೇ ಬಾಲಕನ ಹತ್ಯೆ ಮಾಡಿದ್ದೇಕೆ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಕೊನೆಯ ನಗರ. ನಿಪ್ಪಾಣಿ ನಗರದ ಹೊರವಲಯ ಸಂಭಾಜಿ ನಗರದಲ್ಲಿ ಅಕ್ಟೋಬರ್ 20ರ ಬೆಳಗ್ಗೆ ಬೀಗ ಹಾಕಿದ ಮನೆಯ ಎದುರು ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ನಿಪ್ಪಾಣಿ ನಗರ ನಿವಾಸಿಗಳಾಗಿದ್ದ ಸಮೀರ್ ಪಠಾಣ್, ಸಿಮ್ರನ್ ದಂಪತಿಯ ಹಿರಿಯ ಪುತ್ರ ಸಾಕೀಬ್ ಪಠಾಣ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಕೊಲೆಯಾದ ಸಾಕೀಬ್ ತಂದೆ ಸಮೀರ್ ಮುಸ್ಲಿಂ ತಾಯಿ ಸಿಮ್ರನ್ ಹಿಂದೂ ಇದ್ದು ಪ್ರೀತಿಸಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹವಾಗಿದ್ದರೂ ಇಬ್ಬರ ಕುಟುಂಬಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಆಗಲಿ, ವೈಮನಸ್ಸಾಗಲಿ ಇರಲಿಲ್ಲ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಾಕೀಬ್ ಕೊಲೆಯಾದ ದಿನ ತಂದೆ ತಾಯಿ ಯಾವುದೋ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಈ ವೇಳೆ ಪೋಷಕರ ಜೊತೆ ಗಲಾಟೆ ಮಾಡಿ ಸಂಜೆ ಮನೆಯಿಂದ ಹೊರ ಹೋಗಿದ್ದ ರಾತ್ರಿಯಾದರೂ ಬಂದಿರಲಿಲ್ಲ.
ಇದನ್ನೂ ಓದಿ: ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ ಆರೋಪ: ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು
ಸ್ನೇಹಿತನ ಮೊಬೈಲ್ನಿಂದ ತಾಯಿಗೆ ಕರೆ ಮಾಡಿದ್ದ ಸಾಕೀಬ್ ನಾನು ಮನೆಗೆ ಬರಲ್ಲ ಎಂದಿದ್ದ ಇದರಿಂದ ತಾಯಿ ಸಿಟ್ಟುಗೊಂಡಿದ್ದಳು. ಬಳಿಕ ಮತ್ತೊಮ್ಮೆ ಕರೆ ಮಾಡಿದಾಗ ತಾಯಿ ಸಿಮ್ರನ್ ಕರೆ ಸ್ವೀಕರಿಸಿರಲಿಲ್ಲ. ರಾತ್ರಿ ಮನೆಗೆ ಬರಬಹುದು ಅಂತಾ ಮನೆಯಲ್ಲಿದ್ದವರು ನಿದ್ದೆಗೆ ಜಾರಿದ್ದರು. ಆದರೆ ಮಾರನೇ ದಿನ ಬೆಳಗ್ಗೆ ತನ್ನ ಮಗ ಕೊಲೆಯಾಗಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ನಿಪ್ಪಾಣಿ ನಗರ ಠಾಣೆ ಪೊಲೀಸರು, ಎಫ್ಎಸ್ಎಲ್ ಟೀಮ್ ಘಟನಾ ಸ್ಥಳದಲ್ಲಿ ಒಂದು ಕಲ್ಲನ್ನು ಜಪ್ತಿ ಮಾಡಿದ್ದರು. ಆ ಕಲ್ಲಿನಿಂದಲೇ ಬಾಲಕನ ತಲೆಯ ಹಿಂಬದಿಗೆ ಹೊಡೆದು ಕೊಲೆ ಮಾಡಿದ್ದು ಸ್ಪಷ್ಟವಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾಕೀಬ್ ಕೊನೆಯ ಬಾರಿ ತಾಯಿಗೆ ಯಾರ ನಂಬರ್ನಿಂದ ಕರೆ ಮಾಡಿದ್ದಾನೆಂದು ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಆತ ಯಾರ ಜೊತೆಗಿದ್ದ ಎಂಬ ಮಾಹಿತಿ ಕಲೆ ಹಾಕಲು ಮುಂದಾಗುತ್ತಾರೆ. ಸಂಭಾಜಿ ನಗರದಲ್ಲಿ ಇರುವ ಉದ್ಯಾನವನದಲ್ಲಿ ಸಾಕೀಬ್ ಹಾಗೂ ಸ್ನೇಹಿತರು ಆಗಾಗ ಬಂದು ಕುಳಿತುಕೊಳ್ಳುತ್ತಿದ್ದರು. ಹೀಗಿರುವಾಗ ಉದ್ಯಾನವನದ ಹಿಂಬದಿಯ ಬೀಗ ಹಾಕಿದ ಮನೆಯ ಎದುರೇ ಆತನ ಬರ್ಬರ ಹತ್ಯೆಯಾಗಿದ್ದು ಸ್ನೇಹಿತರೇ ಕೃತ್ಯವೆಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Viral video: ಕಾಂಗ್ರೆಸ್ ಮುಖಂಡ ಶ್ರೀನಿವಾಸಪುರದ ಶ್ರೀನಿವಾಸ ಕೊಲೆ ಪ್ರಕರಣ: ರಾಜಿ ಪಂಚಾಯ್ತಿ ವಿಡಿಯೋ ವೈರಲ್
ಬಳಿಕ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಕೊಲೆಯಾದ ಸಾಕೀಬ್ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆಗ ತಾನೇ ಕೊಲೆ ಮಾಡಿದ್ದು ಎಂಬ ಬಗ್ಗೆ ಬಾಯಿಬಿಟ್ಟಿದ್ದಾನೆ. ಕೊಲೆಯಾದ ಸಾಕೀಬ್ ಬಳಿ ಮೊಬೈಲ್ ಫೋನ್ ಇರಲಿಲ್ಲ. ಸ್ನೇಹಿತನ ಮೊಬೈಲ್ನನ್ನೇ ಆಗಾಗ ಬಳಕೆ ಮಾಡುತ್ತಿದ್ದ. ಈ ವೇಳೆ ಉದ್ಯಾನವನದಲ್ಲಿ ತನ್ನ ಸ್ನೇಹಿತನ ಫೋಟೋ ಗ್ಯಾಲರಿ ಓಪನ್ ಮಾಡಿ ಆರೋಪಿ ಸ್ನೇಹಿತೆಯ ಫೋಟೋ ನೋಡಿ ಅಶ್ಲೀಲ ಕಮೆಂಟ್ ಮಾಡಿದ್ದ. ಇದರಿಂದ ಕುಪಿತಗೊಂಡ ಆತ ತನ್ನ ಮತ್ತೋರ್ವ ಸ್ನೇಹಿತ 21 ವರ್ಷದ ಜುಬೇರ್ ಜೊತೆ ಸೇರಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಸಾಕೀಬ್ ಕೊಲೆ ಮಾಡಿದ ಬಾಲಕನ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಇನ್ನು ಈ ಕೊಲೆಗೆ ಸಾಥ್ ನೀಡಿದ್ದ 21 ವರ್ಷದ ಜುಬೇರ್ನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.
ಮೊಬೈಲ್ನಲ್ಲಿ ಇದ್ದ ಸ್ನೇಹಿತೆಯ ಫೋಟೋ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ ಎಂಬ ಕಾರಣಕ್ಕೆ ಬಾಲಕನನ್ನು ಬಾಲಕನೇ ಕೊಲೆ ಮಾಡಿದ್ದಾನೆ. ಬಾಳಿ ಬದುಕಬೇಕಿದ್ದ ಮಗನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಅದೇನೆ ಇರಲಿ ಮಕ್ಕಳಿಗೆ ಮೊಬೈಲ್ ಕೊಡಿಸುವ ಮುನ್ನ ಎಚ್ಚರ. ಮಕ್ಕಳ ಮೊಬೈಲ್ ಬಳಕೆ ಒಂದೊಂದು ಸಲ ಈ ರೀತಿಯ ದುರಂತಕ್ಕೂ ಕಾರಣವಾಗಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.