
ಬೆಳಗಾವಿ, ಡಿಸೆಂಬರ್ 05: ಪಿಹೆಚ್ಡಿ ಪದವಿ ನೀಡದ ಹಿನ್ನೆಲೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ ಪ್ರಕರಣ ಸಂಬಂಧ ಘಟನೆ ಬಗ್ಗೆ ಚರ್ಚಿಸಲು ವಿಶೇಷ ಸಿಂಡಿಕೇಟ್ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಎರಡು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ತ್ಯಾಗರಾಜ್ ಹೇಳಿದ್ದಾರೆ. 4 ದಿನದ ಹಿಂದೆ ಮಾತ್ರೆ ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆನ್ನಲ್ಲೇ ವಿಶ್ವ ವಿದ್ಯಾಲಯ ಸಿಂಡಿಕೇಟ್ ಸಭೆ ಕರೆದು ಮಹತ್ವದ ತೀರ್ಮಾನ ಕೈಗೊಂಡಿದೆ.
ಪಿಹೆಚ್ಡಿ ಪದವಿ ಪಡೆಯಲು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಅರ್ಹ ಆಗಿದ್ದಾರೆ. ಹೀಗಾಗಿ ನಿಯಮಾನುಸಾರ ಅರ್ಜಿ ಸಲ್ಲಿಸಿದ್ರೆ ಪಿಹೆಚ್ಡಿ ಪದವಿ ನೀಡುತ್ತೇವೆ. ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ಕೆ.ಎಲ್.ಎನ್.ಮೂರ್ತಿಗೆ ಕಡ್ಡಾಯ ನಿವೃತ್ತಿಗೆ ಆದೇಶ ಮಾಡಲಾಗಿದೆ. ವಿದ್ಯಾರ್ಥಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ನಿಯಮ ಇದ್ದು, ಇದನ್ನು ಪಾಲಿಸದ ಹಿನ್ನೆಲೆ ಕಡ್ಡಾಯ ನಿವೃತ್ತಿ ನೀಡಲು ಸಭೆ ತೀರ್ಮಾನ ಮಾಡಿದೆ ಎಂದು ಬೆಳಗಾವಿಯ ವಾರ್ತಾ ಭವನದಲ್ಲಿ ಸಿ.ಎಂ.ತ್ಯಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಚ್ಡಿ ಗೈಡ್ನಿಂದ ಲೈಂಗಿಕ ಕಿರುಕುಳ, 19ಕ್ಕೂ ಹೆಚ್ಚು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಉದ್ದೇಶಪೂರ್ವಕವಾಗಿ ಪಿಎಚ್‌ಡಿ ಪದವಿ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 19ಕ್ಕೂ ಅಧಿಕ ಮಾತ್ರೆಗಳನ್ನು ಸೇವಿಸಿದ್ದ ಅವರನ್ನು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿತ್ತು.ಗೈಡ್ ಕೆ.ಎಲ್.ಎನ್. ಮೂರ್ತಿ ಲೈಂಗಿಕ ಕಿರುಕುಳ ನೀಡಿದ್ದ ವಿಚಾರವಾಗಿ ಕುಲಪತಿಯವರಿಗೆ ಹಾಗೂ ರಿಜಿಸ್ಟ್ರಾರ್ಗೆ ವಿದ್ಯಾರ್ಥಿನಿ ದೂರು ನೀಡಿದ್ದರು. ನಂತರ ಗೈಡ್ ಸಂಬಂಧಿತ ಸಮಸ್ಯೆ ಬಗೆಹರಿಸಲಾಗಿತ್ತು. ಆದರೂ ತಮ್ಮನ್ನು ಟಾರ್ಗೆಟ್ ಮಾಡಿ ಪಿಎಚ್‌ಡಿ ನೀಡಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದರು.
ಘಟನೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ರಾಣಿ ಚನ್ನಮ್ಮ ವಿವಿ ಕುಲಪತಿ ಸಿ.ಎಂ ತ್ಯಾಗರಾಜ್, ಇತಿಹಾಸ ವಿಭಾಗದಲ್ಲಿ 2021ರಲ್ಲಿ ವಿದ್ಯಾರ್ಥಿನಿ ಆರಂಭಿಸಿದ್ದ ಸಂಶೋಧನೆ 2025ರಲ್ಲಿ ಪೂರ್ಣ ಆಗಿದೆ. ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿನಿ ಕಿರುಕುಳ ಆರೋಪ ಮಾಡಿದ್ದು, ಸಿಂಡಿಕೇಟ್ನಲ್ಲಿ ವಿಚಾರ ಮುಂದಿಟ್ಟು ವರದಿ ನೀಡಲು ಸೂಚಿಸಲಾಗಿತ್ತು. ಆಗ ಪ್ರಾಧ್ಯಾಪಕ ಕಿರುಕುಳ ನೀಡಿದ್ದು ಪ್ರಾಥಮಿಕವಾಗಿ ತಿಳಿದುಬಂದಿತ್ತು. ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಾದ ಬಳಿಕ ವಿದ್ಯಾರ್ಥಿನಿ ದೂರು ವಾಪಾಸ್ ಪಡೆದಿದ್ದಳು. ಇಷ್ಟಾದರೂ ಮತ್ತೊಮ್ಮೆ ಸಿಂಡಿಕೇಟ್ನಲ್ಲಿ ಚರ್ಚೆ ಮಾಡಿ ಪ್ರಮಾಣ ಪತ್ರ ನೀಡಲು ಮುಂದಾಗಿದ್ದೆವು. ತೀರ್ಮಾನ ಆಗದ ಹಿನ್ನೆಲೆ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್‌ಡಿ ಪದವಿ ನೀಡಲು ಆಗಲಿಲ್ಲ. ತುರ್ತು ಸಿಂಡಿಕೇಟ್ ಸಭೆ ಕರೆಯಲಾಗಿದ್ದು,ಅದರಲ್ಲಿ ಈ ಬಗ್ಗೆ ತೀರ್ಮಾನ ಮಾಡೋದಾಗಿ ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.