AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ಕೊಲ್ಲುವ ಉದ್ದೇಶದಿಂದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ಗೆ ವಿಷ ಹಾಕಿದ ದುರುಳರು

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಸರ್ಕಾರಿ ಶಾಲೆ ಮಕ್ಕಳು 15 ದಿನಗಳ ಟ್ಯಾಂಕ್​ನಲ್ಲಿದ್ದ ನೀರು ಕುಡಿದು ಅಸ್ವಸ್ಥಗೊಂಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದು ಬೆಚ್ಚಿ ಬೀಳಿಸುವ ಅಂಶ. 41ಮಕ್ಕಳನ್ನು ಕೊಲ್ಲುವ ಉದ್ದೇಶದಿಂದ ನೀರಿನ ಟ್ಯಾಂಕ್​​ಗೆ ವಿಷ ಹಾಕಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.

ಮಕ್ಕಳನ್ನು ಕೊಲ್ಲುವ ಉದ್ದೇಶದಿಂದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ಗೆ ವಿಷ ಹಾಕಿದ ದುರುಳರು
ಶಾಲೆಯ ನೀರಿನ ಟ್ಯಾಂಕ್​ಗೆ ವಿಷ ಹಾಕಿದ ಆರೋಪಿಗಳು
Sahadev Mane
| Updated By: ವಿವೇಕ ಬಿರಾದಾರ|

Updated on:Aug 02, 2025 | 10:20 PM

Share

ಬೆಳಗಾವಿ, ಆಗಸ್ಟ್​ 02: ಇತ್ತೀಚಿಗೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ (Savadatti) ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ 12 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಘಟನೆ ಸಂಬಂಧ ಮಾಹಿತಿ ಪಡೆದಿದ್ದ ಸವದತ್ತಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನೀರಿನ ಟ್ಯಾಂಕ್ ಬಳಿ ಬಾಟಲ್ ಒಂದು ಬಿದ್ದಿತ್ತು. ಆ ಬಾಟಲ್​ನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದು ವಿಷದ ಬಾಟಲಿ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರು ಟ್ಯಾಂಕ್​ನಲ್ಲಿದ್ದ ನೀರನ್ನು ಎಫ್ಎಸ್ಎಲ್​ಗೆ ಕಳುಹಿಸಿದರು. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದರು.

ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 41ಮಕ್ಕಳು ಓದುತ್ತಾರೆ. ಹೊರಗಿನವರು ಬಂದು ಶಾಲೆಯ ನೀರಿನ ಟ್ಯಾಂಕ್​ನಲ್ಲಿ ವಿಷ ಹಾಕಿಲ್ಲ ಎಂಬುವುದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ನಂತರ, ಪೊಲೀಸರು ಶಿಕ್ಷಕರಿಗೆ ಮಕ್ಕಳನ್ನು ವಿಚಾರಣೆ ನಡೆಸಿ ಎಂದು ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಶಿಕ್ಷಕರು ಮಕ್ಕಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಓರ್ವ ಬಾಲಕ ಅಂದು ನಾನು ಟ್ಯಾಂಕ್​ ಒಳಗೆ ಜ್ಯೂಸ್ ಹಾಕಿದೆ ಅಂತ ಹೇಳಿದ್ದಾನೆ.

ಆತನಿಗೆ ಯಾರು ಜ್ಯೂಸ್​ ಬಾಟಲ್ ಕೊಟ್ಟಿದ್ದು ಅಂತ ವಿಚಾರಿಸಿದಾಗ ಅದೇ ಗ್ರಾಮದ ಕೃಷ್ಣ ಮಾದರ್ ಎಂಬಾತ ಕೊಟ್ಟಿದ್ದಾಗಿ ಬಾಲಕ ಹೇಳಿದ್ದಾನೆ. ಚಾಲಕ ಕೃಷ್ಣಾನನ್ನು ಎತ್ತಾಕ್ಕೊಂಡು ಬಂದು ವಿಚಾರಣೆ ನಡೆಸಿದಾಗ ಮಕ್ಕಳನ್ನು ಕೊಲ್ಲಲು ಮಾಡಿದ್ದ ಪ್ಲ್ಯಾನ್ ಹೊರ ಬಿದ್ದಿದೆ. “ಮೂರು ಬಗೆಯ ವಿಷಗಳನ್ನು ಸೇರಿಸಿ ಮಾಜಾ ಬಾಟಲ್​ನಲ್ಲಿ ಹಾಕಿ, ಬಾಲಕನಿಗೆ ನೀಡಿ, ನೀರಿನ ಟ್ಯಾಂಕ್​ ಒಳಗೆ ಹಾಕುವಂತೆ ಹೇಳಿದ್ದೆ” ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

“ನೀರಿನ ಟ್ಯಾಂಕ್​ ಒಳಗೆ ವಿಷ ಹಾಕುವಂತೆ ನಾಗನಗೌಡ ಪಾಟೀಲ್ ಮತ್ತು ಸಾಗರ್ ಪಾಟೀಲ್ ಎಂಬವರು ನನಗೆ ಹೇಳಿದ್ದರು. ವಿಷ ಹಾಕದಿದ್ದರೇ ನಾನು (ಕೃಷ್ಣ) ಅನ್ಯ ಜಾತಿ ಹುಡುಗಿಯನ್ನು ಪ್ರೀತಿ ಮಾಡುವ ವಿಚಾರ ಊರಲ್ಲಿ ಹೇಳುತ್ತೇವೆ ಅಂತ ಬ್ಲ್ಯಾಕ್​ಮೇಲ್ ಮಾಡಿದ್ದರು. ಇದರಿಂದ ಭಯಗೊಂಡು ಬಾಲಕನಿಗೆ ಚಾಕಲೇಟ್ ಮತ್ತು ಐದನೂರು ರೂಪಾಯಿ ನೀಡಿ ಪುಸಲಾಯಿಸಿ ವಿಷ ಹಾಕಿಸಿದ್ದೆ” ಅಂತ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ, ಪೊಲೀಸರು ಕೃಷ್ಣ ಹೇಳಿದ ಇನ್ನಿಬ್ಬರನ್ನೂ ಎತ್ತಾಕ್ಕೊಂಡು ಬಂದು ವಿಚಾರಿಸಿದಾಗ ತಮಗೂ ಇದಕ್ಕೂ ಸಂಬಂಧ ಇಲ್ಲ ಅಂತ ಮೊದಲು ಆರೋಪಿಗಳು ಹೇಳಿದ್ದರು. ಆದರೆ, ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಸಾಗರ್ ಪಾಟೀಲ್ ಎಂಬಾತನೇ ಮೂರು ರೀತಿ ವಿಷ ತಂದಿದ್ದು, ಅದನ್ನು ಮಾಜಾ ಬಾಟಲ್​ನಲ್ಲಿ ಹಾಕಿ ಕೃಷ್ಣನಿಗೆ ಕೊಟ್ಟಿದ್ದಾಗಿ ಹೇಳಿದ್ದಾನೆ.

ಇದನ್ನೂ ಓದಿ: ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕೇಸ್​ ತನಿಖೆಗೆ 3 ತಂಡ ರಚನೆ

ವಿಷ ಹಾಕಿದ ನೀರನ್ನು ಸೇವಿಸಿ ಮಕ್ಕಳು ಅಸ್ವಸ್ಥರಾಗುತ್ತಾರೆ, ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಸುಲೇಮಾನ್ ಗೋರಿನಾಯಕ್ ಕಾರಣ ಆಗುತ್ತಾನೆ. ಆತನನ್ನು ಕೆಲಸದಿಂದ ವಜಾ ಮಾಡುತ್ತಾರೆ. ಈ ಕಾರಣದಿಂದ ಕೃತ್ಯ ಎಸಗಿದ್ದಾಗಿ ಹೇಳಿದ್ದನು. ಊರಲ್ಲಿ ಜಮೀನು ನೋಡಿಕೊಳ್ಳುತ್ತಾ, ಹಿಂದು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಗೆ ಕಳೆದ 13 ವರ್ಷಗಳಿಂದ ಸುಲೇಮಾನ್ ತಮ್ಮೂರಿನಲ್ಲಿ ಕೆಲಸ ಮಾಡುತ್ತಿರುವುದು ಇಷ್ಟ ಇರಲಿಲ್ಲ. ಆತ ಮುಸ್ಲಿಂ ಎಂಬ ಕಾರಣಕ್ಕೆ ಊರು ಬಿಡಿಸಲು ಈ ಪ್ಲ್ಯಾನ್​ ಮಾಡಿದ್ದನು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮೂರು ಜನರಾದ ಕೃಷ್ಣಾ ಮಾದರ್, ಸಾಗರ್ ಪಾಟೀಲ್, ನಾಗನಗೌಡ ಪಾಟೀಲ್ ಮೂವರನ್ನೂ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಸದ್ಯ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಅಂದು ಬಾಲಕ ಟ್ಯಾಂಕ್​ನಲ್ಲಿ ವಿಷ ಹಾಕುವಾಗ ಅರ್ಧದಷ್ಟು ವಿಷ ಹೊರಗೆ ಬಿದ್ದಿದ್ದು ಅನುಕೂಲವಾಗಿದೆ. ಮಕ್ಕಳು ನೀರು ಕುಡಿಯದೇ ಬಾಯಲ್ಲಿ ಹಾಕುತ್ತಿದ್ದಂತೆ ಡೌಟ್ ಬಂದು ಉಗುಳಿದ್ದರಿಂದ ಬದುಕುಳಿದಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Sat, 2 August 25