ಬಾವಿ ಬತ್ತಿ ಹೋದರೂ ನೆರವಿನ ಚಿಲುಮೆ ಉಕ್ಕಿಸಿದ ಬೆಳಗಾವಿ ಎಸ್ಪಿ
ಬೆಳಗಾವಿ: ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಅದೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ ರೈತನ ಕುಟುಂಬಕ್ಕೆ ನೆರವಿನ ಹಸ್ತ ಚಾಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾನವೀಯತೆ ಮೆರೆದಿದ್ದಾರೆ. ಕಳೆದ 15 ದಿನಗಳ ಹಿಂದೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿದ್ದ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದ. ನೀರು ಬರಲಿಲ್ಲ ಎಂದು ರೈತ ಲಕ್ಕಪ್ಪ ದೊಡ್ಡಮನಿ ತೀವ್ರ ಬೇಸರಗೊಂಡಿದ್ದರು. ಅದೇ ಬೇಸರದಲ್ಲಿ ಬಹಳಷ್ಟು ಸಾಲ ಮಾಡಿ […]

ಬೆಳಗಾವಿ: ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಅದೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆಯ ರೈತನ ಕುಟುಂಬಕ್ಕೆ ನೆರವಿನ ಹಸ್ತ ಚಾಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾನವೀಯತೆ ಮೆರೆದಿದ್ದಾರೆ.
ಕಳೆದ 15 ದಿನಗಳ ಹಿಂದೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿದ್ದ ತನ್ನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದ. ನೀರು ಬರಲಿಲ್ಲ ಎಂದು ರೈತ ಲಕ್ಕಪ್ಪ ದೊಡ್ಡಮನಿ ತೀವ್ರ ಬೇಸರಗೊಂಡಿದ್ದರು. ಅದೇ ಬೇಸರದಲ್ಲಿ ಬಹಳಷ್ಟು ಸಾಲ ಮಾಡಿ ಕೊರೆಸಿದ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು.
ಈ ಪ್ರಕರಣದ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿಕೊಟ್ಟ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶವವನ್ನು ಹೊರತೆಗೆಸಿದ್ದರು. ಮೃತ ರೈತನ ಕುಟುಂಬಸ್ಥರ ಆಕ್ರಂದನ ಕಂಡು ಅವರಿಗೆ ಸಾಂತ್ವನ ಹೇಳಿದ್ದರು. ಮನೆಯ ಆಧಾರಸ್ತಂಭವಾಗಿದ್ದ ಮೃತ ಲಕ್ಕಪ್ಪನ ಕಳೆದುಕೊಂಡ ಪತ್ನಿ ಕಸ್ತೂರಿ ದೊಡ್ಡಮನಿ ಮತ್ತು ಮಕ್ಕಳಾದ ಸಂಗಮೇಶ ದೊಡ್ಡಮನಿ ಹಾಗೂ ಪುತ್ರಿ ಜಯಶ್ರೀ ದೊಡ್ಡಮನಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.

ಮಾನವೀಯತೆ ಮೆರೆದ ಎಸ್ಪಿ: ಆದರೆ ತಮ್ಮ ನೆರವಿನ ಆಶ್ವಾಸನೆಯನ್ನು ಕೇವಲ ಆಶ್ವಾಸನೆಗೆ ಮಾತ್ರ ಸೀಮಿತಗೊಳಿಸದೆ ಅದನ್ನ ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನ ಬೆಳಗಾವಿ ಎಸ್ಪಿ ನಿಂಬರಗಿ ಮಾಡಿದ್ದಾರೆ. ಕುಟುಂಬದ ದಾರುಣ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ನಿಂಬರಗಿ ತಮ್ಮ ಕಡೆಯಿಂದ ವೈಯಕ್ತಿಕವಾಗಿ 50,000 ರೂಪಾಯಿಯನ್ನ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕ ಎಲ್ಲರ ಕಣ್ಣಲ್ಲಿ ಒಬ್ಬ ಮಾದರಿ ಅಧಿಕಾರಿಯಾಗಿಯೂ ರೂಪಗೊಂಡಿದ್ದಾರೆ.
ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಭರವಸೆ: ಎಸ್ಪಿ ಲಕ್ಷ್ಮಣ ನಿಂಬರಗಿ ನೀಡಿದ ಸಹಾಯಧನವನ್ನ ಕಣ್ಣೀರಿಡುತ್ತಾ ಸ್ವೀಕರಿಸಿದ ಕಸ್ತೂರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅಷ್ಟೇ ಅಲ್ಲದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಸ್ಪಿ ಅವರಂತೆ ಒಳ್ಳೆಯ ಮತ್ತು ದಕ್ಷ ಅಧಿಕಾರಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಾಂತ್ವನ ಮತ್ತು ಸಹಾಯವನ್ನ ಕೇವಲ ಬಾಯಿಮಾತಿಗೆ ಸೀಮಿತವಾಗದಂತೆ ನಡೆದುಕೊಂಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹದಿದುಬಂದಿದೆ.




