ಈ ಹಿಂದೆ ಪ್ರಕಟವಾದ ಸಂಚಿಕೆಯಲ್ಲಿ ನಾಗನೂರಿನ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು ಹುಟ್ಟಿದ್ದು ಅವರು ರುದ್ರಾಕ್ಷಿಮಠದ ಗುರುಗಳಾಗಿದ್ದರ ಬಗ್ಗೆ ವಿವರಿಸಿದ್ದೇವೆ. ಇದು ಮುಂದುವರೆದ ಭಾಗವಾಗಿ ಅವರ ಜೀವನದ ಮತ್ತಷ್ಟು ರೋಚಕ ಸಂಗತಿಗಳು ಇಲ್ಲಿವೆ.
ಪೂಜ್ಯರ ಮಾತೃಹೃದಯ, ಕೋಮಲ ಮನಸ್ಸು ಸಮುದಾಯದ ಮಕ್ಕಳನ್ನು ಪ್ರೀತಿಯಿಂದ ಕಂಡಿತು. ಮಕ್ಕಳ ಸಂಖ್ಯೆ ಹೆಚ್ಚಾಗತೊಡಗಿತು. ಶಿಕ್ಷಣದ ಅರಿವು ಸಮಾಜದಲ್ಲಿ ಜಾಗೃತವಾಯಿತು. ಆ ಕಾರಣಕ್ಕಾಗಿ ದಾನಶೂರ ಬಸರೀಗಿಡದ ವೀರಪ್ಪನವರು 5155 ರೂಪಾಯಿಗಳನ್ನು ಕೊಡುಗೆಯನ್ನಾಗಿ ನೀಡಿದರು. ಅದರ ಫಲವಾಗಿ 10-9-1951ರಂದು ಮೈಸೂರಿನ ಅಂದಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ ಅವರ ಅಮೃತ ಹಸ್ತದಿಂದ ಸ್ವತಂತ್ರವಾದ ಪ್ರಸಾದ ನಿಲಯವು ಉದ್ಘಾಟನೆಯಾಯಿತು. ಅದೇ ಸಂದರ್ಭದಲ್ಲಿ ರಾಮದೇವ ಬೀದಿಯಲ್ಲೂ ಒಂದು ಕಟ್ಟಡವನ್ನು ಖರೀದಿಸಿ ವಿದ್ಯಾರ್ಥಿಗಳ ವಾಸಕ್ಕೆ ಏರ್ಪಾಡು ಮಾಡಿದರು. ಅದರಂತೆ ಮಾರುತಿ ಬೀದಿಯಲ್ಲೂ ವಿಶಾಲವಾದ ಪ್ರಸಾದ ನಿಲಯವನ್ನು ಪ್ರಾರಂಭಿಸಿದರು. ಅದರ ಜೊತೆಗೆ ಗಣೇಶ ಉತ್ಸವ, ನಾಡಹಬ್ಬ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸವ ಮೂಲಕ ನಾಡು-ನುಡಿಗಳ ಶ್ರೇಯೋಭಿವೃದ್ಧಿಗೆ ಪ್ರೇರಣೆಯಾಯಿತು. ಬಡವರ ಮದುವೆಗಳಿಗೂ, ಸಾಮಾಜಿಕ ಕಾರ್ಯಗಳಿಗೂ ಅಲ್ಲಿ ಅವಕಾಶ ಮಾಡಿಕೊಟ್ಟರು. ಜೊತೆಜೊತೆಯಗಿ ಧಾರ್ಮಿಕ ಸಂಸ್ಕಾರವನ್ನೂ ನೀಡುವ ಕೇಂದ್ರವಾಗಿ ಮಾರುತಿ ಬೀದಿಯ ಮಠವು ಯಶಸ್ವಿ ಹೆಜ್ಜೆಗಳನ್ನಿಟ್ಟಿತು.
ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಹದಿನಾರು ಎಕರೆಯಷ್ಟು ಭೂಮಿಯನ್ನು ಖರೀದಿಸಿ ಅಲ್ಲಿ ಪ್ರಸಾದ ನಿಲಯ, ಉದ್ಯೋಗನಿರತ ಮಹಿಳಾ ವಸತಿಗೃಹ, ಪ್ರಾಥಮಿಕ ಶಾಲೆ, ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಔದ್ಯೋಗಿಕ ತರಬೇತಿ ಕೇಂದ್ರ, ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ, ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಬಹುತಾಂತ್ರಿಕ ಸಂಸ್ಥೆ, ಶ್ರೀಗಳ ಹಾಗೂ ಅಧ್ಯಯನ ನಿರತ ಕಿರಿಯಸ್ವಾಮಿಗಳ ವಾಸ್ತವ್ಯ ಕೋಣೆ, ಕಾರ್ಯಾಲಯ, ಲಿಂಗಾಯತ ಕೇಂದ್ರ ಗ್ರಂಥಾಲಯ ಮೊದಲಾದವು ನಿರ್ಮಾಗೊಂಡವು. ಸಾಂಸ್ಕೃತಿಕ ಸಮಾರಂಭಗಳಿಗೆ ಮದುವೆ ಮೊದಲಾದ ಮಂಗಲಕಾರ್ಯಗಳಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಸೇವೆಗಾಗಿ ಬೃಹದಾಕಾರದ ಪ್ರಭುದೇವ ಸಭಾಗೃಹ ಸಿದ್ಧವಾದವು. ಇದೀಗ ಅದೇ ಸ್ಥಳದಲ್ಲಿ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ.
ಗುರುಕುಲ ಮಾದರಿಯ ಶಿಕ್ಷಣ ಹಾಗೂ ವ್ಯಕ್ತಿತ್ವ ನಿರ್ಮಾಣ
ಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳ ಮಕ್ಕಳು ಬೆಳಗಾವಿಯ ಶ್ರೀರುದ್ರಾಕ್ಷಿಮಠದಲ್ಲಿ ಅಭ್ಯಾಸಕ್ಕಾಗಿ ಬರಲು ಪ್ರಾರಂಭಿಸಿದರು. 1969ರಲ್ಲಿ ಶ್ರೀ ಸಿದ್ಧರಾಮೇಶ್ವರ ಮಾಧ್ಯಮಿಕ ಶಾಲೆಯು ಶಿವಬಸವ ನಗರದಲ್ಲಿ ಪ್ರಾರಂಭಗೊಂಡಿತು. ಗುರುಕುಲ ಮಾದರಿಯ ಶಿಕ್ಷಣ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡುವುದು ಇದರ ಉದ್ದೇಶ. ಶಿಕ್ಷಣದ ಜೊತೆಗೆ ವಾಸ್ತವ್ಯವನ್ನು ಕೊಟ್ಟು ನಾಡಿನ ಮಕ್ಕಳ ಬದುಕನ್ನು ಶ್ರೀಮಂತಗೊಳಿಸುವಲ್ಲಿ ಪೂಜ್ಯರ ಸೇವೆಯು ಅನುಪಮವಾದುದಾಗಿದೆ.
ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸ್ವಾತಂತ್ರ ಹೋರಾಟಗಾರರಿಗೆ ಆಶ್ರಯವನ್ನು ಅನ್ನವನ್ನು ಕೊಡುವ ಮೂಲಕ ದೇಶಪ್ರೇಮವನ್ನು ಮೆರೆದಿದ್ದಾರೆ. ಅವರನ್ನು ಶ್ರೀಮಠದಲ್ಲಿಟ್ಟುಕೊಂಡು ರಕ್ಷಣೆ ಮಾಡಿದ್ದಾರೆ. ಶಿವಯೋಗಮಂದಿರ ಅಧ್ಯಕ್ಷರಾಗಿ ಅಪಾರಸೇವೆಯನ್ನು ಸಲ್ಲಿಸುವ ಮೂಲಕ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳ ಕೃಪಾಶೀರ್ವಾದದ ಋಣವನ್ನು ತೀರಿಸುವ ಪ್ರಯತ್ನ ಮಾಡಿದ್ದಾರೆ. 1965ರಲ್ಲಿ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಿ ಬಹಳಷ್ಟು ಮಕ್ಕಳಿಗೆ ಸಂಸ್ಕೃತ ಅಧ್ಯಯನಕ್ಕೂ ಅನುಕೂಲ ಮಾಡಿದ್ದಾರೆ.
ಗಡಿನಾಡಿನ ಬೆಳಗಾವಿಯಲ್ಲಿ ಕನ್ನಡ ವಾತಾವರಣ
ಮಹಾದಾನಿ ಭೂಮರೆಡ್ಡಿ ಬಸಪ್ಪನವರಿಂದ ಉದ್ಘಾಟನೆಗೊಂಡ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಾವಿರಾರು ಗ್ರಂಥಗಳ ಸಂಗ್ರಹಣೆ ಮಾಡಿದರು. ಡಾ. ಸ. ಜ. ನಾಗಲೋಟಿಮಠ ಪ್ರಸಿದ್ಧ ವೈದ್ಯ ಸಾಹಿತಿಗಳ ಕನಸಿಗೆ ನೀರೆರೆದು ವಿಜ್ಞಾನಕೇಂದ್ರವನ್ನು ಶ್ರೀರುದ್ರಾಕ್ಷಿಮಠದ ಆವರಣದಲ್ಲಿಯೇ ಸ್ಥಾಪಿಸಲು ಅನುವು ಮಾಡಿಕೊಟ್ಟರು. ನಾಗನೂರಿನಂಥ ಚಿಕ್ಕಗ್ರಾಮದ ಬಡಮಠವೊಂದರ ಸ್ವಾಮಿತ್ವವನ್ನು ಪಡೆದುಬಂದ ಶಿವಬಸವಸ್ವಾಮಿಗಳು ಸುದೀರ್ಘ 96 ವರ್ಷಗಳ ಅವಧಿಯಲ್ಲಿ ಮಾಡಿದ ಕಾರ್ಯ ಅಗಾಧವಾದುದು. ಇದು ಸಾರ್ವಕಾಲಿಕ ದಾಖಲೆಯೇ ಸರಿ. ಗಡಿನಾಡಿನ ಬೆಳಗಾವಿಯಲ್ಲಿ ಕನ್ನಡ ವಾತಾವರಣವನ್ನು ಮೂಡಿಸುವಲ್ಲಿ, ಶೈಕ್ಷಣಿಕ ಅಭಿವೃದ್ಧಿ ಸಾಧಿಸುವಲ್ಲಿ, ಸಾಮಾಜಿಕ-ಸಾಹಿತ್ಯಕ-ಸಾಂಸ್ಕೃತಿಕ-ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಶ್ರೀಗಳ ಪರಿಶ್ರಮ ಅನನ್ಯವಾದುದು. ಅವರದು ಅವಿರತ ಅನುಪಮ ಸೇವೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುದಲಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಕಂಡರು. ಪೂಜ್ಯರ ಜಾತ್ಯಾತೀತ ಕಾರ್ಯಗಳನ್ನು ಕೇಳಿದ ಗಾಂಧೀಜಿಯವರು ಹರ್ಷ ವ್ಯಕ್ತಪಡಿಸಿದ್ದುಂಟು. ಫಜಲ್‌ಅಲಿ ಆಯೋಗದೆದುರು ಪೂಜ್ಯರು ಸಮರ್ಪಕವಾದ ಉತ್ತರವನ್ನು ಕೊಡುವ ಮೂಲಕ ಬೆಳಗಾವಿಯು ಕರ್ನಾಟಕಕ್ಕೇ ಸೇರಿದ್ದು ಎಂಬ ಗಟ್ಟಿಯಾದ ಮುದ್ರೆಯೊತ್ತಿದರು. ಬೆಳಗಾವಿಯಲ್ಲಿ ಕನ್ನಡದ ಕಂಪನ್ನು ಶ್ರೀಮಂತಗೊಳಿಸಲು, ಬೈಲಹೊಂಗಲ, ಸಂಪಗಾಂವ, ಬಾಗೇವಾಡಿ, ಕಿತ್ತೂರು, ಹೊಸೂರು ಮೊದಲಾದ ಊರುಗಳಿಂದ ಜನರನ್ನು ಬರಮಾಡಿಕೊಂಡು ಕನ್ನಡಿಗರ ಪ್ರಾಬಲ್ಯವನ್ನು ತೋರಿಸುವ ಕೆಲಸವನ್ನು ಮಾಡಿದರು. ಅದರಂತೆ ಮಹಾಜನ ಆಯೋಗಕ್ಕೂ ಸರಿಯಾದ ಉತ್ತರವನ್ನು ಕೊಡುವ ಮೂಲಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಅಧಿಕೃತವಾಗಿ ಹೇಳುವಂತೆ ಮಾಡಿದರು.
ಜಗದ್ಗುರು ಡಾ|| ಸಿದ್ದಲಿಂಗಮಹಾಸ್ವಾಮಿಗಳು ತೋಂಟದಾರ್ಯಮಠ ಗದಗ-ಡಂಬಳ ಅವರ ಮಾರ್ಗದರ್ಶನದಲ್ಲಿ 11-4-1988 ರಂದು ಬೀಳಗಿ ಹಿರೇಮಠದ ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳವರನ್ನು ನಾಗನೂರಿನ ಶ್ರೀರುದ್ರಾಕ್ಷಿಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ನಿಯುಕ್ತಿಮಾಡಿಕೊಳ್ಳುತ್ತಾರೆ. 6-11-1959 ರಂದು ನಾಡಿನ ಪೂಜ್ಯರ ಸಮ್ಮುಖದಲ್ಲಿ ಪಟ್ಟಾಧಿಕಾರವನ್ನೂ ಮಾಡುತ್ತಾರೆ. ಪೂಜ್ಯ ಡಾ|| ಶಿವಬಸವಮಹಾಸ್ವಾಮಿಗಳು ಪೂಜ್ಯ ಸಿದ್ಧರಾಮಸ್ವಾಮಿಗಳ ಸಂಕಲ್ಪದಂತೆ “ಲಿಂಗಾಯತ ಅಧ್ಯಯನ ಅಕಾಡೆಮಿ” ಪ್ರಸಾರಾಂಗ ಸ್ಥಾಪನೆಯನ್ನು ಮಾಡುತ್ತಾರೆ. ನಾಡಿನ ಹಿರಿಯ ಸಾಹಿತಿಗಳ ಹಾಗೂ ಅನುಭಾಗಳವರಿಂದ ಸಾವಿರಾರು ಗ್ರಂಥಗಳನ್ನು ಪ್ರಕಟನೆಮಾಡುವುದರ ಮೂಲಕ ಸಮುದಾಯದಕ್ಕೆ ಜ್ಞಾನ ದಾಸೋಹವನ್ನು ಮಾಡುತ್ತಾರೆ. ಅದರ ಜೊತೆ ಜೊತೆಯಾಗಿ “ಲಿಂಗಾಯತ ಕ್ರಾಂತಿ” ಎಂಬ ಮಾಸಪತ್ರಿಕೆಯನ್ನು ಪ್ರಕಟಿಸುವ ಮೂಲಕ ಶರಣಧರ್ಮದ ಹಲವಾರು ವಿಚಾರಗಳನ್ನು ಓದುಗರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ.
ಜಗದಳುವನ್ನು ನುಂಗಿದ ಕವಿ ಈಶ್ವರ ಸಣಕಲ್ಲರವರ ಬದುಕಿಗೆ ಒಂದುಷ್ಟು ಹಣವನ್ನು ಸಂಗ್ರಹಿಸಿಕೊಡುವ ಮೂಲಕ ಅವರ ಬಾಳಿಗೆ ನೆರವಾಗುತ್ತಾರೆ. ಕೊನೆಯಲ್ಲಿ ತಮ್ಮ ಮಠದಲ್ಲಿಯೂ ಇಟ್ಟುಕೊಳ್ಳುತ್ತಾರೆ. ವಚನ ಗುಮ್ಮಟ ರಾವ್‌ಬಹಾದ್ದೂರ ಫ. ಗು. ಹಳಕಟ್ಟಿಯವರ ಚಿಂತಾಜನಕ ಸ್ಥಿತಿಯನ್ನು ಕಂಡು ಬಹಳಷ್ಟು ನೆರವಾಗುತ್ತಾರೆ. ಹಾನಗಲ್ಲ ಕುಮಾರ ಸ್ವಾಮಿಗಳವರ ಸಮ್ಮುಖದಲ್ಲಿ ಹಳಕಟ್ಟಿಯವರನ್ನು ಸನ್ಮಾನಿಸಿ ಅಭಿನಂದನ ಪತ್ರವನ್ನು ಸಮರ್ಪಿಸಿ ಸಂತೃಪ್ತಿಯ ಭಾವವನ್ನು ವ್ಯಕ್ತಮಾಡುತ್ತಾರೆ. ವಿದ್ವಾಂಸರಾಗಿದ್ದ ಡಾ. ಆರ್. ಸಿ. ಹಿರೇಮಠ ಅವರಿಗೂ ಪ್ರೋತ್ಸಾಹ ಮಾಡುವ ಮೂಲಕ ಸಾಹಿತ್ಯಕೃಷಿಗೆ ಪ್ರೇರಣೆ ನೀಡುತ್ತಾರೆ. ಕನ್ನಡಕ್ಕಾಗಿ ಹೋರಾಡುವ ಕಾರ್ಯಕರ್ತರಿಗೆ ಏನೆಲ್ಲ ಸಹಾಯವನ್ನು ಮಾಡಿದರು. ಸಾಹಿತಿ ಕಲಾವಿದರ ಬಗೆಗೆ ಸ್ವಾಮೀಜಿ ಅವರಿಗೆ ಎಲ್ಲಿಲ್ಲದ ಕಾಳಜಿ. ನಾಟ್ಯಭೂಷಣ ಏಣಗಿ ಬಾಳಪ್ಪನವರನ್ನು ಶ್ರೀಮಠಕ್ಕೆ ಕರೆಯಿಸಿ ಆಶೀರ್ವದಿಸಿದರು.
ಸಮುದಾಯದ ಸರ್ವಾಂಗ ಅಭಿವೃದ್ಧಿಗಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡ ಪೂಜ್ಯರಿಗೆ 22-12-1989ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ವಿಶ್ವವಿದ್ಯಾಲಯದ ಗೌರವವನ್ನು ಹೆಚ್ಚಿಸಿಕೊಂಡಿತು. ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಮತ್ತು ವಿಜ್ಞಾನ ಕೇಂದ್ರಗಳು ಸಂಯುಕ್ತವಾಗಿ 25-12-1989ರಂದು ಜವಾಹರಲಾಲ್ ನೆಹರೂ ಮೆಡಿಕಲ್ ಸಭಾಂಗದಲ್ಲಿ ಗುರುವಂದನೆ ಸಮಾರಂಭದ ಮೂಲಕ ಗೌರವವನ್ನು ಸಮರ್ಪಿಸಿದರು. ಅಷ್ಟೆ ಅಲ್ಲದೆ ನಾಡಿನ ಬಹುತೇಕ ಮಠಾಧಿಪತಿಗಳು, ಸಂಘ ಸಂಸ್ಥೆಗಳು ಗೌರವಪೂರ್ವಕ ಸನ್ಮಾನಗಳನ್ನು ಮಾಡಿ ಹಿರಿಯ ಪೂಜ್ಯ ಡಾ|| ಶಿವಬಸವಮಹಾಸ್ವಾಮಿಗಳವರಿಂದ ಆಶೀರ್ವಾದಗಳನ್ನು ಪಡೆದುಕೊಂಡರು.
1990 ಫೆಬ್ರುವರಿಯಲ್ಲಿ ನೂರು ವಸಂತಗಳು ತುಂಬಿದ ಸುಸಂದರ್ಭದಲ್ಲಿ ಶತಮಾನದ ಸಂಭ್ರಮವನ್ನು ಆಚರಿಸಿ ನಾಡಿನ ಭಕ್ತಸಮೂಹವು ಸಂತಸವನ್ನು ಪಟ್ಟರು. ಸ್ವಾತಂತ್ರ್ಯ ಸಾಹಿತ್ಯ ಅಂದೋಲನದ ಸಂದರ್ಭದಲ್ಲಿ ಅವರು ಬ್ರಿಟಿಷರ ಕೋಪಕ್ಕೆ ಗುರಿಯಾದರು. ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಮರಾಠಿಗರ ದುರಾಕ್ರಮಕ್ಕೆ ತುತ್ತಾದರು. ಆದರೆ ಅವರು ಯಾವುದಕ್ಕೂ ಹಿಂದೇಟು ಹಾಕಲಿಲ್ಲ. ಅವರು ನಡೆದದ್ದೇ ದಾರಿಯಾಯ್ತು. ಆ ದೃಷ್ಟಿಯಿಂದ ಅವರೊಬ್ಬ ವೀರ ಸನ್ಯಾಸಿ, ದೀಮಂತ ಯೋಗಿ ಮಹಾ ಶಿವಯೋಗಿ.
ಶಿವಬಸವ ಸ್ವಾಮಿಜಿಯವರು ಹುಟ್ಟಿದ್ದು ಲಿಂಗಾಯತರಾಗಿ, ಬೆಳೆದದ್ದು ಕನ್ನಡಿಗರಾಗಿ. ಅವರು ಕಾವಿಧರಿಸಿ ಸಮಾಜವನ್ನು ಕಟ್ಟಿದರು. ಶಿಕ್ಷಣ ಸೌಲಭ್ಯ ಒದಗಿಸಿದರು. ಕನ್ನಡ ಮನಸ್ಸುಗಳನ್ನು ಒಂದುಗೂಡಿಸಿದರು. ಬೆಳಗಾವಿಯಲ್ಲಿ ಕನ್ನಡ ವಿರಾಜಿಸುವಂತೆ ಮಾಡಿ ಕನ್ನಡ ಗುರುಗಳಾದರು. 1932ರಲ್ಲಿ ಬೆಳಗಾವಿಗೆ ದಯಮಾಡಿಸಿ ಅಖಂಡ 72 ವರ್ಷಗಳ ಕಾಲ ಬೆಳಗಾವಿಯ ಪರಿಸರಕ್ಕೆ ಬೆಳಕಾಗಿ ನಿಂತರು. ಬಡವರ ಬದುಕಿಗೆ ದಿಕ್ಸೂಚಿಯಾದರು. ತಮ್ಮ ಅವಿರತ ಸೇವೆಯಿಂದ ಗಡಿನಾಡನ್ನು ಗುಡಿಯನ್ನಾಗಿ ಮಾಡಿದ ಪೂಜ್ಯ ಗುರುವರ್ಯರು ಡಾ|| ಶಿವಬಸವಸ್ವಾಮಿಗಳವರು. ಅಂತಹ ಪೂಜ್ಯರು ನೂರರ ಮೇಲೆ ನಾಲ್ಕು ವಸಂತಗಳ ತುಂಬು ಜೀವನವನ್ನು ಸಮುದಾಯದ ಸಮೃದ್ಧತೆಗೆ ಸಮರ್ಪಿಸಿ ದಿನಾಂಕ 9-9-1994ರಂದು ಲಿಂಗದೊಳಗಾದರು. ಅವರ ಸೇವೆ, ತ್ಯಾಗ, ಸಂಕಲ್ಪಗಳು ಇಂದಿನವರಿಗೆ ಮಾರ್ಗದರ್ಶನಗಳಾಗಿವೆ.
-ಪೂಜ್ಯ ಶ್ರೀ ಮೃತ್ಯುಂಜಯಸ್ವಾಮಿಗಳು
ರಾಜಗುರು ಹಿರೇಮಠ ಗಂದಿಗವಾಡ,
ತಾ: ಖಾನಾಪೂರ ಜಿ: ಬೆಳಗಾವಿ
ಜಂಗಮವಾಣಿ : 9945012037
ಇದನ್ನೂ ಓದಿ: Dr Shivabasava Mahaswamiji: ಗಡಿನಾಡನ್ನು ಗುಡಿ ಮಾಡಿದ ಡಾ. ಶಿವಬಸವ ಮಹಾಸ್ವಾಮಿಗಳ ಜೀವನ ಚರಿತ್ರೆ ಭಾಗ -1