Dr Shivabasava Mahaswamiji: ಗಡಿನಾಡನ್ನು ಗುಡಿ ಮಾಡಿದ ಡಾ. ಶಿವಬಸವ ಮಹಾಸ್ವಾಮಿಗಳ ಜೀವನ ಚರಿತ್ರೆ ಭಾಗ -1

ನಾಗನೂರಿನ ಆರನೆಯ ಪೀಠಾಧಿಪತಿಗಳಾದ ಪೂಜ್ಯ ವೀರಭದ್ರಸ್ವಾಮಿಗಳು ಲಿಂಗೈಕ್ಯರಾದರು. ಅವರ ಉತ್ತರಾಧಿಕಾರಿಯ ಶೋಧನೆ ಹೊಣೆಹೊತ್ತ ಗುರುಪಾದಯ್ಯ ಶೀಲಯ್ಯನವರಮಠ ಎಂಬ ಹಿರಿಯರು ಹಿರೇಕೊಪ್ಪ ಗ್ರಾಮಕ್ಕೆ ಆಗಮಿಸಿ ಬಾಲಕ ಶಿವಬಸವಸ್ವಾಮಿಗಳ ಮುಖಲಕ್ಷಣಗಳನ್ನು ಗಮನಿಸಿ, ಇವರೇ ನಮ್ಮೂರಿನ ಶ್ರೀರುದ್ರಾಕ್ಷಿಮಠಕ್ಕೆ ನಿಜವಾದ ಗುರುಗಳಾಗುತ್ತಾರೆ ಎಂದು ನಿರ್ಧರಿಸುತ್ತಾರೆ.

Dr Shivabasava Mahaswamiji: ಗಡಿನಾಡನ್ನು ಗುಡಿ ಮಾಡಿದ ಡಾ. ಶಿವಬಸವ ಮಹಾಸ್ವಾಮಿಗಳ ಜೀವನ ಚರಿತ್ರೆ ಭಾಗ -1
ನಾಗನೂರಿನ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು
Follow us
TV9 Web
| Updated By: ಆಯೇಷಾ ಬಾನು

Updated on:Aug 01, 2021 | 10:25 AM

ಬೆಳಗಾವಿ: ಕನ್ನಡ ನಾಡು ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ಉಜ್ವಲ ಇತಿಹಾಸವನ್ನು ಹೊಂದಿರುವ ಶ್ರೀಗಂಧದ ನಾಡು. ನಮ್ಮ ಚೆಲುವ ಕನ್ನಡ ನಾಡು. ಈ ಕನ್ನಡ ನಾಡಿನಲ್ಲಿ ಹತ್ತು ಹಲವು ಪರಂಪರೆಗಳು ನಾಡಿನ ಸಂಪದವನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತ ಬಂದಿವೆ. ಶರಣರು, ದಾಸರು, ಕಬ್ಬಿಗರು, ರಾಜಮಹಾರಾಜರು ಈ ನಾಡಿನ ಸಮೃದ್ಧತೆಗಾಗಿ ತಮ್ಮನ್ನೆ ಸಮರ್ಪಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ನಾಡಿನ ಇತಿಹಾಸವು ಅಚ್ಚಳಿಯದಂತೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಮಠಗಳು, ಮಂದಿರಗಳು, ತಪಸ್ವಿಗಳೂ ಕೂಡ ನಾಡಿನ ಅಭ್ಯುದಯಕ್ಕಾಗಿ ತಮ್ಮ ತಮ್ಮ ರಚನಾತ್ಮಕ ಕಾರ್ಯಗಳ ಮೂಲಕ ನಾಡಿನ ಶ್ರೇಯಸ್ಸಿಗೆ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಗಡಿನಾಡಿನ ಗಡಿಯನ್ನು ಭದ್ರಗೊಳಿಸುವಲ್ಲಿ ಸಮರ್ಪಿಸಿಕೊಂಡವರು ನಾಗನೂರಿನ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಲಿಂ. ಡಾ|| ಶಿವಬಸವ ಮಹಾಸ್ವಾಮಿಗಳು.(Dr Shivabasava Mahaswamiji)

ಕನ್ನಡ ನೆಲ-ಜಲ-ಗಾಳಿಗಳ ಅಭಿವೃದ್ಧಿಗೆ ಶ್ರಮಿಸಿದ ಕಾಯಕಯೋಗಿ ಕರ್ನಾಟಕದಲ್ಲಿ ಬಹಳಷ್ಟು ಮಠಗಳು ಸಮುದಾಯದ ಹಾಗೂ ನಾಡಿನ ಶ್ರೇಯಸ್ಸಿಗಾಗಿ ದುಡಿಯುತ್ತ ಬಂದಿವೆ. ಉತ್ತರ ಕರ್ನಾಟಕದ ಗಡಿಯಲ್ಲಿದ್ದುಕೊಂಡು ಕನ್ನಡ ನೆಲ-ಜಲ-ಗಾಳಿಗಳ ಅಭಿವೃದ್ಧಿಗೆ ಹಾಗೂ ಸಂರಕ್ಷಣೆಗೆ ಹಗಲಿರುಳು ಶ್ರಮಿಸಿದವರು ಪೂಜ್ಯ ಕಾಯಕಯೋಗಿ ಡಾ|| ಶಿವಬಸವ ಮಹಾಸ್ವಾಮಿಗಳು. ಧಾರ್ಮಿಕ ಸಂಸ್ಥೆಗಳಾಗಿರಬೇಕಾದ ಮಠಗಳು, ಅದರ ಗಡಿಯನ್ನು ದಾಟಿ ಕಾಲಕ್ರಮದಲ್ಲಿ ಶಿಕ್ಷಣ ಪ್ರಸಾರ, ಸಂಸ್ಕೃತಿ ಸಂವೇದನೆ, ಭಾಷೆಯ ಪೋಷಣೆ, ಸಾಹಿತ್ಯ ಸೃಷ್ಟಿ, ನ್ಯಾಯ ಪರಿಪಾಲನೆ, ಔಷಧೋಪಚಾರ ಮೊದಲಾದ ಜನೋಪಯೋಗಿ ಚಟುವಟಿಕೆಗಳನ್ನು ಕೈಕೊಳ್ಳುವ ಮೂಲಕ ಲಿಂಗಾಯತ ಮಠಗಳು ಸಾಮಾಜಿಕ ಸಂಸ್ಥೆಗಳಾಗಿ ಬೆಳೆದು ನಿಂತಿವೆ.

ಕರ್ನಾಟಕದ ಬಹುತೇಕ ಮಠಗಳು ಹೊಸಹೊಸ ಆವಿಷ್ಕಾರಗಳೊಂದಿಗೆ ಸಂಪದ್ಭರಿತ ಹಾಗೂ ಸ್ವಾಸ್ತ ಸಮಾಜದ ನಿರ್ಮಾಣಕ್ಕೆ ಗಮನಹರಿಸಿರುವುದನ್ನು ನೋಡಬಹುದು. ಸಾಹಿತ್ಯ ಕೃತಿಗಳ ಹಸ್ತಪ್ರತಿಗಳ ಸಂಗ್ರಹಣೆ, ರಕ್ಷಣೆ, ಪ್ರಕಟಣೆ, ಪ್ರಸಾದ ನಿಲಯಗಳ ಸ್ಥಾಪನೆ, ಶಿಕ್ಷಣ, ಆಸ್ಪತ್ರೆ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಶ್ರದ್ಧೆಯಿಂದ ವ್ಯವಸ್ಥಿತವಾಗಿ ನಿರ್ವಹಿಸತೊಡಗಿದವು. ಆ ಮೂಲಕ ತಮ್ಮನ್ನು ಸೃಜನಶೀಲರನ್ನಾಗಿ ಮಾಡಿಕೊಂಡು ಮುಖ್ಯವಾಹಿನಿಯಲ್ಲಿ ಸಾಗಿದವು. ಇಂತಹ ಮಹಾಮಾರ್ಗದಲ್ಲಿ ಸಾಗಿ ಸಮುದಾಯಕ್ಕೆ ಸಮರ್ಪಣೆಗೊಂಡವರು ನಾಗನೂರಿನ ಶ್ರೀ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ|| ಶಿವಬಸವ ಮಹಾಸ್ವಾಮಿಗಳು.

ಗಡಿನಾಡಿನ ಬೆಳಗಾವಿಯಲ್ಲಿ ಶ್ರೀ ಕಲ್ಮಠ, ಶ್ರೀ ಕಾರಂಜಿಮಠ ಹಾಗೂ ನಾಗನೂರಿನ ಶ್ರೀರುದ್ರಾಕ್ಷಿಮಠ ಮೊದಲಾದವು ನಾಡು-ನುಡಿಯ ಸೇವೆಯನ್ನು ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದಿವೆ. ಕನ್ನಡ ನಾಡಿನ ಹಿತಚಿಂತನೆಯ ಮೂಲಕ ನಿರಂತರವಾಗಿ ಶ್ರಮಿಸುತ್ತಿರುವ ಲಿಂಗಾಯತ ಮಠಗಳಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಪುಣೆ-ಬೆಂಗಳೂರು ಹೆದ್ದಾರಿಯ ಮೇಲಿರುವ ಬೆಳಗಾವಿ ಕರ್ನಾಟಕದ ಹೆಬ್ಬಾಗಿಲು. ಕರ್ನಾಟಕ ಹಾಗೂ ಮಹಾರಾಷ್ಟಗಳ ಸಾಂಸ್ಕೃತಿಕ ರಾಯಭಾರಿಯಾಗಿ ಶ್ರೀರುದ್ರಾಕ್ಷಿಮಠವು ಮುಂಚೂಣಿಯಲ್ಲಿದೆ.

ಭಕ್ತರ ಹೃದಯ ಗದ್ದುಗೆಯಲ್ಲಿ ಶಾಶ್ವತವಾಗಿ ನೆಲೆನಿಂತು ಶಿವಬಸವ ಮಹಾಸ್ವಾಮಿಗಳು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಒಂದು ಸಣ್ಣ ಗ್ರಾಮ. ಫಲವತ್ತತೆಯ ಮಣ್ಣಿನಿಂದ ಕೂಡಿದ ಭಕ್ತಿಯ ಬೆಳಸಿನ ಸಮೃದ್ಧ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಲಿಂಗಾಯತರೆ ಹೆಚ್ಚು ಇದ್ದು ಸಾಮರಸ್ಯದ ಬದುಕಿಗೆ ಹೆಸರಾಗಿದ್ದಾರೆ. ಈ ನಾಗನೂರಿನಲ್ಲಿ ಕುಮಾರಸಮಯಕ್ಕೆ ಸಂಬಂಧಿಸಿದ ಮಠವೇ ಶ್ರೀ ರುದ್ರಾಕ್ಷಿಮಠ. ನೀನೊಲಿದು ಪಾದವಿನಿಟ್ಟ ನೆಲವೇ ಸುಕ್ಷೇತ್ರ ಎಂಬ ಅನುಭವದ ನುಡಿಯಂತೆ; ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಅಲ್ಲಮಪ್ರಭು ಮತ್ತು ಸಿದ್ಧರಾಮ ಸ್ವಾಮಿಗಳವರ ಪಾದಸ್ಪರ್ಶದಿಂದ ನಾಗನೂರಿನ ಶ್ರೀರುದ್ರಾಕ್ಷಿ ಮಠದ ನಿರ್ಮಾಣವಾಗಿದೆ. ಇಂತಹ ಶ್ರೀಮಠದ ಏಳನೆಯವರಾಗಿ ಎಂಟು ವರ್ಷದ ಪ್ರಾಯದಲ್ಲಿ ಉತ್ತರಾಧಿಕಾರಿಗಳಾಗಿ ಬಂದವರೇ ಶಿವಬಸವಸ್ವಾಮಿಗಳು.

ಪರಿಶುದ್ಧ ಬದುಕಿನಿಂದ ಸರಳ ಹಾಗೂ ಸಹಜ ಜೀವನ ಶೈಲಿಯಿಂದ ಇಂದಿಗೂ ಭಕ್ತರ ಹೃದಯ ಗದ್ದುಗೆಯಲ್ಲಿ ಶಾಶ್ವತವಾಗಿ ನೆಲೆನಿಂತುಕೊಂಡಿದ್ದಾರೆ. ಕಾಯಕ, ತ್ಯಾಗ, ಅಧ್ಯಾತ್ಮ, ದಾಸೋಹ, ಸರಳತೆ, ಮಾನವೀಯತೆ, ಸಾಮಾಜಿಕ ಕಳಕಳಿ ಮುಂತಾದ ಎಲ್ಲ ಮೌಲ್ಯಗುಣಗಳನ್ನು ತಮ್ಮೊಳಗೆ ಮೈಗೂಡಿಸಿಕೊಂಡಿದ್ದವರು ಶ್ರೀ ಶಿವಬಸವಸ್ವಾಮಿಗಳು.

ದೈವಭಕ್ತಿ-ರಾಜಶಕ್ತಿಗಳ ಸಂಗಮಸ್ಥಾನವೆನಿಸಿದ ನಾಗನೂರಿನ ಶೀಲಯ್ಯನವರಮಠ ಮನೆತನದ ಶಿವಬಸವಸ್ವಾಮಿ ಮತ್ತು ಬಸಮ್ಮ ದಂಪತಿಗಳ ಪುಟ್ಟ ಸಂಸಾರ. ಬಸಮ್ಮನವರ ತವರುಮನೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪ. ಅಲ್ಲಿನ ಹಿರಿಯರ ಭಕ್ತಿಯ ಪ್ರೇಮಾಗ್ರಹಕ್ಕೆ ಮಣಿದ ದಂಪತಿಗಳು ನಾಗನೂರನ್ನು ಬಿಟ್ಟು ಹಿರೇಕೊಪ್ಪದಲ್ಲಿ ನೆಲೆಸುತ್ತಾರೆ. ಈ ಸಂಸಾರದಲ್ಲಿ ಹಿರಿಯ ಮಗನಾದ ಅಡಿವೆಯ್ಯ ಮತ್ತು ರುದ್ರಮ್ಮನವರ ಕಿರಿಯ ಸುಪುತ್ರರೇ ಶಿವಬಸವಸ್ವಾಮಿಗಳು. ಅವರು ಹುಟ್ಟಿದ್ದು 8 ಡಿಸೆಂಬರ್ 1889ರ ಶುಭೋದಯದಲ್ಲಿ.

ಶಿವವಬಸವ ಸ್ವಾಮಿಗಳು ತಪ್ಪೆಜ್ಜೆಗಳನ್ನಿಟ್ಟು ಮುಂದೆ ಸಾಗುವ ಹಂತದಲ್ಲಿ ಅಥಣಿಯ ಪೂಜ್ಯ ಮುರುಘೇಂದ್ರ ಮಹಾಶಿವಯೋಗಿಗಳವರ ದಿವ್ಯಕೃಪೆಗೆ ಪಾತ್ರರಾದರು. ಮಗು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಿರುವಾಗಲೇ ತಾಯಿ ರುದ್ರಮ್ಮನವರು ಲಿಂಗೈಕ್ಯರಾಗುತ್ತಾರೆ. ಆಗ ಮಗು ಶಿವಬಸವಸ್ವಾಮಿಗಳಿಗೆ ಎಂಟು ವರ್ಷವಾಗಿತ್ತು. ಪೂಜ್ಯ ಅಥಣಿಯ ಶಿವಯೋಗಿಗಳ ದಿವ್ಯಕೃಪೆಯ ಹರಕೆ ಕೈಗೂಡುವ ಸಮಯವೂ ಸಮೀಪಿಸಿತು.

ಮುಖಲಕ್ಷಣಗಳಿಂದಲೇ ಗುರುಗಳಾದ್ರು ನಾಗನೂರಿನ ಆರನೆಯ ಪೀಠಾಧಿಪತಿಗಳಾದ ಪೂಜ್ಯ ವೀರಭದ್ರಸ್ವಾಮಿಗಳು ಲಿಂಗೈಕ್ಯರಾದರು. ಅವರ ಉತ್ತರಾಧಿಕಾರಿಯ ಶೋಧನೆ ಹೊಣೆಹೊತ್ತ ಗುರುಪಾದಯ್ಯ ಶೀಲಯ್ಯನವರಮಠ ಎಂಬ ಹಿರಿಯರು ಹಿರೇಕೊಪ್ಪ ಗ್ರಾಮಕ್ಕೆ ಆಗಮಿಸಿ ಬಾಲಕ ಶಿವಬಸವಸ್ವಾಮಿಗಳ ಮುಖಲಕ್ಷಣಗಳನ್ನು ಗಮನಿಸಿ, ಇವರೇ ನಮ್ಮೂರಿನ ಶ್ರೀರುದ್ರಾಕ್ಷಿಮಠಕ್ಕೆ ನಿಜವಾದ ಗುರುಗಳಾಗುತ್ತಾರೆ ಎಂದು ನಿರ್ಧರಿಸುತ್ತಾರೆ. ಅದರಂತೆ ಹಿರೇಕೊಪ್ಪದ ಹಿರಿಯರೊಂದಿಗೆ ಚರ್ಚಿಸಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಅದರಂತೆ ಶಿವಬಸವ ದೇವರನ್ನು ನಾಗನೂರಿಗೆ ಕರೆತಂದರು.

ಆಸ್ತಿಯಿಲ್ಲದ ಶ್ರೀರುದ್ರಾಕ್ಷಿ ಮಠಕ್ಕೆ ನಿಜವಾದ ನಿಧಿಯಾಗಿ ಬಂದವರು ಶಿವಬಸವಸ್ವಾಮಿಗಳು. ಪೂಜ್ಯರು ಆಗಮಿಸಿದ ಸಮಯವದು ಅಮೃತಘಳಿಗೆ. ಗ್ರಾಮ ಹಾಗೂ ಶ್ರೀರುದ್ರಾಕ್ಷಿ ಮಠಕ್ಕೆ ಶುಕ್ರದೆಸೆ ಪ್ರಾಪ್ತವಾಯಿತು. ಕಾದ್ರೊಳ್ಳಿಯ ಅದೃಶಜ್ಜ ಗುರುಗಳ ಪ್ರೇರಣೆ ಸಹಾಯದಿಂದ ಮೂರನೆಯ ತರಗತಿಯವರಗೆ ಶಿಕ್ಷಣವನ್ನು ಪಡೆದರು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಆಗಮಿಸಿದ ರುದ್ರಾಕ್ಷಿಮಠದ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳ ದೃಷ್ಟಿಗೆ ಬಿದ್ದರು. ಶಿವಬಸವ ಸ್ವಾಮಿಗಳನ್ನು ಓದಲು ಹುಬ್ಬಳ್ಳಿಗೆ ಕಳುಹಿಸುವಂತೆ ಹಿರಿಯರಿಗೆ ಸೂಚಿಸಿದರು. ಸಲಹೆ ಸೂಕ್ತವಾದುದರಿಂದ ಹಿರಿಯರು ಪೂಜ್ಯರ ಜೊತೆಗೆನೇ ಶಿವಬಸವ ಸ್ವಾಮಿಗಳನ್ನು ಹುಬ್ಬಳ್ಳಿ ರುದ್ರಾಕ್ಷಿಮಠಕ್ಕೆ ಕಳುಹಿಸಿದರು. ಅಲ್ಲಿ ಸಂಸ್ಕೃತ, ಮಂತ್ರ, ವೈದಿಕಗಳನ್ನು ಜೊತೆಗೆ ವಚನಾಧ್ಯಯನವನ್ನೂ ಮಾಡಿದರು. ಅದರಂತೆ ಅಲ್ಲೇ ಇರುವ ಸಿದ್ಧಾರೂಢ ಸ್ವಾಮಿಗಳವರ ಪ್ರವಚನವನ್ನು ಆಲಿಸುವಂತ ಸದವಕಾಶ ಒದಗಿ ಬಂದಿತು. ವೇದ ಆಗಮಗಳ ಅಧ್ಯಯನವೂ ಸಾಗಿತು. ಸಿದ್ಧಾರೂಢರ ಮಠದಲ್ಲಿ ನಡೆಯುತ್ತಿದ್ದ ನಿಜಗುಣ ಶಿವಯೋಗಿಗಹಳ ಶಾಸ್ತ್ರ, ಪ್ರವಚನ, ಚಿಂತನ ಗೋಷ್ಟಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮನನ ಮಾಡಿಕೊಂಡರು.

ಅಲ್ಲಿಂದ ಶಿವಬಸವ ಮರಿದೇವರು ಶಿವಯೋಗಮಂದಿರಕ್ಕೆ ತೆರಳಿ ಕುಮಾರಸ್ವಾಮಿಗಳವರ ಮಾರ್ಗದರ್ಶನದಲ್ಲಿ ಹನ್ನೆರಡು ವರ್ಷ ಅಧ್ಯಯನ ಮಾಡಿದರು. ತಮ್ಮ ನಯ-ವಿನಯ, ಸರಳ-ಸಜ್ಜನಿಕೆಗಳಿಂದ ಪೂಜ್ಯ ಕುಮಾರಸ್ವಾಮಿಗಳವರ ಕೃಪಾಶೀರ್ವಾದದಲ್ಲಿ ಚೊಕ್ಕ ಚಿನ್ನವಾದರು. ನಂತರ ಅಲ್ಲಿಂದ ನಾಗನೂರಿನ ಶ್ರೀಮಠಕ್ಕೆ ಮರಳಿ ಬಂದರು. ಅವರ ಸಮಾಜಮುಖಿ ಚಿಂತನೆಗಳಿಗೆ ಇಡೀ ಗ್ರಾಮವೇ ತಲೆಬಾಗಿತು. ಚಿವಟಗುಂಡಿಯ ಭಕ್ತಿವಂತ ಗೌಡರು ಐದು ಎಕರೆಯಷ್ಟು ಭೂಮಿಯನ್ನು ಕೂಡಿಸಿಕೊಟ್ಟರು. ಅದೇ ಭೂಮಿಯಲ್ಲಿ ಪೂಜ್ಯರು ಕೃಷಿಕಾಯಕವನ್ನು ನೇಗಿಲಯೋಗಿಯಾಗಿ ಶಿವಯೋಗಿಯಾಗಿ ದುಡಿಯಲು ಪ್ರಾರಂಭಿಸಿದರು. ಮಠದಲ್ಲಿ ದಾಸೋಹವೂ ಆರಂಭವಾಯಿತು. ಸುತ್ತಲಿನ ಗ್ರಾಮಗಳ ಭಕ್ತರು ಪೂಜ್ಯರ ವಿಚಾರಧಾರೆಗಳಿಗೆ ತಲೆದೂಗಿದರು. ಪೂಜ್ಯರ ಕ್ರಿಯಾಶೀಲತೆಗೆ ಪ್ರಭಾವಿತರಾದರು. ಕಣ್ಣಾರೆ ಕಂಡ ಭಕ್ತ ಸಮೂಹದ ದಾಸೋಹವು ಮಠದ ಶ್ರೀಮಂತಿಕೆಗೆ ಕಾರಣವಾಯಿತು. ಅವರ ಶುದ್ಧ ಸಂಕಲ್ಪ, ಶ್ರದ್ಧೆ ಹಾಗೂ ಸತತ ಪ್ರಯತ್ನಗಳ ಮೂಲಕ ಶ್ರೀರುದ್ರಾಕ್ಷಿ ಮಠವು ಬೃಹದ್ಧಾಕರವಾಗಿ ಬೆಳೆಯತೊಡಗಿತು. ಅಲ್ಲಿನ ಭಕ್ತರ ನೆರವು ಹಾಗೂ ಪೂಜ್ಯರ ಕ್ರಿಯಾಶಿಲ ಸಂಕಲ್ಪವು ವಿದ್ಯಾರ್ಥಿಗಳ, ವಿದ್ವಾಂಸರ, ಸಂಶೋಧಕರ ಮತ್ತು ಸಾರ್ವಜನಿಕರ ಸೇವೆಗೈಯಲು ಸನ್ನದ್ಧರಾದರು, ಅದಕ್ಕೆ ಕಾರಣ ಗುರುವಿನಗುರು ಹಾನಗಲ್ಲ ಶ್ರೀಕುಮಾರಮಹಾಸ್ವಾಮಿಗಳ ದಿವ್ಯಕೃಪೆ.

ವಿರಕ್ತಮಠಗಳೆಲ್ಲ ದಾಸೋಹಕ್ಕೆ ಮುಂಚೂಣಿ ವಿರಕ್ತಮಠಗಳೆಲ್ಲ ದಾಸೋಹಕ್ಕೆ ಮುಂಚೂಣಿಯಲ್ಲಿ ಇರುವಂತವು. ಹತ್ತೊಂಭತ್ತನೆಯ ಶತಮಾನದ ಸಮುದಾಯವು ಅಕ್ಷರದ ಅರಿವು ಇಲ್ಲದ ಅಂಧಕಾರದ ಕಾಲವದು. ಅಂದು ನಮ್ಮ ಸಮಾಜದ ಹಿರಿಯರಾದ ಡೆಪ್ಯೂಟಿ ಚೆನ್ನಬಸಪ್ಪನವರು, ಅರಟಾಳ ರುದ್ರಗೌಡರು ಮುಂತಾದವರ ಮಾರ್ಗದಲ್ಲಿ ಲಿಂಗಾಯತ ಸಮಾಜವು ಕತ್ತಲೆಯಿಂದ ಬೆಳಕಿನೆಡೆಗೆ ದಾಪುಗಾಲನ್ನಿಡಲು ಪ್ರಾರಂಭಿಸಿತು. ಅದೇ ಸಂದರ್ಭದಲ್ಲಿ ನಮ್ಮ ನಾಡಿನ ಸಪ್ತರ್ಷಿಗಳ ಸಾರ್ಥಕ ತ್ಯಾಗದ ಫಲವಾಗಿ ಕರ್ನಾಟಕ ಲಿಂಗಾಯತ ಎಜ್ಯುಕೇಷನ್ ಸೊಸೈಟಿಯು 13 ನವೆಂಬರ್ 1916ರಂದು ಸ್ಥಾಪನೆಯಾಯಿತು. ಅಂದಿನಿಂದ ಶೋಷಿತ ಸಮುದಾಯವು ಶಿಕ್ಷಣವನ್ನು ಪಡೆಯಲು ಅವಕಾಶ ಲಭಿಸಿತು.

ಶಿವಬಸವಸ್ವಾಮಿಗಳವರ ಕನಸು ನನಸಾಗುವ ಸುದಿನ 6 ಜೂನ್ 1932. ಅವರ ಕರ‍್ಯಕ್ಷೇತ್ರ ವಿಸ್ತಾರಗೊಳ್ಳುವ ಸಂಭ್ರಮದ ಕ್ಷಣ. ನಾಗನೂರಿನ ಶ್ರೀರುದ್ರಾಕ್ಷಮಠದ ಪಯಣವು ಬೆಳಗಾವಿಯ ದಂಡುಪ್ರದೇಶಕ್ಕೆ ಸೇರಿದ ಕೋಟೆಯಲ್ಲಿ ವಿಶಾಲ ಬಂಗ್ಲೆಯೊಂದನ್ನು ಬಾಡಿಗೆಗೆ ಪಡೆದು ಪ್ರಸಾದ ನಿಲಯವನ್ನು ಆರಂಭಿಸಿದರು. ಕೆ.ಎಲ್.ಇ.ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಬಿ. ಬಿ. ಮಮದಾಪೂರ ಮಾಸ್ತರರು ಶಹಾಪುರದ ಜಿಗಜಿನ್ನಿ ವಕೀಲರು, ಶ್ರಿಂಗಾರಿ ಶಾಂತವೀರಪ್ಪನವರು, ಕೋಮಕಾಳಿಮಠ ದುಂಡಯ್ಯನವರು, ದೊಂಬಿಮಠ ಸ್ವಾಮಿಗಳು ಮಾಡಿದ ಗಮನಾರ್ಹ ಸಹಕಾರವು ಸ್ಮರಣೀಯವಾದುದು. ಮೊದಲನೆಯ ವರ್ಷ ಇಪ್ಪತ್ತೊಂದು ವಿದ್ಯಾರ್ಥಿಗಳು ಪ್ರಸಾದ ನಿಲಯಕ್ಕೆ ಸೇರ್ಪಡೆಯಾದರು. ಅನಂತರದಲ್ಲಿ ಸಂಸ್ಥಾನಿಕರ ಆಡಳಿತಕ್ಕೊಳಪಟ್ಟ ಶಹಾಪೂರದ ಬೋಳಮಲ್ಲರ ಕಟ್ಟಡಕ್ಕೆ ಸ್ಥಳಾಂತರಗೊಂಡು ವಿದ್ಯಾರ್ಥಿಗಳ ಅಧ್ಯಯನ್ನಕ್ಕೆ ಮತ್ತಷ್ಟು ಅನುಕೂಲವಾಯಿತು.

-ಪೂಜ್ಯ ಶ್ರೀ ಮೃತ್ಯುಂಜಯಸ್ವಾಮಿಗಳು ರಾಜಗುರು ಹಿರೇಮಠ ಗಂದಿಗವಾಡ, ತಾ: ಖಾನಾಪೂರ ಜಿ: ಬೆಳಗಾವಿ ಜಂಗಮವಾಣಿ : 9945012037

ಇದನ್ನೂ ಓದಿ: Dr Shivabasava Mahaswamiji: ಜ್ಞಾನ ದಾಸೋಹ, ಲಿಂಗಾಯತ ಕ್ರಾಂತಿ ಮಾಡಿದ ಡಾ. ಶಿವಬಸವ ಮಹಾಸ್ವಾಮಿಗಳ ಜೀವನ ಚರಿತ್ರೆ ಭಾಗ -2

Published On - 9:45 am, Sun, 1 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ