
ಬೆಳಗಾವಿ, ಡಿಸೆಂಬರ್ 20: ಬೆಳಗಾವಿ (Belagavi) ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ರಾಜಕೀಯ ಒತ್ತಡಕ್ಕೆ ಮಣಿದು ಅಮಾನತು ಮಾಡಿದ್ದಾರೆಂದು ಆರೋಪಿಸಿ ಸೆಲ್ಫೀ ವೀಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ತನಗೆ ನ್ಯಾಯ ಕೊಡಿಸಿಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಾವು ಮಾಡಿದ ವೀಡಿಯೋದಲ್ಲಿ ಶಿಕ್ಷಕಿ ಹೇಳಿಕೊಂಡಿದ್ದಾರೆ.
ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರವಾಗಿ ಚುನಾವಣೆ ನಡೆಸಲು ಪವನ್ ಪಾಟೀಲ್ ಎಂಬವರು ಯತ್ನಿಸಿದ್ದರು. ನಿಯಮ ಉಲ್ಲಂಘನೆಯುಂಟಾಗಿದೆ ಎಂದು ಗಮನಿಸಿದ ಮುಖ್ಯ ಶಿಕ್ಷಕಿ ಆ ದಿನ ಚುನಾವಣೆಯನ್ನು ಮುಂದೂಡಿದ್ದರು. ಇದರಿಂದಾಗಿ ಪವನ್ ಪಾಟೀಲ್ ಹಾಗೂ ಅವರ ಬೆಂಬಲಿಗರು ಅಸಮಾಧಾನಗೊಂಡು, ಸ್ಥಳೀಯ ರಾಜಕೀಯ ಒತ್ತಡ ತಂದು ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ.
ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಬಳಸಿ ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದು ಬಿಇಒ ಪ್ರಭಾವತಿ ಪಾಟೀಲ್ ಅವರು ಯಾವುದೇ ಸ್ಪಷ್ಟ ತಪ್ಪಿಲ್ಲದಿದ್ದರೂ ಸುರೇಖಾ ಅವರನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿಡಿಯೋದಲ್ಲಿ ಸುರೇಖಾ, ಶಾಲಾ ವ್ಯವಸ್ಥೆಗೆ ರಾಜಕೀಯ ಪ್ರವೇಶಿಸಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಶಿಕ್ಷಕ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಈ ಪ್ರಕರಣಕ್ಕೆ ನ್ಯಾಯಸಮ್ಮತ ತನಿಖೆ ನಡೆಸಿ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಅವರು,ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗೋಳಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.