ಬೆಳಗಾವಿ, ಡಿಸೆಂಬರ್ 11: ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದ ಯುವಕ ಪ್ರೀತಿಸಿದ್ದ ಯುವತಿ ಜೊತೆ ರವಿವಾರ (ಡಿ.10) ಓಡಿ ಹೋಗಿದ್ದನು. ಇದರಿಂದ ಕೋಪಗೊಂಡ ಯುವತಿ ಕಡೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಪ್ರಕರಣ ಸಂಬಂಧ ಪೊಲೀಸರು (Police) ಈಗಾಗಲೆ ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಇನ್ನು ಹಲ್ಲೆಗೊಳಗಾದ ಮಹಿಳೆಯನ್ನು (Woman) ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಮ್ಸ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಭೇಟಿ ನೀಡಿ, ಸಂತ್ರಸ್ತ ಮಹಿಳೆಯ ಆರೋಗ್ಯ ವಿಚಾರಿಸಿದರು. ಘಟನೆ ಬಗ್ಗೆ ಮಹಿಳೆ ಪತಿ ಲಗಮಣ್ಣ ಗಡ್ಕರಿಯಿಂದ ಮಾಹಿತಿ ಪಡೆದರು.
ಈ ವೇಳೆ ಸಂತ್ರಸ್ತ ಮಹಿಳೆ ಕುಟುಂಬಸ್ಥರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಮನವಿ ಮಾಡಿದರು. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು; ಸಿದ್ದರಾಮಯ್ಯ
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಡೀ ಮಾನವ ಕುಲ ತಲೆ ತಗ್ಗಿಸುವ ಕೆಲಸ ಇದು. ನಿನ್ನೆ (ಡಿ.11) ರಾತ್ರಿ ಘಟನೆಯಾದ ಮೇಲೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯವೆಸಗಿದವರ ವಿರುದ್ಧ ಕಾನೂನಿನಡಿ ಕಠಿಣ ಶಿಕ್ಷೆ ಆಗಬೇಕು. ನನ್ನ ತಾಲೂಕಿನಲ್ಲೇ ಇಂತಹ ಘಟನೆ ಆಗಿದ್ದು ಖೇದಕರ ಎಂದು ಹೇಳಿದರು.
ತಿಳಿವಳಿಕೆ ಇದ್ದವರು ಏಕೆ ಇಂತಹ ತಪ್ಪು ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಮಹಿಳೆ ಮನಸ್ಸಿಗೆ ಘಾಸಿಯಾಗಿದೆ, ನಾನು ಅವರ ಬೆಂಬಲಕ್ಕಿದ್ದೇನೆ. ಸಖಿ ಒನ್ ಸ್ಟಾಪ್ ಅಡಿಯಲ್ಲಿ ಸಂತ್ರಸ್ತ ಮಹಿಳೆ ಪರವಾಗಿ ವಾದಿಸಲು ನಾವೇ ವಕೀಲರನ್ನು ನೀಡುತ್ತೇವೆ. ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಮಹಿಳೆಯ ಕುಟುಂಬದ ಬೇಡಿಕೆ ಏನಿದ್ದರೂ ಅದನ್ನು ಇಡೇರಿಸುತ್ತೇನೆ. ಅನ್ಯಾಯಕ್ಕೊಳಗಾದ ಮಹಿಳೆಯ ಕುಟುಂಬದ ಜತೆ ಸರ್ಕಾರ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ