
ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯು ಪ್ರತಿವರ್ಷದಂತೆ ಈ ವರ್ಷವೂ ನವೆಂಬರ್ 1ರಂದು ಕರಾಳ ದಿನಾಚರಣೆ ಆಯೋಜಿಸಿತ್ತು. ಆದರೆ ಹೆಚ್ಚು ಜನರು ಸೇರಲಿಲ್ಲ. ಹೀಗಾಗಿ ಎಂಇಎಸ್ ಕಾರ್ಯಕ್ರಮ ಸಂಪೂರ್ಣ ವಿಫಲವಾಯಿತು. ಕರಾಳದಿನದ ಮೆರವಣಿಗೆಯಲ್ಲಿಯೂ ಹೆಚ್ಚು ಜನರು ಪಾಲ್ಗೊಳ್ಳಲಿಲ್ಲ. ನಗರದ ಯುವಸಮೂಹವಂತೂ ಕಾರ್ಯಕ್ರಮದಿಂದ ಸಂಪೂರ್ಣ ದೂರ ಸರಿದಿದ್ದು ಎದ್ದು ಕಂಡಿತ್ತು. ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಎಂಇಎಸ್ ಆಹ್ವಾನಿಸಿತ್ತು. ಆದರೆ ಮಹಾರಾಷ್ಟ್ರ ನಾಯಕರನ್ನು ಕರ್ನಾಟಕದ ಗಡಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಬಹುತೇಕರನ್ನು ಗಡಿಯಲ್ಲಿಯೇ ತಡೆದು ವಾಪಸ್ ಕಳಿಸಲಾಯಿತು.
ಶಿವಸೇನೆಯ ಕೊಲ್ಲಾಪುರ ಘಟಕದ ಅಧ್ಯಕ್ಷ ವಿಜಯ ದೇವಣೆ ಬೆಳಗಾವಿ ಪ್ರವೇಶಿಸಲು ಬಹುಕಾಲ ಕಾದು ನಿಂತರು. ಕುಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಕರ್ನಾಟಕ ಪ್ರವೇಶಿಸಿದ್ದ ಅವರು, ಶಿನೋಳ್ಳಿ ಮಾರ್ಗವಾಗಿ ಬೆಳಗಾವಿ ಪ್ರವೇಶಿಸಲು ಯತ್ನಿಸಿದರು. ಶಿನೋಳ್ಳಿ ಚೆಕ್ ಪೋಸ್ಟ್ ಬಳಿಯೂ ಪೊಲೀಸರು ಬಂದೋಬಸ್ತ್ ಬಿಗಿ ಮಾಡಿದ್ದರು.
ಗಡಿ ವಿವಾದದ ಅಂತಿಮ ವಿಚಾರಣೆ
ನವೆಂಬರ್ 23ರಂದು ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಅಂತಿಮ ವಿಚಾರಣೆ ನಡೆಯಲಿದೆ. ಇದೇ ವಿಷಯವನ್ನು ಕರಪತ್ರಗಳಲ್ಲಿ ಪ್ರಸ್ತಾಪಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯು ಸಾವಿರಾರು ಸಂಖ್ಯೆಯಲ್ಲಿ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಮರಾಠಿ ಭಾಷಿಕರಿಗೆ ಕರೆ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಎಂಇಎಸ್ ಪರ ಇರುವವರು ಈ ಅಂಶಗಳನ್ನೇ ಪ್ರಸ್ತಾಪಿಸಿ ಪೋಸ್ಟ್ಗಳನ್ನು ಹಾಕಿಕೊಂಡಿದ್ದರು. ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಇದನ್ನು ಲೆಕ್ಕಿಸದ ಎಂಇಎಸ್ ಸಂಭಾಜಿ ಉದ್ಯಾನದಿಂದ ಮರಾಠಾ ಮಂದಿರದವರೆಗೆ ಜಾಥಾ ನಡೆಸಲು ಮುಂದಾಗಿತ್ತು. ಆದರೆ ನಗರದ ಮರಾಠಿ ಭಾಷಿಕರು ಸೌಹಾರ್ದಕ್ಕೆ ಒತ್ತುಕೊಟ್ಟ ಹಿನ್ನೆಲೆಯಲ್ಲಿ ಈ ಪ್ರಯತ್ನವು ವಿಫಲವಾಯಿತು.
ಬಿಗಿ ಭದ್ರತೆ
ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಎಂಇಎಸ್ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದರು. ಬೆಳಗಾವಿ ನಗರದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಇದಕ್ಕಾಗಿ 3 ಡಿಸಿಪಿ, 12 ಎಸಿಪಿ, 52 ಇನ್ಸ್ಪೆಕ್ಟರ್, 2,500 ಕಾನ್ಸ್ಟೇಬಲ್, 9 ಸಿಎಆರ್ ತುಕಡಿ, 10 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿತ್ತು. 35 ವಿಡಿಯೊ ಕ್ಯಾಮೆರಾ, 8 ಡ್ರೋನ್, 300 ಸಿಸಿಕ್ಯಾಮೆರಾಗಳ ಕಣ್ಗಾವಲು ಇತ್ತು.