ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ; ಬಿಗಿ ಪೊಲೀಸ್ ಬಂದೋಬಸ್ತ್
ಒಂದೆಡೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸುತ್ತಿದೆ. ಈ ಎಲ್ಲ ನಿಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಕಲಬುರಗಿ: ಕನ್ನಡ ಮಾತನಾಡುವ ಪ್ರದೇಶಗಳು ಭೌಗೋಳಿಕವಾಗಿ ಒಂದುಗೂಡಿದ ಹೆಮ್ಮೆಯ ದಿನವಿಂದು. ನಾಡಿನ ಸಮಸ್ತ ಜನರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿದ್ದರೆ ಕಲಬುರಗಿಯಲ್ಲಿ ಪ್ರತ್ಯೇಕ ಕಲ್ಯಾಣ ರಾಜ್ಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲದೆ ಇಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ, ಇನ್ನೊಂದೆಡೆ ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜೋತ್ಸವ ದಿನದಂದೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದ್ದು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಿದ್ಧತೆ ನಡೆಸಿದೆ. ಇಂದು ಮುಂಜಾನೆ 7.30 ಕ್ಕೆ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡುವುದಾಗಿ ಸಮಿತಿ ಸದಸ್ಯರು ಹೇಳಿದ್ದರು. ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಧ್ವಜಾರೋಹಣ ಮಾಡಲು ಮುಂದಾಗಿದ್ದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಹಿನ್ನೆಲೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ ಸೇರಿ ನಗರದಲ್ಲಿ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಎಂಇಎಸ್‌ನಿಂದ ಕರಾಳ ದಿನಾಚರಣೆ
ಬೆಳಗಾವಿ: ಇಂದು ಬೆಳಗಾವಿಯಲ್ಲಿ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ನಡುವೆ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್‌ನಿಂದ ಕರಾಳ ದಿನಾಚರಣೆ ಆಚರಿಸುತ್ತಿದೆ. ನವೆಂಬರ್ 23ರಂದು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಅಂತಿಮ ವಿಚಾರಣೆ ನಡೆಯಲಿದೆ. ಇದೇ ವಿಚಾರ ಪ್ರಸ್ತಾಪಿಸಿ ಸಹಸ್ರಾರು ಸಂಖ್ಯೆಯಲ್ಲಿ ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವಂತೆ ಎಂಇಎಸ್ ಕರೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಪುಂಡರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆಗಳ ಆಗ್ರಹಿಸಿದೆ. ಆದರೂ ಇಂದು ಬೃಹತ್ ರ್ಯಾಲಿ ನಡೆಸಲು ಎಂಇಎಸ್ ತೀರ್ಮಾನ ಮಾಡಿಕೊಂಡಿದೆ. ಸಂಭಾಜಿ ಉದ್ಯಾನದಿಂದ ಮರಾಠಾ ಮಂದಿರವರೆಗೆ ರ್ಯಾಲಿ ನಡೆಸಿ ಬಳಿಕ ಮರಾಠಾ ಮಂದಿರದಲ್ಲಿ ಸಭೆ ಸೇರಿ ಕರಾಳ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ.
ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್
ಕರಾಳ ದಿನಾಚರಣೆ ಹಿನ್ನೆಲೆ ಬೆಳಗಾವಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಮೂವರು ಡಿಸಿಪಿ, 12 ಎಸಿಪಿ, 52 ಇನ್ಸ್‌ಪೆಕ್ಟರ್, 2500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ 9 ಸಿಎಆರ್ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ, 500 ಗೃಹರಕ್ಷಕ ದಳ ಸಿಬ್ಬಂದಿಯಿಂದ ಭದ್ರತೆಗಾಗಿ ನಿಯೋಜಿಸಲಾಗಿದೆ. 35 ವಿಡಿಯೋ ಕ್ಯಾಮರಾ, 300 ಸಿಸಿ ಕ್ಯಾಮರಾ, 8 ಡ್ರೋನ್ ಕ್ಯಾಮರಾ ಕಣ್ಗಾವಲಿಗೆ ಇರಿಸಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 am, Tue, 1 November 22