Belagavi: ಕುಂದಾನಗರಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ; ಚುನಾವಣೆಗೂ ಮುನ್ನವೇ ಬೆಳಗಾವಿಯಲ್ಲಿ ಜೋರಾಯ್ತು ಓಲೈಕೆ ರಾಜಕಾರಣ

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ಕುಂದಾನಗರಿಯಲ್ಲಿ ಮತದಾರರ ಓಲೈಕೆಗೆ ಕಸರತ್ತು ಜೋರಾಗಿ ನಡೆದಿದೆ. ಶಾಸಕರು, ಟಿಕೆಟ್‌ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ವಿವಿಧ ಕಾರ್ಯಕ್ರಮ ಆಯೋಜಿಸಿ ವಿವಿಧ ಬಗೆಯ ಗಿಫ್ಟ್‌ಗಳನ್ನು ಹಂಚುತ್ತಿದ್ದಾರೆ.

Belagavi: ಕುಂದಾನಗರಿಯಲ್ಲಿ ಗಿಫ್ಟ್ ಪಾಲಿಟಿಕ್ಸ್ ; ಚುನಾವಣೆಗೂ ಮುನ್ನವೇ ಬೆಳಗಾವಿಯಲ್ಲಿ ಜೋರಾಯ್ತು ಓಲೈಕೆ ರಾಜಕಾರಣ
ಬೆಳಗಾವಿ ಗಿಫ್ಟ್ ಪಾಲಿಟಿಕ್ಸ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 26, 2022 | 9:25 AM

ಬೆಳಗಾವಿ: ಕುಂದಾನಗರಿ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ, ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ ಜಿಲ್ಲೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಐದು ತಿಂಗಳು ಬಾಕಿ ಇದೆ. ಅದಾಗಲೇ ಎಲ್ಲ ಪಕ್ಷಗಳ ಹಾಲಿ ಶಾಸಕರು, ಟಿಕೆಟ್‌ ಆಕಾಂಕ್ಷಿಗಳು ಚುನಾವಣೆ ಅಖಾಡಕ್ಕೆ ಧುಮಕಿದ್ದಾರೆ. ಮತದಾರರ ಓಲೈಕೆಗೆ ಕಾಂಗ್ರೆಸ್‌, ಬಿಜೆಪಿಯ ನಾಯಕರು ಹಠಕ್ಕೆ ಬಿದ್ದಂತೆ ನಾನಾ ತಹರದ ಗಿಫ್ಟ್‌ಗಳನ್ನು ಹಂಚುತ್ತಿದ್ದಾರೆ. ಕಾಂಗ್ರೆಸ್‌ ಶಾಸಕಿಯರಾದ ಅಂಜಲಿ ನಿಂಬಾಳ್ಕರ್‌, ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಕ್ಷೇತ್ರದಲ್ಲಿ ಅರಿಶಿಣ-ಕುಂಕುಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮಹಿಳೆಯರನ್ನು ಆಹ್ವಾನಿಸಿ ಅರಿಶಿಣ-ಕುಂಕುಮ ಜೊತೆಗೆ ಟಿಫನ್‌ ಬಾಕ್ಸ್‌ಗಳನ್ನು ಹಂಚುತ್ತಿದ್ದಾರೆ. ಆ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಆಯೋಜಿಸಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಟಿಫನ್ ಬಾಕ್ಸ್‌ಗಾಗಿ ಮಹಿಳೆಯರು ಮುಗಿಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇತ್ತ ಖಾನಾಪುರ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಡಾ. ಸೋನಾಲಿ ಸರ್ನೋಬತ್ ಕನ್ನಡಕ ವಿತರಣೆ ಮಾಡಿದ್ದರು. ಎ.ದಿಲೀಪ್‌ಕುಮಾರ್‌ ಸೀರೆ, ಅರಿಶಿಣ-ಕುಂಕುಮ ಇರುವ ಕಿಟ್‌ಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಸದಸ್ಯೆ ಆಯಿಶಾ ಸನದಿ ನಾವು ಅಧಿಕಾರದಲ್ಲಿ ಇಲ್ಲದಿದ್ದರು ಬಡ ಮಕ್ಕಳಿಗೆ, ಜನರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಪುಸ್ತಕ, ಸೀರೆಗಳನ್ನ ಹಂಚಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಸಮರ್ಥಿಸಿಕೊಂಡರು.

ಇನ್ನು ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿಶ್ವಾಸ ವೈದ್ಯ ಕೂಡ ತಮ್ಮ ಕ್ಷೇತ್ರದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ವಧುವಿಗೆ ಬೇಕಾದ ತಿಜೋರಿ, ಪಾತ್ರೆ ಸೇರಿ ಗೃಹಬಳಕೆಯ ವಸ್ತುಗಳ ಕಿಟ್‌ ಗಿಫ್ಟ್ ನೀಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ವಿಶ್ವಾಸ ವೈದ್ಯ, ಈ ಸಲ ಶತಾಯಗತಾಯವಾಗಿ ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ. ಇತ್ತ ಬಿಜೆಪಿ ಶಾಸಕರಾದ ಅಭಯ್‌ ಪಾಟೀಲ್ ಹಾಗೂ ಅನಿಲ್‌ ಬೆನಕೆ ಕೂಡ ಯುವ ಸಮೂಹ ಹಾಗೂ ಅವರ ಪೋಷಕರನ್ನೇ ಟಾರ್ಗೆಟ್‌ ಮಾಡಿದ್ದು, ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅನುಕೂಲವಾಗುವ ಪುಸ್ತಕಗಳನ್ನು ಸಿದ್ಧಪಡಿಸಿ ನಗರದ ಎಲ್ಲ ಪಿಯು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದಾರೆ.

ಮತದಾರರನ್ನು ಸೆಳೆಯಲು ಗಿಪ್ಟ್ ಹಂಚುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ್‌ ಪಾಟೀಲ್, ಗ್ರಾಮೀಣ ಭಾಗದಲ್ಲಿ ಮತದಾರರ ಓಲೈಕೆಗೆ ಟಿಫನ್ ಬಾಕ್ಸ್ ಹಂಚುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಕಾಂಗ್ರೆಸ್‌ ಶಾಸಕರು ನೀಡುವ ಟಿಫನ್‌ ಬಾಕ್ಸ್​ಗಳನ್ನು ಬಿಜೆಪಿಯವರು ತಗೆದುಕೊಳ್ಳುವುದಿಲ್ಲ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಆಗಬೇಕು, ಮತವನ್ನು ಯಾರೂ ಮಾರಾಟ ಮಾಡಬಾರದು. ಇನ್ನು ಬಿಜೆಪಿ ಶಾಸಕರ ಪುಸ್ತಕ ಹಂಚಿಕೆಯನ್ನು ಸಮರ್ಥಿಸಿಕೊಂಡಿರುವ ಸಂಜಯ್‌ ಪಾಟೀಲ್ ‘ನಾವೇನು ಸರಾಯಿ ಹಂಚುತ್ತಿಲ್ಲವಲ್ಲ ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ ಮಾಡುತ್ತಿದ್ದೇವೆ. ಅದು ಬಡವರ ಮಕ್ಕಳ ಕಲಿಕೆಗೆ ಪುಸ್ತಕ ಅನುಕೂಲ ಆಗಲಿದೆ’ ಎಂದು ಹೇಳಿದ್ದಾರೆ. ಜೊತೆಗೆ ಖಾನಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೋನಾಲಿ ಸೋರ್ನಬತ್ ಅಭಿವೃದ್ದಿ ಹೇಳಿಕೊಂಡು ಜನರ ಬಳಿ ಹೋಗಲಿ ಅದನ್ನು ಬಿಟ್ಟು ಈ ರೀತಿ ಆಮಿಷ ಒಡ್ಡಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನಿಗೆ ಚಾಕು ಇರಿತ!

ಚುನಾವಣೆ ಘೋಷಣೆಗೂ ಮುನ್ನವೇ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಇತ್ತ ಅನೇಕ ಜನರು ರಾಜಕೀಯ ನಾಯಕರು ಕೊಡುವ ಗಿಫ್ಟ್‌ಗಳನ್ನು ಪಡೆಯುತ್ತಿದ್ದಾರೆ. ಮತದಾರರ ಓಲೈಕೆಗಾಗಿ ಸರ್ಕಸ್ ಮಾಡುತ್ತಿರುವ ರಾಜಕೀಯ ನಾಯಕರಿಗೆ ಚುನಾವಣೆ ವೇಳೆ ಮತದಾರರು ಯಾವ ಸಂದೇಶ ರವಾನಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Sat, 26 November 22