ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ವಾಗ್ದಾಳಿ

|

Updated on: Mar 02, 2023 | 8:20 AM

ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ವಾಗ್ದಾಳಿ
ಸಿದ್ದರಾಮಯ್ಯ
Follow us on

ಬೆಳಗಾವಿ: ಕರ್ನಾಟಕ ವಿಧಾನ ಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿವೆ. ಪ್ರಜಾಧ್ವನಿ, ವಿಜಯ ಸಂಕಲ್ಪ, ಪಂಚರತ್ನ ರಥಯಾತ್ರೆಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ನೀಡಿದ ಹೇಳಿಕೆಯೊಂದು ಭಾರೀ ವೈರಲ್ ಆಗಿದ್ದು ಈ ಬಗ್ಗೆ ಬಿಜೆಪಿ ಆಕ್ರೋಶ ಹೊರ ಹಾಕಿದೆ.

ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು, ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರುವ ಮದುಮಗನ ಥರ ಆಗಿದೆ ಎಂದು ಟಾಂಗ್ ಕೊಟ್ಟಿದೆ.

ಇದನ್ನೂ ಓದಿ: BBMP Budget 2023: ಇಂದು ಬಿಬಿಎಂಪಿ ಬಜೆಟ್ ಮಂಡನೆ, ಜನಪರ ಯೋಜನೆಗಳಿಗೆ ಆಧ್ಯತೆ

ಮಾರ್ಚ್ 01ರಂದು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬರುವ ಬಗ್ಗೆ ಸಿದ್ದರಾಮಯ್ಯ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಟ್ವೀಟ್ ಮಾಡಿದ ವಿಡಿಯೂದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿದಂತೆ ಇತರರಿದ್ದಾರೆ.

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂದುಕೊಂಡು ಅಖಾಡಕ್ಕಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿಧಾನಸಭಾ ಕ್ಷೇತ್ರವಾರು ಬಸ್ ಯಾತ್ರೆ ಮಾಡುತ್ತಿದ್ದಾರೆ. ‌ಬೆಳಗಾವಿಯಿಂದಲೇ ಈ ಪ್ರಜಾಧ್ವನಿ ಯಾತ್ರೆ ಅಂತಾ ಹೆಸರಿಟ್ಟು ಚಾಲನೆ ನೀಡಿದ್ದ ಯಾತ್ರೆ ಇದೀಗ ಎರಡನೇ ಸುತ್ತು ಬೆಳಗಾವಿ ಪ್ರವೇಶ ಮಾಡಿದೆ.‌ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಮತದಾರರ ಸೆಳೆಯಲು ಅಬ್ಬರ ಭಾಷಣ ಮಾಡುತ್ತಿದ್ದಾರೆ.

ಮಾರ್ಚ್ 01ರಂದು ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ಕ್ಷೇತ್ರ, ಖಾನಾಪುರ ಕ್ಷೇತ್ರ, ಕಿತ್ತೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೆಳಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದರು. ಬಳಿಕ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಪರ ಮತಬೇಟೆ ನಡೆಸಿದರು. ಇದಾದ ಬಳಿಕ ರಾತ್ರಿ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರವನ್ನ ಮಾಡಿದರು. ಇನ್ನೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ತುಟಿ ಬಿಚ್ಚಿದ ಹೆಬ್ಬಾಳ್ಕರ್ ಮಾಜಿ ಸಚಿವ ರಮೇಶ್ ವಿರುದ್ಧ ಹಿಗ್ಗಾಮಗ್ಗಾ ವಾಗ್ದಾಳಿ ನಡೆಸಿದರು. ಜತೆಗೆ ಪ್ರಜಾಧ್ವನಿ ಯಾತ್ರೆ ಮೂಲಕ ಹೆಬ್ಬಾಳ್ಕರ್ ಜನಶಕ್ತಿ ಪ್ರದರ್ಶನ ಮಾಡಿದ್ರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:17 am, Thu, 2 March 23