Gokak Businessman murder case: ಘಟಪ್ರಭಾ ಎಡದಂಡೆ ಕಾಲುವೆ ಬಳಿ ಉದ್ಯಮಿ ಶವ ಪತ್ತೆ; ಇಲ್ಲಿದೆ ವೈದ್ಯನ ಖತರ್ನಾಕ್​ ಪ್ಲಾನ್​

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯ ಕೊಲೆ ಮಾಡಿರುವ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ದಿನಗಳ ಬಳಿಕ ಜಿಲ್ಲೆಯ ಗೋಕಾಕ್ ತಾಲೂಕಿನ ಪಂಚನಾಯಕನಹಟ್ಟಿ ಗ್ರಾಮದ, ಪಂಚನಾಯಕನಹಟ್ಟಿ ಬಳಿಯ ಕಾಲುವೆಯಲ್ಲಿ ಉದ್ಯಮಿ ರಾಜು ಝಂವರ್ ಶವ ಪತ್ತೆಯಾಗಿದೆ.

Gokak Businessman murder case: ಘಟಪ್ರಭಾ ಎಡದಂಡೆ ಕಾಲುವೆ ಬಳಿ ಉದ್ಯಮಿ ಶವ ಪತ್ತೆ; ಇಲ್ಲಿದೆ ವೈದ್ಯನ ಖತರ್ನಾಕ್​ ಪ್ಲಾನ್​
ಉದ್ಯಮಿ ರಾಜು ಝಂವರ್
Updated By: ವಿವೇಕ ಬಿರಾದಾರ

Updated on: Feb 17, 2023 | 8:05 AM

ಬೆಳಗಾವಿ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯ ಕೊಲೆ ಮಾಡಿರುವ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ದಿನಗಳ ಬಳಿಕ ಜಿಲ್ಲೆಯ ಗೋಕಾಕ್ ತಾಲೂಕಿನ ಪಂಚನಾಯಕನಹಟ್ಟಿ ಗ್ರಾಮದ, ಪಂಚನಾಯಕನಹಟ್ಟಿ ಬಳಿಯ ಕಾಲುವೆಯಲ್ಲಿ ಉದ್ಯಮಿ ರಾಜು ಝಂವರ್ ಶವ ಪತ್ತೆಯಾಗಿದೆ.

ಪ್ರಕರಣದ ಹಿನ್ನೆಲೆ

ಗೋಕಾಕ್ ನಗರದಲ್ಲಿ ಎಫ್​.ಎಮ್​.ಸಿ.ಜಿ ವೋಲ್ ಸೇಲ್ ಡಿಸ್ಟ್ರಿಬ್ಯುಟರ್ ಆಗಿ ರಾಜು ಝಂವರ್ ಉದ್ಯಮ ನಡೆಸುತ್ತಿದ್ದರು. ಫೆಬ್ರವರಿ 10ರ ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಇರುವ ಸ್ನೇಹಿತ, ವೈದ್ಯನನ್ನು ಭೇಟಿಯಾಗಿ ಬರುತ್ತೇನೆ ಎಂದು ಮನೆಯಿಂದ ದ್ವಿಚಕ್ರವಾಹನದಲ್ಲಿ ಉದ್ಯಮಿ ರಾಜು ಝಂವರ್ ತೆರಳಿದ್ದರು. ಆದರೆ ಮಧ್ಯರಾತ್ರಿಯಾದರೂ ರಾಜು ಝಂವರ್ ವಾಪಸ್ ಬರದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದರು. ನಾಪತ್ತೆಯಾಗಿದ್ದ ರಾಜು ಝಂವರ್​ರವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ರಾತ್ರಿಯೀಡಿ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಮಾರನೇ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಗೋಕಾಕ್​ ಶಹರ ಠಾಣೆಯಲಿ ನಾಪತ್ತೆ ಪ್ರಕರಣ ದಾಖಲಿಸಿದರು. ಪ್ರಕರಣದ ಪತ್ತೆಗೆ ಗೋಕಾಕ್ ಡಿವೈಎಸ್​ಪಿ ನೇತೃತ್ವದಲ್ಲಿ ತಂಡವನ್ನು ರಚಿಸಿ, ಬಳಿಕ ಉದ್ಯಮಿ ರಾಜು ಝಂವರ್‌ಗೆ ಯಾರ್ಯಾರು ಕರೆ ಮಾಡಿದ್ದಾರೆ, ಯಾರು ಕೊನೆಯ ಬಾರಿ ಮಾತನಾಡಿದ್ದಾರೆ ಎಂದು ಪರಿಶೀಲನೆ ನಡೆಸಿದ್ದರು‌. ಹೀಗೆ ಕಾಲ್ ಡಿಟೈಲ್ ತೆಗೆಸಿ ನಂತರ ಎಲ್ಲರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಸಹ ನಡೆಸಿದ್ದರು. ಈ ಸಂದರ್ಭದಲ್ಲಿ ವೈದ್ಯರನ್ನು ಸೇರಿ ಸಾಕಷ್ಟು ಜನ ತಮಗೆ ಗೊತ್ತೇ ಇಲ್ಲ ಅಂತ ಹೇಳಿ ವಾಪಾಸ್ ಆಗಿದ್ದರು.

ಇದಾದ ಬಳಿಕ ಗೋಕಾಕ್ ನಗರದಲ್ಲಿರುವ ಸಿಟಿ ಆಸ್ಪತ್ರೆ ಬಳಿ ರಾಜು ಅವರ ಬೈಕ್ ಇದೆ ಅನ್ನೋದು ಗೊತ್ತಾಗಿದೆ. ಕೂಡಲೇ ಅದನ್ನ ಪರಿಶೀಲನೆ ಮಾಡಿಸಿ ಸಿಸಿಟಿವಿ ದೃಶ್ಯ ನೋಡಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯ ಡಾ.ಸಚಿನ್ ಶಿರಗಾವಿ ಮೇಲೆ ಬಲವಾದ ಅನುಮಾನ ಬಂದಿತ್ತು. ನಾಪತ್ತೆಯಾದ ಉದ್ಯಮಿ ರಾಜು ಝಂವರ ಹಾಗೂ ವೈದ್ಯ ಡಾ.ಸಚಿನ್ ಶಿರಗಾವಿ ಮಧ್ಯೆ ಹಣಕಾಸು ವ್ಯವಹಾರ ಇದ್ದಿದ್ದು ಗೊತ್ತಾಗಿದೆ. ಅದೇ ರೀತಿ ಡಾ.ಸಚಿನ್ ಶಿರಗಾವಿಗೂ ಸಹ ಹಣಕಾಸಿನ ನೆರವು ನೀಡಿದ್ದು ತಿಳಿದು. ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಸತ್ಯ ಬಾಯಿಬಿಟ್ಟಿದ್ದು, 3 ದುಷ್ಕರ್ಮಿಗಳಿಗೆ 50 ಸಾವಿರ ರೂಪಾಯಿ ಹಣ ನೀಡಿ ಅವರ ಸಹಾಯದಿಂದ ರಾಜು ಝಂವರ್ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಂದ: ಕೊಲೆ ಆರೋಪಿ ಈಗ ಪೊಲೀಸರ ಅತಿಥಿ

ಉದ್ಯಮಿ ಹತ್ಯೆಗೆ ಡಾಕ್ಟರ್​ ಮಾಡಿದ್ದ ಖತರ್ನಾಕ್​ ಪ್ಲಾನ್​

ಡಾ.ಸಚಿನ್ ಶಿರಗಾವಿ ಉದ್ಯಮಿ ರಾಜು ಝಂವರ್ ಬಳಿ ಸಾಲ ಪಡೆದಿದ್ದನಂತೆ. ಸುಮಾರು ಐವತ್ತರಿಂದ ಅರವತ್ತು ಸಾವಿರ ರೂಪಾಯಿಯಷ್ಟು ಹಣ ನೀಡಬೇಕಿತ್ತಂತೆ‌. ಇದಕ್ಕಾಗಿ ಹಣ ನೀಡುತ್ತೇನೆ ಬಾ ಎಂದು ವೈದ್ಯ ಸಚಿನ್ ಸಿಟಿ ಆಸ್ಪತ್ರೆ ಬಳಿ ರಾಜುನನ್ನ ಕರೆಯಿಸಿಕೊಂಡಿದ್ದಾನೆ. ಆಗ ತನ್ನ ಸಿಟಿ ಆಸ್ಪತ್ರೆಗೆ ಉದ್ಯಮಿ ರಾಜು ಝಂವರ್‌ನ ಕರೆಸಿಕೊಂಡಿದ್ದ ಡಾ.ಸಚಿನ್ ಶಿರಗಾವಿ ಆಮ್ಲೆಟ್ ತಿಂದು ಬರೋಣ ಬಾ ಅಂತ ಹೇಳಿ, ಯೋಗಿಕೊಳ್ಳ ಮಾರ್ಗದ ಬಳಿ ಮಾರ್ಕಂಡೇಯ ನದಿ ದಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಯೋಗಿಕೊಳ್ಳ ಹೋಗುವ ಮಾರ್ಗ ನಿರ್ಜನ ಪ್ರದೇಶವಾಗಿದ್ದು, ರಾತ್ರಿ ವೇಳೆ ಜನಸಂಚಾರ ಸಹ ಇರಲ್ಲ. ಇದನ್ನೇ ಲಾಭವಾಗಿಸಿಕೊಂಡ ಡಾ.ಸಚಿನ್ ಶಿರಗಾವಿ ಮೊದಲೇ ಪ್ಲ್ಯಾನ್ ಮಾಡಿದಂತೆ ಗೋಕಾಕ್ ನಿವಾಸಿಗಳಾದ ಶಫತ್ ಇರ್ಷಾದ್ ಅಹ್ಮದ್ ತಾಸ್ಗಾರ್, ಮೋಹಿನ್ ಪಟೇಲ್, ಅಬುತಾಲಾ ಮುಲ್ಲಾಗೆ ಐವತ್ತು ಸಾವಿರ ಹಣ ನೀಡಿ ಯೋಗಿಕೊಳ್ಳ ಮಾರ್ಗದ ಬಳಿ ಗುಡ್ಡದಲ್ಲಿ ಅಡಗಿ ಕುಳಿತುಕೊಳ್ಳುವಂತೆ ತಿಳಿಸಿದ್ದನಂತೆ.

ಇದನ್ನೂ ಓದಿ: ಅನುಮಾನದ ರೋಗಕ್ಕೆ ಬಲಿ! ಹಿಂದಿ ಶಿಕ್ಷಕಿಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿದ ದೈಹಿಕ ಶಿಕ್ಷಕ ಗಂಡ

ಈ ಮೂವರು ದುಷ್ಕರ್ಮಿಗಳು ಯೋಗಿಕೊಳ್ಳ ಮಾರ್ಗದಲ್ಲಿ ಇರುವ ಬೆಟ್ಟದಲ್ಲಿ ಅಡಗಿ ಕುಳಿತಿದ್ದರು. ಡಾ.ಸಚಿನ್ ಶಿರಗಾವಿ ಹಾಗೂ ಉದ್ಯಮಿ ರಾಜು ಝಂವರ್ ಬಂದ ಮೇಲೆ ಇಬ್ಬರು ಮಾತಿಗಿಳಿದಿದ್ದಾರೆ. ಹಣಕಾಸು ವಿಚಾರವಾಗಿ ಇಬ್ಬರ ಮಧ್ಯೆ ಮತ್ತೆ ಗಲಾಟೆ ಶುರುವಾಗಿದೆ. ಆಗ ಇನ್ನುಳಿದ ಮೂವರು ಯುವಕರು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ವೈದ್ಯ ತನ್ನ ಲೈಸೆನ್ಸ್ ರಿವಾಲ್ವರ್‌ನಿಂದ ಫೈರ್ ಮಾಡಲು ಯತ್ನಿಸಿದ್ದಾನೆ. ಆದರೆ ಅದು ಫೈಯರ್ ಆಗಿಲ್ಲ. ಹೀಗೆ ಉದ್ಯಮಿ ರಾಜು ಝಂವರ್ ಹತ್ಯೆ ಮಾಡಿದ ಬಳಿಕ ಶವವನ್ನು ಡಾ.ಸಚಿನ್ ಶಿರಗಾವಿ ಆಸ್ಪತ್ರೆಯಿಂದ ತಂದಿದ್ದ ಡೆಡ್ ಬಾಡಿ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಕಾರಿನಲ್ಲಿ ತಗೆದುಕೊಂಡು ಹೋಗಿದ್ದಾರೆ. ಬಳಿಕ ಮಧ್ಯರಾತ್ರಿ 2 ರಿಂದ 3 ಗಂಟೆಯ ಮಧ್ಯೆ ಕೊಳವಿ ಗ್ರಾಮದ ಬಳಿ ಘಟಪ್ರಭಾ ಎಡದಂಡೆ ಕಾಲುವೆಗೆ ಶವವನ್ನ ಎಸೆದು ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಡಾ.ಸಚಿನ್ ಶಿರಗಾವಿ ಒಪ್ಪಿಕೊಂಡಿದ್ದಾನೆ.

ಉದ್ಯಮಿ ಶವ ಪತ್ತೆ

ಇನ್ನು ಉದ್ಯಮಿ ರಾಜು ಝಂವರ್ ಹತ್ಯೆಯಾಗಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು, ಸ್ನೇಹಿತರು ಕಾಲುವೆ ಬಳಿ ಆಗಮಿಸಿ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳೀಯ ಈಜುಗಾರರ ಜೊತೆ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಶೋಧಕಾರ್ಯ ಆರಂಭಿಸಿದ್ದಾರೆ. ಹಿಡಕಲ್ ಡ್ಯಾಂನಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡುವುದ‌ನ್ನು ನಿಲ್ಲಿಸಿ ಶೋಧಕಾರ್ಯ ನಡೆಸಿದ್ದಾರೆ. ಘಟಪ್ರಭಾ ಎಡದಂಡೆ ಕಾಲುವೆ ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಯಾವುದಾದರೂ ಮೃತದೇಹ ಪತ್ತೆಯಾದರೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಕಳೆದ 6 ದಿನಗಳಿಂದ ಶವಕ್ಕಾಗಿ ಶೋಧಕಾರ್ಯ ನಡೆಸಿದ ಬಳಿಕ ಇಂದು (ಫೆ.17) ಶವ ಪತ್ತೆಯಾಗಿದೆ.

ಇನ್ನು ಫೆ.14 ರಂದು ಆರೋಪಿ ವೈದ್ಯ ಸಚಿನ್​ನನ್ನ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದವರನ್ನ ಕಳೆದುಕೊಂಡು ಇಡೀ ಕುಟುಂಬ ಇದೀಗ ಕಣ್ಣೀರಿಡ್ತಿದ್ದು ಜೀವ ಉಳಿಸಬೇಕಿದ್ದ ವೈದ್ಯನಿಗೆ ಈ ರೀತಿ ಮಾಡಿದ್ದು ಆತನಿಗೆ ತಕ್ಕ ಶಿಕ್ಷೆ ಕೊಡಿಸಿ ನಮಗೆ ನ್ಯಾಯ ಕೊಡಿ ಅಂತ ಕೇಳಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 am, Fri, 17 February 23