ಚಿಕ್ಕೋಡಿ, ಜುಲೈ 17: ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ (Kamakumara Nandi Maharaj) ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮಗ ಹಸನ್ನ ಕೃತ್ಯ ನೆನೆದು ತಂದೆ ಮಕ್ಬೂಲ್ ದಲಾಯತ್ ಭಾವುಕರಾಗಿದ್ದಾರೆ. ಮಗ ಹಸನಸಾಬ್ ಭೇಟಿಗಾಗಿ ಚಿಕ್ಕೋಡಿ ಡಿವೈಎಸ್‌ಪಿ ಕಚೇರಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಭಾವುಕರಾದರು.
ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮತ್ತು ಎರಡನೇ ಆರೋಪಿ ಹಸನಸಾಬ್ ದಲಾಯತ್ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಬ್ಬರನ್ನು ಬೆಳಗಾವಿ ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಮಗ ಹಸನ್ ಭೇಟಿಗೆ ಬಂದಿದ್ದೇನೆ ಎಂದ ತಂದೆ ಮಕ್ಬೂಲ್ ಹೇಳಿದ್ದಾರೆ. ನಾನು ಬೇರೆಯವರ ಗದ್ದೆಯಲ್ಲಿ ಕಸ ತಗೆದು ಜೀವನ ಮಾಡುತ್ತೇನೆ. ಮಗ ಹೀಗೆ ಮಾಡಿದರೆ ಏನ್ ಮಾಡುವುದು ಹೇಳಿ, ದುಡಿದು ತಿನ್ನೋ ಮನುಷ್ಯ ನಾನು ಎಂದು ಭಾವುಕರಾದರು.
ಇವನ ಸಹವಾಸ ಬೇಡ ಅಂತಾ ಬೇರೆ ಮನೆ ಮಾಡಿಕೊಂಡು ವಾಸವಿದ್ದೆ ಎಂದು ಹೇಳಿದ ಮಕ್ಬೂಲ್, ನಾರಾಯಣ ಮಾಳಿ ಜೊತೆ ಹಸನ್ಗೆ ಮೂರ್ನಾಲ್ಕು ವರ್ಷದ ಗೆಳೆತನವಿತ್ತು. ಹೊಲಕ್ಕೆ ಕೀಟನಾಶಕ ಸಿಂಪಡನೆ ಮಾಡಲು ಹೋಗುತ್ತಿದ್ದೇನೆ ಅಂತಾ ಅಂದು ರಾತ್ರಿ ಹೋಗಿದ್ದ. ಈ ವೇಳೆ ಅವರು ಪಗಾರ್ (ವೇತನ) ಕೊಡಲ್ಲ ಹೋಗಬೇಡ ಅಂತಾ ಹಸನ್ ಪತ್ನಿ ಹೇಳಿದ್ದಳು. ಆದರೆ ಈಕೆಯ ಮಾತನ್ನೂ ಲೆಕ್ಕಿಸದೆ ಹೋಗಿದ್ದ. ಮನೆಗೆ ವಾಪಸ್ ಬಂದಾಗಲೂ ನಮಗೆ ಏನೂ ಹೇಳಿರಲಿಲ್ಲ. ರಾತ್ರಿ 10 ಗಂಟೆಗೆ ಪೊಲೀಸರು ಬಂದಾಗ ವಿಚಾರ ಗೊತ್ತಾಯಿತು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Mon, 17 July 23