ಚಿಕ್ಕೋಡಿ, ಅಕ್ಟೋಬರ್ 26: ಲೋಕಸಭೆ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆಯೇ ಹಲವೆಡೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಂತೂ (Chikkodi) ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ (Laxman Savadi) ಮಧ್ಯೆ ಹಣಾಹಣಿಗೆ ಈಗಲೇ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ಅಭ್ಯರ್ಥಿಯಾಗಿ ಯಾರನ್ನೇ ಕಣಕ್ಕಿಳಿಸಿದರೂ ಸವದಿ, ಜಾರಕಿಹೊಳಿ ಮಧ್ಯೆ ಹಣಾಹಣಿ ಸ್ಪಷ್ಟ ಎಂಬ ಸಂದೇಶ ಈಗಲೇ ರವಾನೆಯಾಗಿದೆ. ಅದಕ್ಕೆ ಪೂರಕವಾಗಿ ಸವದಿ ಕ್ಷೇತ್ರದಲ್ಲಿ ಈಗಾಗಲೇ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆಯ ಮುಖಭಂಗಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಗೋಕಾಕ್ ಸಾಹುಕಾರ್ ತಯಾರಿ ಆರಂಭಿಸಿದ್ದಾರೆ. ಅಥಣಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಲು ರಮೇಶ್ ಜಾರಕಿಹೊಳಿ ತಯಾರಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಬೃಹತ್ ಸಮಾವೇಶ ನಡೆಸಲು ರಮೇಶ್ ಜಾರಕಿಹೊಳಿ ಸಿದ್ಧತೆ ಮಾಡುತ್ತಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಲಕ್ಷ್ಮಣ್ ಸವದಿ ವಿಧಾನಸಭಾ ಕ್ಷೇತ್ರ ಅಥಣಿಯನ್ನೂ ಒಳಗೊಂಡಿದೆ. ಅಲ್ಲಿ ಬಿಜೆಪಿ ಸಮಾವೇಶಕ್ಕೂ ಮೊದಲು ಹಂತ ಹಂತವಾಗಿ ಹೋರಾಟಕ್ಕೆ ರಮೇಶ್ ಜಾರಕಿಹೊಳಿ ತಂತ್ರ ಹೂಡಿದ್ದಾರೆ.
ಈ ಮಧ್ಯೆ, ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಲಕ್ಷ್ಮಣ್ ಸವರಿ ಪುನಃ ಚಾಲನೆ ನೀಡುತ್ತಿರುವ ಆರೋಪ ವ್ಯಕ್ತವಾಗಿದೆ. ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಬಿಜೆಪಿ ಅವಧಿಯ ಯೋಜನೆಗಳಿಗೆ ಚಾಲನೆ ನೀಡಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ರಮೇಶ್ ಜಾರಕಿಹೊಳಿ ಆಪ್ತ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮತ್ತೊಂದೆಡೆ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿಸಲು ಲಕ್ಷ್ಮಣ್ ಸವದಿ ಸಹ ತೆರೆಮರೆಯ ತಯಾರಿ ನಡೆಸಿದ್ದಾರೆ. ಸದ್ಯ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಬಹುತೇಕ ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಫಿಕ್ಸ್ ಎನ್ನಲಾಗುತ್ತಿದೆ. ಅಣ್ಣಾಸಾಹೇಬ್ ಜೊಲ್ಲೆಗೆ ಬಿಜೆಪಿ ಟಿಕೆಟ್ ನೀಡಿದ್ರೆ ಮಾಜಿ ಸಂಸದ ರಮೇಶ್ ಕತ್ತಿ ಅವರನ್ನ ಕಾಂಗ್ರೆಸ್‌ಗೆ ಸೆಳೆಯಲು ಸವದಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ಸವದಿ, ಕಾಲ ಪಕ್ವವಾಗಲಿ ಎಲ್ಲವೂ ಗೊತ್ತಾಗುತ್ತೆ ಎಂದಿದ್ದರು.
ಇದನ್ನೂ ಓದಿ: ಬೇರೆ ತಾಲೂಕಿನಿಂದ ಬಂದು ನಟಿಸುತ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ
ರಮೇಶ್ ಕತ್ತಿಗೆ ಬಿಜೆಪಿ ಟಿಕೆಟ್ ನೀಡದಿದ್ರೆ ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡೋ ಕೆಲಸ ಮಾಡ್ತೀನಿ ಎಂದು ಲಕ್ಷ್ಮಣ್ ಸವದಿ ಹೇಳಿದ್ದರು. ಇತ್ತೀಚೆಗೆ ‘ಟಿವಿ9’ ಜೊತೆ ಮಾತನಾಡುವ ವೇಳೆ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದರು.
ಒಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ಸವದಿ ವರ್ಸಸ್ ಜಾರಕಿಹೊಳಿ ಸಮರ ಫಿಕ್ಸ್ ಆದಂತಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ