
ಬೆಳಗಾವಿ: ದೇವಸ್ಥಾನದ (temple)ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ (Conflict)ಉಂಟಾಗಿದ್ದು, ಓರ್ವನ ಹತ್ಯೆ ಮಾಡಿರುವಂತಹ ಘಟನೆ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ. ಸತೀಶ್ ಪಾಟೀಲ್ ಗಲಾಟೆಯಲ್ಲಿ ಕೊಲೆಯಾದ ವ್ಯಕ್ತಿ. ದೇವಸ್ಥಾನ ಜಾಗ ವಿಚಾರದ ವ್ಯಾಜ್ಯ ಬಗೆ ಹರಿಸಲು ಸಭೆ ಸೇರಿದ್ದ ಎರಡು ಗುಂಪಿನ ಜನ. ಈ ವೇಳೆ ಗಲಾಟೆಯಾಗಿ ಕಲ್ಲುತೂರಾಟ ನಡೆಸಿ ಕೆಲ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಎರಡು ಕಾರು, ಒಂದು ವಾಟರ್ ಟ್ಯಾಂಕ್ ಲಾರಿ, ಒಂದು ಟ್ರಾಕ್ಟರ್ ಸುಟ್ಟು ಕರಕಲಾಗಿವೆ. ಇಷ್ಟಾದರೂ ಸುಮ್ಮನಾಗದೆ ಗೌಂಡವಾಡ ಗ್ರಾಮದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ. ಮತ್ತೆ ನಾಲ್ಕು ವಾಹನಗಳಿಗೆ ಕೊಲೆಯಾದ ಸತೀಶ್ ಪಾಟೀಲ್ ಕಡೆಯವರು ಬೆಂಕಿ ಇಟ್ಟಿದ್ದಾರೆ. ಗ್ರಾಮದಲ್ಲಿ ಎಂಟಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿದ್ದು, ಎರಡು ಹುಲ್ಲಿನ ಬಣವೆಗಳಿಗೂ ಬೆಂಕಿ ಹಚ್ಚಲಾಗಿದೆ. ಜೆಸಿಬಿಯಿದ ಹುಲ್ಲಿನ ಬಣವೆ ತೆರವುಗೊಳಿಸಲಾಗಿದ್ದು, ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಶ್ರೀಮಂತ ಯೂಟ್ಯೂಬರ್ಗಳು ಇವರೇ ನೋಡಿ
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮಕ್ಕೆ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪಾರ್ಕಿಂಗ್ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಸತೀಶ್ ಪಾಟೀಲ್ ಎಂಬಾತ ಕೊಲೆಯಾಗಿದ್ದಾನೆ. ಬಳಿಕ ಕೆಲವರು ವಾಹನಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಕೊಲೆ ಕೇಸ್ಗೆ ಸಂಬಂಧಿಸಿದಂತೆ ಏಳು ಜನರನ್ನ ವಶಕ್ಕೆ ಪಡೆದಿದ್ದೇವೆ. ವಾಹನಗಳಿಗೆ ಬೆಂಕಿ ಹಚ್ಚಿ ಗಲಾಟೆ ಹಿನ್ನೆಲೆ 15 ಜನರು ವಶಕ್ಕೆ ಪಡೆಯಲಾಗಿದೆ. ಇಡೀ ಗ್ರಾಮವನ್ನ ಕಂಟ್ರೋಲ್‌ಗೆ ತೆಗೆದುಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು. ಗ್ರಾಮವನ್ನ ಪೊಲೀಸರು ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ. ಗಲಾಟೆ ಸಂಬಂಧ 15ಕ್ಕೂ ಹೆಚ್ಚು ಯುವಕರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬರ್ತಿದ್ದಂತೆ ಗ್ರಾಮದ ಕೆಲ ಯುವಕರು ಊರು ಬಿಟ್ಟಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಮನೆ ಮೇಲೆಯೂ ಉದ್ರಿಕ್ತರು ಕಲ್ಲು ತೂರಾಟ ಮಾಡಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.
ಗೌಂಡವಾಡ ಗ್ರಾಮದಲ್ಲಿ ಬಂದೋಬಸ್ತ್
ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಎರಡು ಕೆಎಸ್ಆರ್ಪಿ ತುಕಡಿ, 4ಎಸಿಪಿ, 10ಕ್ಕೂ ಹೆಚ್ಚು ಪಿಐಗಳ ನಿಯೋಜನೆ ಮಾಡಲಾಗಿದೆ. ಕೊಲೆಯಾದ ಸತೀಶ್ ಪಾಟೀಲ್ ಮರಣೋತ್ತರ ಪರೀಕ್ಷೆ ಇಂದು ಹತ್ತು ಗಂಟೆಗೆ ನಡೆಯಲಿದ್ದು, ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ. ಅಂತ್ಯಕ್ರಿಯೆ ನಡೆಯುವವರೆಗೂ ಗ್ರಾಮ ಬೂದಿ ಮುಚ್ಚಿದ ಕೆಂಡದಂತ್ತಾಗಿದೆ. ಸದ್ಯ ಕೆಎಲ್‌ಇ ಆಸ್ಪತ್ರೆ ಶವಾಗಾರದಲ್ಲಿರುವ ಸತೀಶ್ ಪಾಟೀಲ್ ಮೃತದೇಹವಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಈವರೆಗೂ ಇಪ್ಪತ್ತಕ್ಕೂ ಅಧಿಕ ಜನರನ್ನ ಪೊಲೀಸರು ಬಂಧಿಸಿದ್ದು, ಸತೀಶ್ ಪಾಟೀಲ್ ಕೊಲೆ ಕೇಸ್ನಲ್ಲಿ ಶಾಮೀಲಾದವರು ಬಂಧನ ಬೀತಿಯಿಂದ ಪುರುಷರು, ಯುವಕರು ಗ್ರಾಮ ತೊರೆದಿದ್ದಾರೆ. ಬಾಳು ನಿಲಜಕರ್, ಲಖನ್ ನಿಲಜಕರ್, ಮಹಾಂತೇಶ್ ನಿಲಜಕರ್, ಅನಂತ ಕೂಟ್ರೇ, ಅರ್ನವ್ ಕೂಟ್ರೇ, ದಾವಲತ್ ಮುತಗೇಕರ್, ಸುರಜ್ ಕೇಶವ್ ಪಾಟೀಲ್, ಬಸವಂತ ಮುತಗೇಕರ್, ಭರತ್ ಪಾಟೀಲ್, ಅಶೋಕ ಪಾಟೀಲ್, ತೋಪನ್ನಾ ಪಾಟೀಲ್ ಸೇರಿ ಮೂವತ್ತಕ್ಕೂ ಅಧಿಕ ಜನ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಕೊಲೆಯ ನಂತರ ನಿಲಜಕರ್ ಕುಟುಂಬಸ್ಥರು ಊರು ಬಿಟ್ಟಿದ್ದಾರೆ. ಮೃತ ಸತೀಶ್ ಪಾಟೀಲ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈಗಷ್ಟೇ ಪತ್ನಿಗೆ ಸತೀಶ್ ಪಾಟೀಲ್ ಮೃತಪಟ್ಟ ವಿಚಾರ ಗೊತ್ತಾಗಿದ್ದು, ಮನೆ ಮುಂಭಾಗದಲ್ಲಿ ಬಿದ್ದು ಸತೀಶ್ ಪಾಟೀಲ್ ಪತ್ನಿ ಸ್ನೇಹಾ ಗೋಳಾಡುತ್ತಿದ್ದಾಳೆ.
ಪೊಲೀಸರ ವಿರುದ್ಧ ಬಂಧಿತ ಮಕ್ಕಳ ತಾಯಂದಿರ ಆಕ್ರೋಶ
ಮನೆಯಲ್ಲಿದ್ದ ಮಕ್ಕಳನ್ನ ಅಪರಾಧಿಗಳಂತೆ ಕರೆದೊಯ್ದಿದ್ದಾರೆ. ಪೊಲೀಸರ ವಿರುದ್ಧ ಬಂಧಿತ ಮಕ್ಕಳ ತಾಯಂದಿರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದು, ತಮ್ಮ ಮಕ್ಕಳನ್ನ ಬಿಡುವಂತೆ ಮಹಿಳೆಯರು ಆಸ್ಪತ್ರೆ ಬಂದಿದ್ದಾರೆ. ಮಹಿಳೆಯರನ್ನ ಗ್ರಾಮಕ್ಕೆ ಕರೆತಂದು ಪೊಲೀಸರು ಬಿಟ್ಟಿದ್ದಾರೆ.
ಚಾಮರಾಜಪೇಟೆಯಲ್ಲಿ ಜುಗ್ಗುರಾಜ್ ಜೈನ್ ಕೊಲೆ ಪ್ರಕರಣ: 5ನೇ ಆರೋಪಿಯ ಬಂಧನ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಜುಗ್ಗುರಾಜ್ ಜೈನ್ ಕೊಲೆ ಪ್ರಕರಣ ಹಿನ್ನೆಲೆ 5ನೇ ಆರೋಪಿ ಓಂ ರಾಮ್ ದೇವಸಿ ಬಂಧನ ಮಾಡಲಾಗಿದೆ. ಬಂಧಿತ ಆರೋಪಿಯಿಂದ 1.4 ಕೆಜಿ ಚಿನ್ನ ಮತ್ತು 14 ಲಕ್ಷ ನಗದನ್ನು ರಾಜಸ್ಥಾನದ ರೋಹತ್ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಹಿಂದೆ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿತ್ತು. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇ 24ರ ರಾತ್ರಿ ನಡೆದಿದ್ದ ಜುಗ್ಗುರಾಜ್ ಜೈನ್ ಕೊಲೆಯಾಗಿತ್ತು. ಮನೆ ಕೆಲಸಕ್ಕಿದ್ದ ಬಿಜೊರಾಮ್ ಹಾಗೂ ಸಹಚರರು ಕೊಲೆ ಮಾಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Sun, 19 June 22