
ಬೆಳಗಾವಿ: ಹಿಂದೂ ಪದವು ಭಾರತೀಯ ಮೂಲದ್ದಲ್ಲ. ಪರ್ಷಿಯಾ ಮೂಲದ ಈ ಪದಕ್ಕೆ ಅತ್ಯಂತ ಹೀನ ಅರ್ಥವಿದೆ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಇದೀಗ ಈ ಪದದ ಯಥಾರ್ಥ ವಿಶ್ಲೇಷಣೆಗಾಗಿ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿ ಪತ್ರ ಬರೆದಿದ್ದಾರೆ. ‘ನನ್ನ ಹೇಳಿಕೆ ಮತ್ತು ದಾಖಲೆಗಳ ಬಗ್ಗೆ ಚರ್ಚೆ ಆಗುತ್ತಿದೆ. ನನ್ನ ಹೇಳಿಕೆಯಲ್ಲಿ ತಪ್ಪಿದೆಯಾ ಎನ್ನುವ ಬಗ್ಗೆ ಪರಿಶೀಲಿಸಿ, ಸಾಬೀತುಪಡಿಸಿ’ ಎಂದು ಪತ್ರದಲ್ಲಿ ಕೋರಿರುವುದಾಗಿ ಅವರು ಹೇಳಿದರು. ನನ್ನ ಹೇಳಿಕೆಯ ಬಗ್ಗೆ ನಮ್ಮ ಪಕ್ಷದ ವರಿಷ್ಠರಿಗೂ ಮನವರಿಕೆ ಮಾಡಿಕೊಡುತ್ತೇನೆ. ನನ್ನ ಹೇಳಿಕೆ ತಪ್ಪು ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಅವರು ಗೋಕಾಕ ಪಟ್ಟಣದಲ್ಲಿ ‘ಟಿವಿ9’ಗೆ ಪ್ರತಿಕ್ರಿಯಿಸಿದರು.
ಹಿಂದೂ ಪದದ ಅರ್ಥದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದ ಸತೀಶ್ ಜಾರಕಿಹೊಳಿ
ಹಿಂದೂ ಶಬ್ದಕ್ಕೆ ಇರುವ ಅರ್ಥ ಸೋತವರು ಅಥವಾ ಗುಲಾಮರು ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ವಿಕಿಪೀಡಿಯಾ ಮತ್ತು ಕೋರಾ (Quora) ಆನ್ಲೈನ್ ವೇದಿಕೆಗಳಲ್ಲಿರುವ ವಿವರಗಳ ಜೊತೆಗೆ ‘ಬಸವ ಭಾರತ’ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್.ಪಾಟೀಲ್ ಬರೆದ ಲೇಖನವನ್ನೂ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. ‘ನನ್ನ ಹೇಳಿಕೆಯ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚೆಯಾಗುತ್ತಿಲ್ಲ’ ಎಂದು ವಿಷಾದಿಸಿದ್ದರು. ‘ನೀವು ಹಿಂದೂ ಧರ್ಮಕ್ಕೆ ಸೇರಿದವರೇ’ ಎಂಬ ಪ್ರಶ್ನೆಗೆ ಉತ್ತರಿಸುವಾಗ, ‘ನಾನು ಭಾರತೀಯ’ ಎಂದು ಹೇಳಿದ್ದರು.
ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದ ಅವರು, ‘ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನೇ ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು. ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲು ಹಾಕಿದ್ದರು.
Published On - 12:47 pm, Wed, 9 November 22