ಸ್ವಗ್ರಾಮ ತಲುಪಿದ ಸಂತೋಷ್ ಮೃತದೇಹ: ಬಡಸದಲ್ಲಿ ಕುಟುಂಬಸ್ಥರ ಆಕ್ರಂದನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 14, 2022 | 8:18 AM

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ (Santosh Patil) ಅವರ ಪಾರ್ಥಿವ ಶರೀರ ಗುರುವಾರ ತಾಲ್ಲೂಕಿನ ಬಡಸ ಗ್ರಾಮಕ್ಕೆ ತಲುಪಿತು.

ಸ್ವಗ್ರಾಮ ತಲುಪಿದ ಸಂತೋಷ್ ಮೃತದೇಹ: ಬಡಸದಲ್ಲಿ ಕುಟುಂಬಸ್ಥರ ಆಕ್ರಂದನ
ಬೆಳಗಾವಿ ಜಿಲ್ಲೆ ಬಡಸ ಗ್ರಾಮದಲ್ಲಿ ಸಂತೋಷ್ ಸಂಬಂಧಿಕರ ಆಕ್ರಂದನ
Follow us on

ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ (Santosh Patil) ಅವರ ಪಾರ್ಥಿವ ಶರೀರ ಗುರುವಾರ ತಾಲ್ಲೂಕಿನ ಬಡಸ ಗ್ರಾಮಕ್ಕೆ ತಲುಪಿತು. ಸಂತೋಷ್ ಮೃತದೇಹದ ಎದುರು ತಾಯಿ, ಪತ್ನಿ ಕಣ್ಣೀರಿಟ್ಟರು. ಮನೆಯ ಮುಂಭಾಗದಲ್ಲೇ ಪಾರ್ಥಿವ ಶರೀರವಿಟ್ಟ ಕುಟುಂಬದ ಸದಸ್ಯರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ದೇಹವನ್ನು ತರಲಾಯಿತು. ಉಡುಪಿಯಿಂದ ಮೃತದೇಹದೊಂದಿಗೆ ಬಂದಿದ್ದ ಮೃತನ ಸೋದರ ಬಸವನಗೌಡ ಪೊಲೀಸ್ ಆಯುಕ್ತ ಕಚೇರಿಗೆ ಮೃತದೇಹ ಕೊಂಡೊಯ್ಯಲು ಯತ್ನಿಸಿದ್ದ. ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯನ್ನು ಪೊಲೀಸರು ತಡೆದಾಗ, ಪರಸ್ಪರ ವಾಕ್ಸಮರ ನಡೆದಿತ್ತು. ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಹೂಟ್ಟೂರು ಬಡಸಾದತ್ತ ಸಂತೋಷ್ ಪಾಟೀಲ್ ಮೃತದೇಹವನ್ನು ಕೊಂಡೊಯ್ಯಲಾಯಿತು. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆಯೇ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಎಂ.ಕೆ.ಹುಬ್ಬಳ್ಳಿ ಸಮೀಪ ಪಾರ್ಥಿವ ಶರೀರವಿದ್ದ ಆ್ಯಂಬುಲೆನ್ಸ್​ ವಾಹನವನ್ನು ಡಿಸಿಪಿ ರವೀಂದ್ರ ಗಡಾದೆ ತಡೆದಿದ್ದರು. ಇದನ್ನು ಮೃತ ಸಂತೋಷ್ ಪಾಟೀಲ ಸೋದರ ಬಸವನಗೌಡ ವಿರೋಧಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ‘ಬೇಕಿದ್ದರೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡಿ. ನಮಗೆ ನ್ಯಾಯ ಬೇಕು. ಪಾರ್ಥಿವ ಶರೀರ ಕಮೀಷನರ್ ಕಚೇರಿಗೆ ತೆಗೆದುಕೊಂಡು ಹೋಗುತ್ತೇವೆ. ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ’ ಎಂದು ಸಂತೋಷ್ ಪಾಟೀಲರ ಸೋದರ ವಾಗ್ವಾದ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ನಂತರ ಬಸವನಗೌಡ ತಮ್ಮ ಪಟ್ಟು ಸಡಿಲಿಸಿದರು. ಮೃತ ದೇಹವು ಬಡಸ ಗ್ರಾಮ ತಲುಪುವವರೆಗೆ ಪೊಲೀಸರ ಬೆಂಗಾವಲು ಒದಗಿಸಲಾಗಿತ್ತು.

ಉಡುಪಿಯಲ್ಲಿ ಸಂತೋಷ್ ಮೃತದೇಹ ಹಸ್ತಾಂತರ

ಉಡುಪಿ: ಗುತ್ತಿಗೆದಾರ ಸಂತೋಷ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಪರ್ಸೆಂಟೇಜ್ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಹಸ್ತಾಂತರ ಮಾಡಲಾಗಿದೆ. ಬಳಿಕ, ಹವಾನಿಯಂತ್ರಿತ ಅಂಬುಲೆನ್ಸ್​ನಲ್ಲಿ ಮೃತದೇಹ ಬೆಳಗಾವಿಗೆ ರವಾನೆ ಮಾಡಲಾಗಿದೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಮೃತದೇಹ ಹಿಂಡಲಗಾ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಂತೋಷ್ ಪಾಟೀಲ್ ಕುಟುಂಬಸ್ಥರು ಮೃತದೇಹದ ಜೊತೆ ಹೊರಟಿದ್ದಾರೆ.

ಇದಕ್ಕೂ ಮೊದಲು ಮರಣೋತ್ತರ ಪರೀಕ್ಷೆ ನಡೆಸಿ ಶವ ಕೊಂಡೊಯ್ಯಲು ಸೂಚನೆ ಕೊಡಲಾಗಿತ್ತು. ಆದರೆ, ಕೆಎಂಸಿ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಿಳಿ ಹೇಳಿದರೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿರಲಿಲ್ಲ. ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿ ಆರೋಪಿಗಳನ್ನು ಬಂಧಿಸಲಿ. ನಂತರ ಶವ ಕೊಂಡೊಯ್ಯುವುದಾಗಿ ಕುಟುಂಬಸ್ಥರು ಹೇಳಿದ್ದರು. ಆರೋಪಿಗಳನ್ನು ಬಂಧಿಸುವವರೆಗೂ ಶವ ಪಡೆಯುವುದಿಲ್ಲ. ಆಸ್ಪತ್ರೆಯಿಂದ ಶವ ತಗೊಂಡು ಹೋದರೆ ನ್ಯಾಯ ಸಿಗಲ್ಲ. ಆರೋಪಿಗಳನ್ನು ಬಂಧಿಸಿದ್ರೆ ಮಾತ್ರ ಶವ ಪಡೆಯುತ್ತೇವೆ. ಅಲ್ಲಿವರೆಗೂ ಮೃತದೇಹವನ್ನು ಸಾಗಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ. ಸಂತೋಷ್​​ ಶವದ ಮರಣೋತ್ತರ ಪರೀಕ್ಷೆ ಪೂರೈಸಿದ್ದೇವೆ. ಸಂತೋಷ್​ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದೇವೆ. ಉಡುಪಿ ಪೊಲೀಸರು ಬೆಳಗಾವಿಯವರೆಗೂ ತೆರಳಲಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಮೃತದೇಹವನ್ನ ಕಳುಹಿಸಲಾಗಿದೆ. ಸೂಕ್ತ ತನಿಖೆ ಮಾಡುವುದಾಗಿ ಕುಟುಂಬಸ್ಥರಿಗೆ ಹೇಳಿದ್ದೇವೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ; ಈಶ್ವರಪ್ಪರನ್ನು ಬಂಧಿಸಲಿ: ಸಂತೋಷ್ ಮನೆಗೆ ಭೇಟಿ ಬಳಿಕ ಕೈ ನಾಯಕರ ಹೇಳಿಕೆ

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ; ಬಿ.ಎಲ್. ಸಂತೋಷ್‌ಗೆ ಬುಲಾವ್

Published On - 7:52 am, Thu, 14 April 22