ಸಂತೋಷ್ ಪಾಟೀಲ್ ಮೃತದೇಹ ಗುಣಿಗಿಟ್ಟ ಮೇಲೆ ಹೈಡ್ರಾಮ: ಗೊಂದಲದ ನಡುವೆ ಸಮಾಧಿಗೆ ಜೆಸಿಬಿಯಿಂದ ಮಣ್ಣು

ಸಂತೋಷ್ ಪಾಟೀಲ್ ಮೃತದೇಹ ಗುಣಿಗಿಟ್ಟ ಮೇಲೆ ಹೈಡ್ರಾಮ: ಗೊಂದಲದ ನಡುವೆ ಸಮಾಧಿಗೆ ಜೆಸಿಬಿಯಿಂದ ಮಣ್ಣು
ಸಂತೋಷ್ ಮೃತದೇಹವನ್ನು ಸಮಾಧಿಗೆ ಕುಣಿಗೆ ಇಳಿಸಿದ ಮೇಲೆ ವಾಗ್ವಾದ ನಡೆಯಿತು.

ಇಂಥ ವಿಷಯಗಳಲ್ಲಿ ರಾಜಕೀಯ ಮಾಡಿ ನಮಗೆ ಏನೂ ಆಗಬೇಕಿಲ್ಲ. ಸಂತೋಷ್ ನಮ್ಮ ಕಾರ್ಯಕರ್ತನೂ ಅಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಕಾಳಜಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಏರು ದನಿಯಲ್ಲಿ ವಾಗ್ವಾದಕ್ಕಿಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 14, 2022 | 9:41 AM


ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಶವಸಂಸ್ಕಾರದ ಅಂತಿಮ ಹಂತದಲ್ಲಿಯೂ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು, ಸಂತೋಷ್ ಪಾಟೀಲ್ ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ಖಾತ್ರಿ ಕೊಡಬೇಕು, ಮೃತನ ಪತ್ನಿಗೆ ಸರ್ಕಾರಿ ಕೆಲಸ ಘೋಷಿಸಬೇಕು. ಅಲ್ಲಿಯವರೆಗೆ ಸಮಾಧಿಗೆ ಮಣ್ಣು ಹಾಕಲು ಅವಕಾಶ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಅಡಿವೇಶ ಇಟಗಿ ಆಕ್ರೋಶದಿಂದ ಮಾತನಾಡಿದರು.

ಈ ವೇಳೆ ಗ್ರಾಮಸ್ಥರು, ‘ಶವದ ಎದುರು ರಾಜಕಾರಣ ಬೇಡ’ ಎಂದು ತಾಕೀತು ಮಾಡಿದರು. ‘ಇಂಥ ಸ್ಥಳದಲ್ಲಿ, ಇಂಥ ವಿಷಯಗಳಲ್ಲಿ ರಾಜಕೀಯ ಮಾಡಿ ನಮಗೆ ಏನೂ ಆಗಬೇಕಿಲ್ಲ. ಸಂತೋಷ್ ನಮ್ಮ ಕಾರ್ಯಕರ್ತನೂ ಅಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಕಾಳಜಿ’ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಏರು ದನಿಯಲ್ಲಿ ವಾಗ್ವಾದಕ್ಕಿಳಿದರು. ಪೂಜೆ ಮುಗಿದಿದೆ ಎಲ್ಲಾ ಹೆಣ್ಣುಮಕ್ಕಳು ಮನೆಗೆ ಹೋಗಿ. ಬಡಸ ಗ್ರಾಮದಲ್ಲಿ ಗಂಡು ಮಕ್ಕಳು ಇದ್ದರೆ ನಮ್ಮ ಜತೆ ಬನ್ನಿ. ಬಿಜೆಪಿ ನಾಯಕರು ಯಾರಾದರೂ ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೂ ಮಣ್ಣು ಹಾಕುವುದಕ್ಕೆ ನಾವು ಬಿಡುವುದಿಲ್ಲ ಎಂದು ಅಡಿವೇಶ ಇಟಗಿ ಮತ್ತೊಮ್ಮೆ ಘೋಷಿಸಿದರು. ಮಣ್ಣು ಮುಚ್ಚಲು ಬಿಡುವುದಿಲ್ಲ ಹರಿಹಾಯ್ದರು.

ಶಿವಮೊಗ್ಗದಲ್ಲಿ ಸತ್ತ ನಿಮ್ಮ ಕಾರ್ಯಕರ್ತನಿಗೆ ಕೋಟಿಕೋಟಿ ಕೊಟ್ಟಿದ್ದೀರಿ. ಇವನೇನು ಪಾಪ ಮಾಡಿದ್ದ. ಇವನಿಗೂ ಪರಿಹಾರ ಕೊಡಿ ಎಂದು ಹರ್ಷ ಸಾವಿಗೆ ಪರಿಹಾರ ಘೋಷಿಸಿದ ವಿಚಾರವನ್ನು ಪ್ರಸ್ತಾಪಿಸಿದರು. ಕೊನೆಗೆ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ, ಸಮಾಧಾನಪಡಿಸಿದರು. ಜೆಸಿಬಿ ಮೂಲಕ ಸಮಾಧಿಗೆ ಮಣ್ಣು ಹಾಕಿಸಲಾಯಿತು. ಸಂತೋಷ ಪಾಟೀಲ್ ಅವರ ಜಮೀನಿನಲ್ಲೇ ಅಂತ್ಯ ಸಂಸ್ಕಾರ ನಡೆಯಿತು. ಧರಣಿ ಕುಳಿತಿದ್ದವರನ್ನು ಗ್ರಾಮಸ್ಥರು ಪಕ್ಕಕ್ಕೆ ತಳ್ಳಿ, ಸಮಾಧಿಗೆ ಮಣ್ಣು ಮುಚ್ಚಿಸಿದರು. ಮೊದಲು ಅಂತಿಮ ಸಂಸ್ಕಾರದ ವಿಧಿಗಳು ನೆರವೇರಲಿ ಆಮೇಲೆ ಹೋರಾಟ ಮಾಡೋಣ ಎಂದು ಮನವೊಲಿಸಲು ಪ್ರಯತ್ನಿಸಿದರು.

ಕುಟುಂಬಸ್ಥರ ನಡುವೆ ವಾಗ್ವಾದ

ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮೃತ ಸಂತೋಷ್ ಪಾಟೀಲ್ (Santosh Patil) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ಬಡಸ ಗ್ರಾಮದಲ್ಲಿ ಗುರುವಾರ ಮುಂಜಾನೆ ವಾಗ್ವಾದ ನಡೆಯಿತು. ಮೃತದೇಹದ ಎದುರು ನಡೆದ ಹಲವು ನಾಟಕೀಯ ಬೆಳವಣಿಗೆಗಳಿಗೆ ಬಡಸ ಗ್ರಾಮದ ಜನರು ಸಾಕ್ಷಿಯಾದರು. ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸುತ್ತಿದ್ದಂತೆ ಹಣೆ ಬಡೆದುಕೊಂಡ ಕುಟುಂಬದ ಸದಸ್ಯರು ಕಣ್ಣೀರಿಟ್ಟರು. ಅಂತಿಮ ಸಂಸ್ಕಾರ ಮಾಡುವ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಮೃತನ ಸೋದರ ಬಸವನಗೌಡ ಪಾಟೀಲ್ ಚರ್ಚೆ ಮಾಡಿದರು. ಶವದ ಅಂತಿಮ ಸಂಸ್ಕಾರ ಮಾಡುವುದು ಬೇಡ. ಶವವನ್ನು ಮನೆಯ ಎದುರೇ ಇರಿಸಿಕೊಂಡು ಪ್ರತಿಭಟನೆ ಮಾಡೋಣ. ಆರೋಪಿಗಳ ಬಂಧನ ಮತ್ತು ಪರಿಹಾರ ಘೋಷಣೆ ನಂತರ ಅಂತ್ಯಸಂಸ್ಕಾರ ಮಾಡೋಣ ಎಂದು ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಸಲಹೆ ಮಾಡಿದರು. ಶಾಸಕಿಯ ಸಲಹೆಯ ನಂತರ ಕುಟುಂಬದ ಸದಸ್ಯರ ನಡುವೆ ಜಗಳ ಆರಂಭವಾಯಿತು. ಕೂಡಲೇ ಮಧ್ಯಸ್ಥಿಕೆ ವಹಿಸಿದ ಗ್ರಾಮದ ಮುಖಂಡರೂ ಸಮಾಧಾನಪಡಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಹ ಅಂತಿಮ ನಮನ ಸಲ್ಲಿಸಿದರು.

ಮನೆ ಮುಂಭಾಗದಲ್ಲಿ ಸಂತೋಷ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಶವದ ಮೇಲೆ ಕೇಸರಿ ಶಾಲು ಹೊದೆಸಿದರು. ಪುರೋಹಿತರು ಹೂ, ಬಿಲ್ವಪತ್ರೆ ಹಾಕಿ ಪೂಜೆ ಮಾಡಿದರು. ಸಂತೋಷ್ ಅವರ ಸ್ನೇಹಿತರು ಮತ್ತು ಸಂಬಂಧಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಒಂದು ಹಂತದಲ್ಲಿ ಸಾವಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಬೇಕೆಂದು ಆಗ್ರಹಿಸಿ, ಶವ ಇಡಲು ಕುಟುಂಬಸ್ಥರು ಮುಂದಾಗಿದ್ದರು. ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕೆಂದು ಕೆಲವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಹಿಳೆಯರು ಮುಂದೆ ಬಂದು ಎಲ್ಲರನ್ನೂ ಸಮಾಧಾನ ಪಡಿಸಲು ಯತ್ನಿಸಿದರು. ಮನೆ ಎದುರು ಗಲಾಟೆ ಆಗುವುದು ಬೇಡ ಎಂದು ಗೋಗರೆದರು. ಈ ವೇಳೆ ಕುಟುಂಬಸ್ಥರ ಮಧ್ಯೆ ಪರಸ್ಪರ ನೂಕಾಟ, ತಳ್ಳಾಟ ನಡೆಯಿತು. ನ್ಯಾಯ ಸಿಗುವವರೆಗೂ ಹೋರಾಟ ಮಾಡೋಣ ಎಂದು ಕೆಲವರು ಪಟ್ಟು ಹಿಡಿದರು. ಕೊನೆಗೆ ಗ್ರಾಮದ ಹಿರಿಯರು ಎಲ್ಲರನ್ನೂ ಸಮಾಧಾನಪಡಿಸಿದರು.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ; ಬಿ.ಎಲ್. ಸಂತೋಷ್‌ಗೆ ಬುಲಾವ್

ಇದನ್ನೂ ಓದಿ: ಇದು ಕಾಂಗ್ರೆಸ್ ರೂಪಿಸಿದ ಸಂಚು: ಮೃತ ಸಂತೋಷ್ ಹಿನ್ನೆಲೆ ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್

Follow us on

Related Stories

Most Read Stories

Click on your DTH Provider to Add TV9 Kannada