ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ: ಪ್ರತಿಭಟನೆಗೆ ಸಜ್ಜಾದ ಉತ್ತರ ಕರ್ನಾಟಕ ರೈತರು

| Updated By: ಗಣಪತಿ ಶರ್ಮ

Updated on: Dec 01, 2023 | 6:31 PM

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ದಶಕವೇ ಕಳೆದು ಹೋಗಿದೆ. ಯಾವ ಉದ್ದೇಶಕ್ಕಾಗಿ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲಾಗುತ್ತೋ ಆ ಉದ್ದೇಶ ಈಡೇರುತ್ತಿಲ್ಲ ಎಂಬ ನೋವು ಉತ್ತರ ಕರ್ನಾಟಕ ಜನರಲ್ಲಿ ಇದೆ.

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ: ಪ್ರತಿಭಟನೆಗೆ ಸಜ್ಜಾದ ಉತ್ತರ ಕರ್ನಾಟಕ ರೈತರು
ಸುವರ್ಣ ವಿಧಾನಸೌಧ
Follow us on

ಬೆಳಗಾವಿ, ಡಿಸೆಂಬರ್ 1: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha) ಚಳಿಗಾಲದ ಅಧಿವೇಶನಕ್ಕೆ (Winter Session) ದಿನಗಣನೆ ಆರಂಭವಾಗಿದೆ. ಉತ್ತರ ಕರ್ನಾಟಕದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಲು ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಆದರೆ ಈ ನಿಟ್ಟಿನಲ್ಲಿ ಈ ಹಿಂದಿನ ಅಧಿವೇಶನಗಳಲ್ಲಿ ಗಮನಾರ್ಹ ಚರ್ಚೆ ಆಗದಿರೋ ನೋವು ಉತ್ತರ ಕರ್ನಾಟಕ ಜನರಲ್ಲಿದೆ. ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲೇ ಹಲವು ಸಮಸ್ಯೆಗಳಿದ್ದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ದಶಕವೇ ಕಳೆದು ಹೋಗಿದೆ. ಯಾವ ಉದ್ದೇಶಕ್ಕಾಗಿ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲಾಗುತ್ತೋ ಆ ಉದ್ದೇಶ ಈಡೇರುತ್ತಿಲ್ಲ ಎಂಬ ನೋವು ಉತ್ತರ ಕರ್ನಾಟಕ ಜನರಲ್ಲಿ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಅದೆಷ್ಟೋ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಸಪ್ತನದಿಗಳು ಹರಿದರೂ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದರಿಂದ ಇದರ ಸದುಪಯೋಗ ಪಡೆಯಲು ರೈತರಿಗೆ ಆಗುತ್ತಿಲ್ಲ. ಅದರಲ್ಲೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕರಗಾಂವ ಏತನೀರಾವರಿ ಯೋಜನೆ, ಖಿಳೇಗಾಂವ ಬಸವೇಶ್ವರ ಏತನೀರಾವರಿ ಯೋಜನೆ, ಅಮ್ಮಾಜೇಶ್ವರಿ ಏತನೀರಾವರಿ ಯೋಜನೆ ಹೀಗೆ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಬಾರಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ಚಿಕ್ಕೋಡಿ ಉಪವಿಭಾಗದಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ತೋರಣಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೃಷ್ಣಾ ನದಿಯಿಂದ ನೀರು ತಂದು ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್​ಲೈನ್ ದುರಸ್ತಿ ಕಾರ್ಯ ಮಾಡಬೇಕಾಗಿದೆ. ಇದೇ ರೀತಿ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿದ್ದು ಈ ಬಾರಿಯ ಅಧಿವೇಶನದಲ್ಲಿ ಚರ್ಚಿಸಿ ದುರಸ್ತಿ ಕಾರ್ಯಕ್ಕೆ ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಜಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಆಗ್ರಹಿಸಿದ್ದಾರೆ.

ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಮೊದಲ ದಿನವೇ, ಅಂದರೆ ಡಿಸೆಂಬರ್ 4ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸುವುದಾಗಿ ರೈತ ಮುಖಂಡ ಮಂಜುನಾಥ ಪರಗೌಡ ತಿಳಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹುಕ್ಕೇರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದರು. ಈ ವೇಳೆ ಬರಗಾಲ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ಈ ಬಾರಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬೇಸಿಗೆಗೂ ಮೊದಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜನವರಿ ವೇಳೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಕೆಲವು ಕಡೆ ಸಮಸ್ಯೆ ಇಲ್ಲ ಎಂದಿದ್ದಾರೆ.

ಕೆಲ ಪ್ರಭಾವಿ ರಾಜಕಾರಣಿಗಳು ಹಿಡಕಲ್ ಜಲಾಶಯದಿಂದ ತಮ್ಮ ತಮ್ಮ ಕ್ಷೇತ್ರಗಳಿಗೆ ನೀರು ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಆಗಬೇಕಿದ್ದರೆ ನೀರು ನಿರ್ವಹಣಾ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಆಗಬೇಕು. ಈಗ ನೀರು ಬಿಡುತ್ತಿಲ್ಲ. ಅಧಿವೇಶನ ಬಳಿಕ ಸಭೆ ನಡೆಸಿ ನೀರು ಬಿಡುಗಡೆ ಬಗ್ಗೆ ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಇನ್ನು ಪ್ರತಿ ಗ್ರಾಮ ಪಂಚಾಯತಿಗೆ ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಖರೀದಿಗೆ ಸೂಚನೆ ನೀಡಿದ್ದೇವೆ. ಬೋರ್​ವೆಲ್​ ಬಾವಿ ಬಾಡಿಗೆ ಪಡೆದು ನೀರು ಸರಬರಾಜು ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಹಲವು ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಅವೈಜ್ಞಾನಿಕ ಕಾಮಗಾರಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮಾಡಿ ಪಂಚಾಯಿತಿಗೆ ಹಸ್ತಾಂತರಿಸಲು ಹೇಳಿದ್ದೇವೆ. ಇನ್ನೂ ಹಲವೆಡೆ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಾತ್ರವಲ್ಲದೆ, ವಿದೇಶದಲ್ಲೂ ಶಾಲೆಗಳಿಗೆ ಬಂದಿದ್ದ ಬಾಂಬ್​ ಬೆದರಿಕೆ ಸಂದೇಶ

ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಜಾರಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಬಂದು ಆರು ತಿಂಗಳು ಆಗಿದೆ. ಎಲ್ಲಾ ದೊಡ್ಡ ದೊಡ್ಡ ಯೋಜನೆಗಳು ಇವೆ. ಹಂತ ಹಂತವಾಗಿ ಪೂರ್ಣ ಮಾಡ್ತೀವಿ. ಈ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಪ್ರತಿ ಬಾರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಾಗ ಉತ್ತರ ಕರ್ನಾಟಕದ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದ್ರೆ ಅಧಿವೇಶನ ಮುಗಿಯುವ ವೇಳೆ ತಾವು ಇಟ್ಟ ನಿರೀಕ್ಷೆ ಹುಸಿಯಾದ ಬಳಿಕ ನಿರಾಸೆಯಾಗುತ್ತಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನ ಕೇವಲ ಪ್ರವಾಸದ ಅಧಿವೇಶನ ಆಗದೇ ಈ ಬಾರಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿ ಎಂಬುದು ಉತ್ತರ ಕರ್ನಾಟಕದ ಜನರ ಆಗ್ರಹ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ