ಯೋಧ ಪೊಲೀಸ್ ಲಾಂಛನಕ್ಕೆ ಕಾಲಿಂದ ಒದ್ದ ಕಾರಣಕ್ಕೆ ಅರೆಸ್ಟ್: ಬೆಳಗಾವಿ ಎಸ್‌ಪಿ

ಯೋಧ ಪೊಲೀಸ್ ಲಾಂಛನಕ್ಕೆ ಕಾಲಿಂದ ಒದ್ದ ಕಾರಣಕ್ಕೆ ಅರೆಸ್ಟ್: ಬೆಳಗಾವಿ ಎಸ್‌ಪಿ

ಬೆಳಗಾವಿ: ಕೊರೊನಾ ಸೋಂಕು ಕಾಲದಲ್ಲಿ ಮಾಸ್ಕ್ ಧರಿಸದ ಕಾರಣ ಮತ್ತು ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಕ್ಕೆ CRPF ಯೋಧರೊಬ್ಬರನ್ನು ಬಂಧಿಸಿರುವುದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿವೆ. ಈ ಮಧ್ಯೆ ಯೋಧನನ್ನು ಬಂಧಿಸಿರುವುದನ್ನು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಲಾಂಛನಕ್ಕೆ ಕಾಲಿಂದ ಒದ್ದಿರುವ ಕಾರಣಕ್ಕೆ ಯೋಧನ ಅರೆಸ್ಟ್: ಏ.23ರಂದು ಇಬ್ಬರು ಪೇದೆಗಳು ಯಕ್ಸಂಬಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ CRPF ಯೋಧ ಸಚಿನ್ ತನ್ನ ಐದಾರು ಸ್ನೇಹಿತರ ಜತೆ ನಿಂತಿದ್ದರು. ಪೊಲೀಸರನ್ನು ಕಂಡ ತಕ್ಷಣ ಸ್ನೇಹಿತರು ಓಡಿ ಹೋಗಿದ್ದಾರೆ. ಆಗ ಮಾಸ್ಕ್ ಏಕೆ ಧರಿಸಿಲ್ಲ ಎಂದು ಯೋಧನನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಈ ವೇಳೆ ವಾಗ್ವಾದ ನಡೆಸಿ ಕಾಲರ್ ಹಿಡಿದು ಪೇದೆಯ ಹೊಟ್ಟೆಗೆ ಸಚಿನ್ ಒದ್ದಿದ್ದಾನೆ. ಇದಾದ ಬಳಿಕ ಮತ್ತೋರ್ವ ಪೇದೆ ಲಾಠಿ ಬೀಸಿ ಆತನನ್ನು ಅರೆಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ವಿಡಿಯೋ ಮಾತ್ರ ಹರಿದಾಡುತ್ತಿದೆ. ಘಟನೆಯ ಸಂಪೂರ್ಣ ವಿಡಿಯೋ, ಪೊಲೀಸರ ಹೊಟ್ಟೆಗೆ ಒದ್ದಿರುವ, ಬೆಲ್ಟ್ ಮೇಲಿರುವ  ಕರ್ನಾಟಕ ರಾಜ್ಯ ಪೊಲೀಸ್ ಲಾಂಛನಕ್ಕೆ ಕಾಲಿಂದ ಒದ್ದಿರುವ ಗುರುತು ಇರುವ ಫೋಟೋಗಳನ್ನು ಎಸ್‌ಪಿ ಪ್ರದರ್ಶಿಸಿದರು.

ಘಟನೆ ನಡೆದ ದಿನ ಸಚಿನ್​ನನ್ನು ಸದಲಗಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಘಟನೆ ನಡೆದ ದಿನವೇ ಸಿಆರ್‌ಪಿಎಫ್ ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಬಂಧಿಸಿದ ದಿನವೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸದಲಗಾ ಠಾಣೆಯಲ್ಲಿ ಸೆಕ್ಷನ್ 353, 323, 504 ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.

ಯೋಧ ಸಚಿನ್ ಬಿಡುಗಡೆಗೆ ಗಣೇಶ್ ಕಾರ್ಣಿಕ್ ಆಗ್ರಹ: ಸಚಿನ್ ಸಾವಂತ್ ಅರೆ ಮಿಲಿಟರಿ ಪಡೆಗೆ ಸೇರಿದ ಸೈನಿಕನೆಂದು ತಿಳಿದ ನಂತರವೂ ಕಾನೂನು ಕೈಗೆತ್ತಿಕೊಂಡಿದ್ದಾರೆ. ಮಾಸ್ಕ್ ಧರಿಸದ ಒಂದೇ ಕಾರಣಕ್ಕೆ ನಿರಪರಾಧಿಯನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿರುವುದು ದೇಶದ ಕಾನೂನಿಗೆ, ಸಮವಸ್ತ್ರ ಧರಿಸಿದ ಸೈನಿಕರಿಗೆ ಹಾಗೂ ರಾಜ್ಯದ ಪೊಲೀಸ್ ಇಲಾಖೆಗೆ ಒಂದು ಕಪ್ಪುಚುಕ್ಕೆ ಎಂದು ಮಾಜಿ ಎಂಎಲ್​ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೂಡಲೇ ಯೋಧ ಸಚಿನ್ ಸಾವಂತ್ ಅವರನ್ನು ಗೌರವದಿಂದ ಬಿಡುಗಡೆ ಮಾಡಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನ: ಸಿಆರ್‌ಪಿಎಪ್ ಯೋಧ ಸಚಿನ್‌ ಸಾವಂತ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. 14 ದಿನಗಳ ಕಾಲ ಯೋಧನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Published On - 2:26 pm, Mon, 27 April 20

Click on your DTH Provider to Add TV9 Kannada