ಬೆಳಗಾವಿ, ಡಿ.05: ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ ಅರ್ಜುನ ಆನೆ(Arjuna Elephant)ಯ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ(Eshwar Khandre) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯು ಇಂದು(ಡಿ.05) ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಅರ್ಜುನ ಮೃತಪಟ್ಟಿದ್ದ ಎನ್ನಲಾಗಿತ್ತು. ಆದರೆ, ಅರ್ಜುನ ಸಾವಿನ ಬಗ್ಗೆ ಮಾವುತರೊಬ್ಬರು ಹೇಳಿದ ಪ್ರಕಾರ ‘ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ, ಇದೇ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಸಾವಾಗಿದೆ ಎಂದಿದ್ದರು.
ಇನ್ನು ಕಣ್ಣೀರಿಡುತ್ತಲೇ ಮೃತ ಅರ್ಜುನ ಆನೆಯ ಮಾವುತನಾಗಿರುವ ವಿನು ಪೂಜೆ ಸಲ್ಲಿಸಿದರು. ದುಃಖ ತುಂಬಿದ ಮನದಲ್ಲಿಯೇ ಪ್ರದಕ್ಷಿಣಿ ಹಾಕಿ, ದುಃಖದಲ್ಲೇ ಅಂತಿಮ ವಿಧಿವಿಧಾನ ನೆರವೇರಿಸಿದರು. ಹಾಸನ ಜಿಲ್ಲಾಡಳಿತದಿಂದ ಕೂಡ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಯಿತು. ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಡಿಸಿಎಫ್ ಮೋಹನ್ ಕುಮಾರ್ ಸಮ್ಕುಖದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ರಾಜ್ಯ ಅರಣ್ಯ ಇಲಾಖೆ ಭಾಗವಾಗಿ ಅಂತ್ಯಕ್ರಿಯೆಯಲ್ಲಿ ಸಹಾಯಕ ಅರಣ್ಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ತ ಹಾಜರಿದ್ದರು.
ಇದನ್ನೂ ಓದಿ:ನನ್ನ ಆನೆಯನ್ನು ಮೈಸೂರಿಗೆ ಕಳಿಸಿಕೊಡಿ, ಇಲ್ಲ ನನ್ನನ್ನೂ ಅರ್ಜುನ ಜತೆ ಮಣ್ಣು ಮಾಡಿ: ಅಂಗಲಾಚಿದ ಮಾವುತ
ಮೈಸೂರಿನ ಬಳ್ಳೆ ಸಾಕಾನೆ ಶಿಭಿರಕ್ಕೆ ಮೃತ ಅರ್ಜುನ ಆನೆಯನ್ನು ಕೊಂಡೊಯ್ಯಲು ಮಾವುತರು ಒತ್ತಾಯಿಸಿದರೆ, ಇತ್ತ ಸ್ಥಳೀಯರು ಸೂಕ್ತ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ಮಾಡಲು ಆಗ್ರಹಿಸಿದ್ದರು. ಇದಕ್ಕೆ ಒಪ್ಪದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು, ಈ ವೇಳೆ ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಬಳಿಕ ಮೃತಪಟ್ಟ ಸ್ಥಳವಾದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿಯೇ ಅಂತ್ಯಕ್ರಿಯೆ ನಡೆಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ