Viral Video: ಬೆಳಗಾವಿ ಚೆನ್ನಮ್ಮ ಸರ್ಕಲ್​ನಲ್ಲಿ ವ್ಯಕ್ತಿಗೆ ಬೂಟು ಕಾಲಿನಿಂದ ಒದ್ದ ಪೊಲೀಸ್​​, ಫ್ಯಾಕ್ಟ್​​ ಚೆಕ್​ನಲ್ಲಿ ಬಯಲಾಯ್ತು ಅಸಲಿ ಸತ್ಯ

| Updated By: ವಿವೇಕ ಬಿರಾದಾರ

Updated on: Nov 22, 2022 | 12:33 PM

ಬೆಳಗಾವಿಯ ಚೆನ್ನಮ್ಮ ಸರ್ಕಲ್​​ನಲ್ಲಿ ಪೊಲೀಸ್​​ ಅಧಿಕಾರಿಯೊಬ್ಬರು, ವ್ಯಕ್ತಿಗೆ ಬೂಟು​ ಕಾಲಿನಿಂದ ಒದೆಯುವ ವಿಡಿಯೋ ವೈರಲ್​ ಆಗಿದೆ.

Viral Video: ಬೆಳಗಾವಿ ಚೆನ್ನಮ್ಮ ಸರ್ಕಲ್​ನಲ್ಲಿ ವ್ಯಕ್ತಿಗೆ ಬೂಟು ಕಾಲಿನಿಂದ ಒದ್ದ ಪೊಲೀಸ್​​, ಫ್ಯಾಕ್ಟ್​​ ಚೆಕ್​ನಲ್ಲಿ ಬಯಲಾಯ್ತು ಅಸಲಿ ಸತ್ಯ
ವ್ಯಕ್ತಿಗೆ ಬೂಟು ಕಾಲಿನಿಂದ ಒದೆಯುವ ಪೊಲೀಸ್​​
Follow us on

ಬೆಳಗಾವಿ: ಸಾಮಾಜಿಕ ಜಲತಾಣದಲ್ಲಿ ಫೇಕ್​​ ವಿಡಿಯೋಗಳು ಸಾಕಷ್ಟು ವೈರಲ್​ ಆಗಿ ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತವೆ. ಆದರೆ ಈ ವಿಡಿಯೋಗಳ ಕುರಿತು ಫ್ಯಾಕ್ಟ್​​ ಚೆಕ್​ಮಾಡಿದಾಗ ವಿಡಿಯೋದ ಅಸಲಿ ಕಹಾನಿ ಗೊತ್ತಾಗುತ್ತದೆ. ಇದೇ ರೀತಿ ಗಡಿನಾಡು ಬೆಳಗಾವಿಯ (Belagavi) ಹೃದಯ ಭಾಗವಾದ ಚೆನ್ನಮ್ಮ ಸರ್ಕಲ್​​ನಲ್ಲಿ (chennamma circle) ಪೊಲೀಸ್​​ (Police) ಅಧಿಕಾರಿಯೊಬ್ಬರು, ವ್ಯಕ್ತಿಗೆ ಬೂಟು​ ಕಾಲಿನಿಂದ ಒದೆಯುವ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ, ವಿಡಿಯೋ ನೋಡಿದ ಸಾರ್ವಜನಿಕರು ಬೆಳಗಾವಿ ಪೊಲೀಸರಿಗೆ ಹಿಡಿ ಶಾಪ ಹಾಕಲು, ಪೊಲೀಸರ ವಿರುದ್ಧ ಕೆಟ್ಟದಾಗಿ ಕಾಮೆಂಟ್​​ ಹಾಕಲು ಶುರು ಮಾಡಿದ್ದಾರೆ.

ಈ ವಿಷಯ ಬೆಳಗಾವಿ ಪೊಲೀಸ್​ ಇಲಾಖೆ ಗಮನಕ್ಕೂ ಬಂದಿದೆ. ಕೂಡಲೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್​ ಮಾಡಿ “ವಿಡಿಯೋದಲ್ಲಿ ಕಂಡು ಬಂದಿರುವ ದೃಶ್ಯಗಳು ಅಸಲಿ ಅಲ್ಲ. ಇದು ಚಲನಚಿತ್ರದ ಸೀನ್​ನನ್ನು ಚಿತ್ರಿಕರಿಸುವ ಸಮಯದಲ್ಲಿ ತೆಗೆದ ದೃಶ್ಯಾವಳಿಯಾಗಿದೆ. ಇದನ್ನು ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಈ ವಿಡಿಯೋ ಕುರಿತು ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ ಫ್ಯಾಕ್ಟ್​​ ಚೆಕ್​ ಮಾಡಿದ್ದು, ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ “ವಿಡಿಯೋದಲ್ಲಿ ಕಂಡುಬರುವ ದೃಶ್ಯ, ಚಲನಚಿತ್ರವೊಂದರ ಸೀನ್​ ಚಿತ್ರಿಕರಿಸುವ ಸೆರೆ ಹಿಡಿಯಲಾಗಿದೆ” ಎಂದು ಬರೆದುಕೊಂಡಿದೆ.

ಹಾಗೇ ಬೆಳಗಾವಿ ನಗರ ಪೊಲೀಸ್​​ ಇಲಾಖೆ ಈ ಘಟನೆ ಬಗ್ಗೆ ಸುತ್ತೋಲೆ ಹೊರಡಿಸಿ ಟ್ವೀಟ್​​ ಮಾಡಿದ್ದು “ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಹೊಯ್ಸಳ ಚಿತ್ರದ ಚಿತ್ರೀಕರಣದ ವಿಡಿಯೋ ಕ್ಲಿಪ್​​ನಲ್ಲಿ ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಯನ್ನು ಕೆಳಗೆ ತಳ್ಳಿ ಬೂಟುಗಾಲಿನಿಂದ ಒದೆಯುತ್ತಿರುವ ದೃಶ್ಯ ವೈರಲ್ ಮಾಡಿ ನೈಜ ಘಟನೆ ಎಂಬಂತೆ ಬಿಂಬಿಸಲಾಗಿದೆ. ಇದು ಪೊಲೀಸ್ ಇಲಾಖೆಯ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿದ್ದು, ಕಾರಣ ಈ ಬಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ  ಪೋಸ್ಟ್​​ ಅಥವಾ ಕಾಮೆಂಟ್​ ಮಾಡದಂತೆ ಸಾರ್ವಜನಿಕರಲ್ಲಿ ಈ ಮೂಲಕ ಕೋರಲಾಗಿದೆ”, ಎಂದು ಸುತ್ತೋಲೆಯಲ್ಲಿ ತಿಳಿಸಿ, ಪ್ರತಿಯನ್ನು ಟ್ವೀಟ್​ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Tue, 22 November 22