ಬೆಳಗಾವಿ, (ಆಗಸ್ಟ್ 06): ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಸುಲೆನ್ ಟೇಪ್ ಉತ್ಪಾದನೆಯ ಸ್ನೇಹಂ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯ ಲಿಫ್ಟ್‌ನಲ್ಲಿ ಇಂದು(ಆಗಸ್ಟ್ 06) ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಗೆ ವ್ಯಾಪಿಸಿದ್ದು, ಒಳಗೆ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು, ಕಾರ್ಯಚರಣೆ ನಡೆಸಿದ್ದಾರೆ.
ಇನ್ಸುಲೆನ್ ಟೇಪ್ ರೆಡಿ ಮಾಡುವ ಕಾರ್ಖಾನೆ ಇದಾಗಿದ್ದು, ಇಂದು (ಆಗಸ್ಟ್ 06) ಎರಡನೇ ಶಿಫ್ಟ್ ಬಿಡುವ ವೇಳೆ ಏಕಾಏಕಿ ಲಿಫ್ಟ್‌ನಲ್ಲಿ ಸಣ್ಣ ಪ್ರಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಧಗ ಧಗಿಸಿ ಇಡೀ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಆಗಮಿಸಿದ್ದಾರೆ. ಇನ್ನು ಫ್ಯಾಕ್ಟರಿಯೊಳಗೆ ಕಾರ್ಮಿಕರು ಸಿಲುಕಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಐದು ಆ್ಯಂಬುಲೆನ್ಸ್ ಗಳು ಮೊಕ್ಕಂ ಹೂಡಿವೆ.
ಇನ್ನು ಕೆಲ ಕಾರ್ಮಿಕರು ಬೆಂಕಿಯನ್ನು ನೋಡಿ ಹೊರಗಡೆ ಓಡೋಡಿ ಬಂದಿದ್ದರೆ, ಓರ್ವ ಕಾರ್ಮಿಕ ಲಿಪ್ಟ್ ನಲ್ಲಿ ಸಿಲುಕಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಮತ್ತೊಂದೆಡೆ ಪೊಲೀಸ್ ಅಧಿಕಾರಿಗಳು ಕೆಲಸ ಮುಗಿಸಿಕೊಂಡು ಹೋದವರನ್ನು ಸಂಪರ್ಕಿಸಿ ಫ್ಯಾಕ್ಟರಿಯೊಳಗೆ ಯಾರ್ಯಾರು? ಎಷ್ಟು ಮಂದಿ ಇದ್ದರು ಎನ್ನುವ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:46 pm, Tue, 6 August 24