ಬೆಳಗಾವಿ: ಗೋಧಿಯಲ್ಲಿ ವಿಷ ಬೀಜ ಸೇರಿದ ಶಂಕೆ; ಚಪಾತಿ ಸೇವಿಸಿ ಒಂದೇ ಮನೆಯ 7 ಮಂದಿ ಅಸ್ವಸ್ಥ

| Updated By: Skanda

Updated on: Aug 06, 2021 | 7:44 AM

ಗೋಧಿಯಲ್ಲಿ ಆಕಸ್ಮಿಕವಾಗಿ ಮದಗುಣಕಿ (ವಿಷದ) ಬೀಜಗಳು ಸೇರಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಕುಟುಂಬಸ್ಥರು ಅಸ್ವಸ್ಥರಾಗಿರುವ ಕಾರಣ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದಾರೆ.

ಬೆಳಗಾವಿ: ಗೋಧಿಯಲ್ಲಿ ವಿಷ ಬೀಜ ಸೇರಿದ ಶಂಕೆ; ಚಪಾತಿ ಸೇವಿಸಿ ಒಂದೇ ಮನೆಯ 7 ಮಂದಿ ಅಸ್ವಸ್ಥ
ಅಸ್ವಸ್ಥರಾದ ಮಕ್ಕಳು
Follow us on

ಬೆಳಗಾವಿ: ಅರಿವಿಲ್ಲದೇ ವಿಷಪೂರಿತ ಆಹಾರ ತಿಂದ ಒಂದೇ ಕುಟುಂಬದ 7 ಮಂದಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ನರಸಾಪುರ ಗ್ರಾಮದ ದುಂಡವ್ವ ಮಹಾರುದ್ರಪ್ಪ ಕಡ್ಲೆಪ್ಪನವರ ಕುಟುಂಬದ 7 ಜನರೂ ವಿಷಾಹಾರ (Poisonous Food) ಸೇವಿಸಿ ಪರದಾಡಿದ್ದಾರೆ. ತಾಯಿ ದುಂಡವ್ವ ಮಹಾರುದ್ರಪ್ಪ ಕಡ್ಲೆಪ್ಪನವರ (60 ವರ್ಷ), ಮಗ ಲಕ್ಷ್ಮಣ (38 ವರ್ಷ), ಸೊಸೆ ಶಾಂತಾ (28 ವರ್ಷ) ಹಾಗೂ ಮೊಮ್ಮಕ್ಕಳಾದ ತೇಜಸ್ವಿನಿ (12 ವರ್ಷ), ಪಲ್ಲವಿ (10 ವರ್ಷ), ಪ್ರಥಮ್‌ (8 ವರ್ಷ) ಮತ್ತು ಸಾಕ್ಷಿ (6 ವರ್ಷ) ಅಸ್ವಸ್ಥಗೊಂಡಿದ್ದಾರೆ. ಸದ್ಯ ಅವರೆಲ್ಲರಿಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಊಟದಲ್ಲಿ ಯಾವ ರೀತಿ ವಿಷ ಪದಾರ್ಥ ಸೇರಿದೆ ಎನ್ನುವುದಕ್ಕೆ ನಿಖರ ಮಾಹಿತಿ ಇಲ್ಲವಾದರೂ ಗೋಧಿಯಲ್ಲಿ ಮಿಶ್ರಿತವಾಗಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ. ಸೊಸೆ ಶಾಂತಾ ಕಡ್ಲೆಪ್ಪನವರ ಇತ್ತೀಚೆಗೆ ಧಾರವಾಡ ಜಿಲ್ಲೆಯ ತವರು ಮನೆಗೆ ಹೋಗಿದ್ದ ವೇಳೆ ಅಲ್ಲಿಂದ ಗೋಧಿ ತಂದಿದ್ದರು. ಆ ಗೋಧಿಯಲ್ಲಿ ಆಕಸ್ಮಿಕವಾಗಿ ಮದಗುಣಕಿ (ವಿಷದ) ಬೀಜಗಳು ಸೇರಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಕುಟುಂಬಸ್ಥರು ಅಸ್ವಸ್ಥರಾಗಿರುವ ಕಾರಣ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದಾರೆ.

ಮನೆಯಲ್ಲಿ ಚಪಾತಿ ಸೇವಿಸಿದ ನಂತರ ಎಲ್ಲರಿಗೂ ವಾಂತಿ ಬೇಧಿ ಶುರುವಾಗಿದ್ದು ಕೆಲವೇ ಸಮಯದಲ್ಲಿ ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಅವರೆಲ್ಲರನ್ನೂ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಅಷ್ಟರಲ್ಲಿ ಎಲ್ಲರೂ ಮಾನಸಿಕವಾಗಿ ಅಸ್ವಸ್ತಗೊಂಡವರಂತೆ ವರ್ತಿಸಿದ ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಕುಟುಂಬಸ್ಥರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ವಿಷಾಹಾರ ಸೇವನೆ ಹೇಗಾಯಿತು ಎನ್ನುವ ಬಗ್ಗೆ ಕುಟುಂಬಸ್ಥರು ಏನು ಹೇಳುತ್ತಾರೆ ಎಂದು ನೋಡಬೇಕಿದ್ದು, ಮದಗುಣಕಿ ಬೀಜಗಳೇ ಕಾರಣವೇ? ಅಥವಾ ಬೇರೇನಾದರೂ ಆಗಿರಬಹುದೇ ಎನ್ನುವುದು ನಂತರವಷ್ಟೇ ನಿಖರವಾಗಿ ಗೊತ್ತಾಗಲಿದೆ.

ಇದನ್ನೂ ಓದಿ:
Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ 

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು

(Food Poison all Family members fell sick after eating Chapati in Belagavi)