
ಬೆಳಗಾವಿ, ಅಕ್ಟೋಬರ್ 04: ಅವರಿಬ್ಬರು ಒಡಹುಟ್ಟಿದವರು. ತಮ್ಮನನ್ನ (brother) ಓದಿಸಬೇಕು ಅಂತಾ ಅಣ್ಣ ಕೆಲಸ ಮಾಡುತ್ತಿದ್ದ. ಹತ್ತನೇ ತರಗತಿ ಓದುತ್ತಿದ್ದ ತಮ್ಮನನ್ನ ದೊಡ್ಡ ಅಧಿಕಾರಿ ಮಾಡಬೇಕು ಅಂದುಕೊಂಡಿದ್ದ ಅಣ್ಣನಿಗೆ ಶುಕ್ರವಾರ ಶಾಕ್ ಕಾದಿತ್ತು. ಅನಾರೋಗ್ಯದಿಂದ ತಮ್ಮ ಸಾವನ್ನಪ್ಪಿದ (death) ಎಂಬ ವಿಷಯ ತಿಳಿದು ಅಣ್ಣನ ಹೃದಯವೇ ನಿಂತಿದೆ. ಅಣ್ಣ-ತಮ್ಮ ಸಾವಿನಲ್ಲೂ ಒಂದಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮ ಮನಕಲುಕುವ ಘಟನೆಗೆ ಸಾಕ್ಷಿಯಾಗಿದೆ. ಸತೀಶ್ ಬಾಗನ್ನವರ್ (16) ಅನಾರೋಗ್ಯದ ಕಾರಣದಿಂದ ಮೃತನಾದರೆ, ಆ ಸುದ್ದಿ ತಿಳಿದ ಅಣ್ಣ ಬಸವರಾಜ್ ಬಾಗನ್ನವರ್ (24) ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ನಿಜಕ್ಕೂ ಆಘಾತ ಎದುರಾಗಿದೆ.
ಸತೀಶ್ಗೆ ನಿನ್ನೆ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುಷ್ಟರಲ್ಲಿ ಮೆದುಳಿಗೆ ಜ್ವರ ಏರಿ ಮನೆಯಲ್ಲೇ ಸಾವನ್ನಪ್ಪಿದ್ದ. ತಮ್ಮ ಇನ್ನಿಲ್ಲ ಎನ್ನುವ ಸುದ್ದಿ ಅಣ್ಣ ಬಸವರಾಜ್ ಬಾಗನ್ನವರ್ ಕಿವಿಗೆ ಬಿದ್ದ ತಕ್ಷಣ ಆತನಿಗೆ ಹೃದಯಾಘಾತವಾಗಿ ಅಲ್ಲಿಯೇ ಕುಸಿದು ಬಿದ್ದು, ಪ್ರಾಣಬಿಟ್ಟಿದ್ದಾನೆ. ಅಣ್ತಮ್ಮಂದಿರ ಈ ಸಾವು ಕುಟುಂಬಸ್ಥರಿಗೆ ಬರ ಸಿಡಿಲು ಬಡಿದ ಹಾಗೆ ಆಗಿದ್ದು, ಇಡೀ ಕುಟುಂಬ ದುಖಃದಲ್ಲಿ ಮುಳುಗಿದೆ. ಸಹೋದರರಿಬ್ಬರ ಸಾವು ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿದೆ.
ಇದನ್ನೂ ಓದಿ: ದೇವರ ಕಡೆಯಿಂದ ಹೊಡೆಸುತ್ತೇನೆ: ಚಿತ್ರ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಸತೀಶ್ ಬಾಗನ್ನವರ್ 10ನೇ ತರಗತಿಯಲ್ಲಿ ಓದುತ್ತಿದ್ದು, ಉತ್ತಮ ರೀತಿಯಲ್ಲಿ ಎಲ್ಲರ ಜೊತೆಗೆ ಒಡನಾಟ ಹೊಂದಿದ್ದ. ಇತ್ತ ತಾನೂ ಓದಿಲಿಲ್ಲ ಹೀಗಾಗಿ ಕಷ್ಟಪಟ್ಟು ದುಡಿದು ತಮ್ಮನನ್ನ ಓದಿಸಬೇಕು ಅಂತ ಅಂದುಕೊಂಡಿದ್ದ ಅಣ್ಣ ಬಸವರಾಜ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಮ್ಮನನ್ನ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು ಅಂತಾ ಹಗಲಿರುಳು ಕೆಲಸ ಮಾಡುತ್ತಿದ್ದ. ಆದರೆ ವಿಧಿ ಅವರಿಬ್ಬರ ಬಾಳಲ್ಲಿ ಚೆಲ್ಲಾಟವಾಡಿದೆ.
ಮೃತ ಸಹೋದರರ ಕುಟುಂಬ ಕೃಷಿ ಕೆಲಸ ಮಾಡಿಕೊಂಡಿದ್ದು, ಈವರೆಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಇದೀಗ ಏಕಾಏಕಿ ಇಬ್ಬರು ಅಣ್ತಮ್ಮಂದಿರ ಸಾವು ಕಟುಂಬಸ್ಥರನ್ನ ಶಾಕ್ಗೆ ಇಡು ಮಾಡಿದೆ. ಇತ್ತ ಬಸವರಾಜ್ ಕೂಡ ಮದುವೆಯಾಗಿ ಒಂದು ಮಗುವಿದ್ದು, ಪತ್ನಿ ಇದೀಗ ಗರ್ಭಿಣಿ ಆಗಿದ್ದಾಳೆ. ಅಣ್ತಮ್ಮಂದಿರ ಸಾವಿನ ಸುದ್ದಿ ಕೇಳ್ತಿದ್ದಂತೆ ಬಸವರಾಜ್ ಪತ್ನಿ ಪವಿತ್ರ ಆರೋಗ್ಯದಲ್ಲಿಯೂ ಏರುಪೇರು ಆಗಿತ್ತು. ಕೂಡಲೇ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ಪವಿತ್ರ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ರೂಮ್ನಲ್ಲಿ ಸಿಕ್ಕ ಡೆತ್ ನೊಟ್ ನಲ್ಲಿದೆ?
ಬಡ ಕುಟುಂಬಕ್ಕೆ ಇಬ್ಬರ ಸಾವು ದೊಡ್ಡ ಆಘಾತವಾಗಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಇಬ್ಬರು ಸಹೋದರ ಶವವನ್ನ ಒಂದೇ ಚಿತೆಯಲ್ಲಿ ಮಲಗಿಸಿ ಒಟ್ಟಿಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿ ವಿಧಾನ ನಡೆಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:16 pm, Sat, 4 October 25